ಸುನಿಲ್ ಚೆಟ್ರಿ
ನವದೆಹಲಿ: ಸಿಎಎಫ್‌ಎ ನೇಷನ್ಸ್ ಕಪ್ ಟೂರ್ನಿಗಾಗಿ ಭಾರತ ಫುಟ್‌ಬಾಲ್ ತಂಡದ ನೂತನ ಮುಖ್ಯ ಕೋಚ್ ಖಾಲಿದ್ ಜಮೀಲ್ ಅವರು 35 ಸಂಭಾವ್ಯ ಆಟಗಾರರನ್ನು ಪ್ರಕಟಿಸಿದ್ದು, ಅನುಭವಿ ಸುನಿಲ್ ಚೆಟ್ರಿ ಅವರನ್ನು ಕೈಬಿಡಲಾಗಿದೆ.
ಅಂತರರಾಷ್ಟ್ರೀಯ ನಿವೃತ್ತಿಯಿಂದ ಹಿಂತಿರುಗಿದ ನಂತರ 41 ವರ್ಷದ ಚೆಟ್ರಿ ಆಡಿದ ನಾಲ್ಕು ಪಂದ್ಯಗಳಲ್ಲಿ ನಿರೀಕ್ಷಿತ ಪ್ರದರ್ಶನ ನೀಡದ ಕಾರಣ ಅವರನ್ನು ಕೈಬಿಡಲಾಗಿದೆ ಎನ್ನಲಾಗಿದೆ.
ತಜಿಕಿಸ್ತಾನ ಮತ್ತು ಉಜ್ಬೇಕಿಸ್ತಾನನಲ್ಲಿ ನಡೆಯಲಿರುವ ನೇಷನ್ಸ್ ಕಪ್ ಟೂರ್ನಿಯು ಜಮೀಲ್ ಅವರ ಪಾಲಿಗೆ ಮೊದಲ ಸವಾಲು ಆಗಿದೆ. ಆ ಟೂರ್ನಿಯ ಬಿ ಗುಂಪಿನಲ್ಲಿರುವ ಭಾರತವು, ತಜಿಕಿಸ್ತಾನ (ಆ. 29ರಂದು), ಇರಾನ್ (ಸೆ. 1) ಮತ್ತು ಅಫ್ಗಾನಿಸ್ತಾನ (ಸೆ. 4) ತಂಡಗಳನ್ನು ಎದುರಿಸಲಿದೆ.
ಈ ತಿಂಗಳ ಕೊನೆಯಲ್ಲಿ ನಡೆಯಲಿರುವ ಟೂರ್ನಿಗೆ ತಮ್ಮನ್ನು ಪರಿಗಣಿಸಬೇಡಿ ಎಂದು ಚೆಟ್ರಿ ಅವರೇ ವಿನಂತಿಸಿದ್ದಾರೆಯೇ ಅಥವಾ ಐಎಸ್‌ಎಲ್‌ನಲ್ಲಿ ಅವರು ಪ್ರತಿನಿಧಿಸುವ ಬೆಂಗಳೂರು ಎಫ್‌ಸಿ ತಂಡವು ಇನ್ನೂ ಪೂರ್ವ ಋತುವಿನ ತರಬೇತಿಯನ್ನು ಆರಂಭಿಸದ ಕಾರಣ ಅವರಿಗೆ ವಿಶ್ರಾಂತಿ ನೀಡಲಾಗಿದೆಯೇ ಎಂಬುದು ಗೊತ್ತಾಗಿಲ್ಲ.
ಐಎಸ್‌ಎಲ್ ಭವಿಷ್ಯದ ಬಗ್ಗೆ ಅನಿಶ್ಚಿತತೆ ಇರುವುದರಿಂದ ಬೆಂಗಳೂರು ಎಫ್‌ಸಿ ಇತ್ತೀಚೆಗೆ ತನ್ನ ತಂಡದ ಆಟಗಾರರು ಮತ್ತು ಸಿಬ್ಬಂದಿಗೆ ಸಂಬಳವನ್ನು ಸ್ಥಗಿತಗೊಳಿಸಿತ್ತು.
ಜಮೀಲ್ ಪ್ರಕಟಿಸಿದ ಸಂಭಾವ್ಯ ಆಟಗಾರರ ಪಟ್ಟಿಯಲ್ಲಿ ಬೆಂಗಳೂರು ಎಫ್‌ಸಿ ತಂಡದ ಗೋಲ್‌ಕೀಪರ್ ಗುರುಪ್ರೀತ್ ಸಿಂಗ್ ಸಂಧು, ಡಿಫೆಂಡರ್‌ಗಳಾದ ಚಿಂಗ್ಲೆನ್ಸನಾ ಸಿಂಗ್, ರಾಹುಲ್ ಭೇಕೆ, ರೋಷನ್ ಸಿಂಗ್ ನೌರೆಮ್ ಮತ್ತು ಮಿಡ್‌ಫೀಲರ್ ಸುರೇಶ್ ಸಿಂಗ್ ಸ್ಥಾನ ಪಡೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.