ADVERTISEMENT

ಏಷ್ಯನ್ ಕಪ್ ಕ್ವಾಲಿಫೈರ್‌: ಪುನರಾಗಮನದ ಪಂದ್ಯದಲ್ಲೇ ಸುನೀಲ್‌ ಚೆಟ್ರಿ ಗೋಲು

ಪಿಟಿಐ
Published 19 ಮಾರ್ಚ್ 2025, 22:52 IST
Last Updated 19 ಮಾರ್ಚ್ 2025, 22:52 IST
   

ಶಿಲ್ಲಾಂಗ್ : ಅಂತರರಾಷ್ಟ್ರೀಯ ಫುಟ್‌ಬಾಲ್‌ಗೆ ಪುನರಾಗಮನ ಮಾಡಿದ ಮೊದಲ ಪಂದ್ಯದಲ್ಲೇ ಸುನೀಲ್ ಚೆಟ್ರಿ ಗೋಲು ಹೊಡೆದರು. ಈ ಮೋಡಿಗಾರನ ಉತ್ತಮ ಆಟದ ನೆರವಿನಿಂದ ಭಾರತ ತಂಡ, ಬುಧವಾರ ನಡೆದ ಸೌಹಾರ್ದ ಪಂದ್ಯದಲ್ಲಿ ಮಾಲ್ಡೀವ್ಸ್‌ ತಂಡದ ಮೇಲೆ 3–0 ಗೋಲುಗಳ ಜಯ ಪಡೆಯಿತು.

ಆ ಮೂಲಕ ನವೆಂಬರ್ 2023ರಲ್ಲಿ ಆರಂಭವಾದ 12 ಪಂದ್ಯಗಳ ಗೆಲುವಿನ ಬರವನ್ನು ಕೊನೆಗೂ ನೀಗಿಸಿಕೊಂಡಿತು.

ಇದು ಇಲ್ಲಿನ ಜವಾಹರಲಾಲ್ ನೆಹರೂ ಕ್ರೀಡಾಂಗಣದಲ್ಲಿ ನಡೆದ ಮೊದಲ ಅಂತರರಾಷ್ಟ್ರೀಯ ಪಂದ್ಯ ಎನಿಸಿತು. ರಾಹುಲ್‌ ಭೆಕೆ ಅವರು 35ನೇ ನಿಮಿಷ ಭಾರತ ತಂಡಕ್ಕೆ ಮುನ್ನಡೆ ಒದಗಿಸಿದರು. 66ನೇ ನಿಮಿಷ ಲಿಸ್ಟನ್‌ ಕೊಲಾಕೊ ಅವರು ಮುನ್ನಡೆಯನ್ನು ಹೆಚ್ಚಿಸಿದರು.

ADVERTISEMENT

ಕಳೆದ ವರ್ಷದ ಮೇ ತಿಂಗಳಲ್ಲಿ ನಿವೃತ್ತಿ ಘೋಷಿಸಿದ್ದ 40 ವರ್ಷ ವಯಸ್ಸಿನ ಚೆಟ್ರಿ, ಪಂದ್ಯದ 77ನೇ ನಿಮಿಷ ಆಕರ್ಷಕ ಹೆಡ್ಡರ್ ಮೂಲಕ ಗೋಲು ಗಳಿಸಿ ರಾಷ್ಟ್ರೀಯ ತಂಡಕ್ಕೆ ತಮ್ಮ ಪುನರಾಗಮನವನ್ನು ಸ್ಮರಣೀಯವನ್ನಾಗಿಕೊಂಡರು. ಇದು ಅಂತರರಾಷ್ಟ್ರೀಯ ಮಟ್ಟದಲ್ಲಿ ಅವರು ಗಳಿಸಿದ 95ನೇ ಗೋಲು.

47ನೇ ನಿಮಿಷ ಚೆಟ್ರಿ ಗೋಲು ಯತ್ನವನ್ನು ಮಾಲ್ಟೀವ್ಸ್‌ ಗೋಲ್ ಕೀಪರ್ ತಡೆದಿದ್ದರು. 82 ನಿಮಿಷ ಅವರು ಮೈದಾನದಿಂದ ಹೊರನಡೆದರು.

ಇದು 16 ತಿಂಗಳಲ್ಲಿ ಭಾರತ ಗಳಿಸಿದ ಮೊದಲ ಜಯ. ಮನೊಲೊ ಮಾರ್ಕ್ವೆಝ್ ಅವರು ತಂಡದ ತರಬೇತುದಾರನಾದ ನಂತರ ಗಳಿಸಿದ ಮೊದಲ ಗೆಲುವು ಕೂಡ. ಇದಕ್ಕೆ ಮೊದಲು 2023ರ ನವೆಂಬರ್‌ 16ರಂದು ಕುವೈತ್‌ ವಿರುದ್ಧ 2026ರ ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯದಲ್ಲಿ ಭಾರತ (1–0) ಗೆಲುವು ದಾಖಲಿಸಿತ್ತು.

ಮನೊಲೊ ಅವರ ತರಬೇತಿಯಡಿ ಆಡಿದ ನಾಲ್ಕು ಪಂದ್ಯಗಳಲ್ಲಿ ಭಾರತ ಒಂದು ಸೋತು, ಮೂರರಲ್ಲಿ ಡ್ರಾ ಮಾಡಿಕೊಂಡಿತ್ತು.

ಎಎಫ್‌ಸಿ ಏಷ್ಯನ್ ಕಪ್ ಕ್ವಾಲಿಫೈರ್‌ಗೆ ಮೊದಲು ಪೂರ್ವಸಿದ್ಧತೆಯ ಭಾಗವಾಗಿ ಭಾರತ ಈ ಪಂದ್ಯ ಆಡಿತ್ತು.  ಏಷ್ಯನ್ ಕಪ್‌ ಕ್ವಾಲಿಫೈರ್‌ನ ಮೊದಲ ಪಂದ್ಯ ಇದೇ ಕ್ರೀಡಾಂಗಣದಲ್ಲಿ ಇದೇ 25ರಂದು ನಡೆಯಲಿದೆ.

ಚೆಟ್ರಿ ಈ ತಿಂಗಳ ಆರಂಭದಲ್ಲಿ ಅಂತರರಾಷ್ಟ್ರೀಯ ಫುಟ್‌ಬಾಲ್‌ ನಿವೃತ್ತಿ ತೊರೆದು ರಾಷ್ಟ್ರೀಯ ತಂಡಕ್ಕೆ  ಮರಳಿದ್ದರು.

ವಿಶ್ವ ಕ್ರಮಾಂಕದಲ್ಲಿ ಭಾರತ 126ನೇ ಸ್ಥಾನದಲ್ಲಿದೆ. ಮಾಲ್ಡೀವ್ಸ್‌ 36 ಸ್ಥಾನಗಳಷ್ಟು ಕೆಳಗೆ, ಅಂದರೆ 162ನೇ ಸ್ಥಾನದಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.