ಕೊಲಂಬಿಯಾ ತಂಡದ ಜೆಫರ್ಸನ್ ಲೆರ್ಮಾ ಸಂಭ್ರಮ
ಶಾರ್ಲೊಟ್, ಅಮೆರಿಕ: ಜೆಫರ್ಸನ್ ಲೆರ್ಮಾ ಹೊಡೆದ ಏಕೈಕ ಗೋಲಿನ ಬಲದಿಂದ ಕೊಲಂಬಿಯಾ ತಂಡವು ಕೊಪಾ ಅಮೆರಿಕ ಫುಟ್ ಬಾಲ್ ಟೂರ್ನಿಯ ಸೆಮಿಫೈನಲ್‌ನಲ್ಲಿ ಜಯಿಸಿತು.
ಇದರೊಂದಿಗೆ ಫೈನಲ್‌ನಲ್ಲಿ ಲಯೊನೆಲ್ ಮೆಸ್ಸಿಯ ಅರ್ಜೆಂಟೀನಾ ತಂಡವನ್ನು ಎದುರಿಸಲು ಸಿದ್ಧವಾಯಿತು. ಫ್ಲಾರಿಡಾದ ಮಿಯಾಮಿ ಗಾರ್ಡನ್‌ನಲ್ಲಿ ಭಾನುವಾರ ರಾತ್ರಿ ಫೈನಲ್ ನಡೆಯಲಿದೆ.
ಗುರುವಾರ ನಡೆದ ನಾಲ್ಕರ ಘಟ್ಟದ ಪಂದ್ಯದಲ್ಲಿ ಕೊಲಂಬಿಯಾ ತಂಡವು 1–0 ಗೋಲಿನಿಂದ ಉರುಗ್ವೆ ಎದುರು ಗೆದ್ದಿತು.
ಕೊಲಂಬಿಯಾ ತಂಡದ ಜೆಫರ್ಸನ್ 39ನೇ ನಿಮಿಷದಲ್ಲಿ ಗೋಲು ಹೊಡೆಯುವ ಮೂಲಕ ಗೆಲುವಿನ ಕಾಣಿಕೆ ನೀಡಿದರು. 23 ವರ್ಷಗಳ ಹಿಂದೆ ಕೊಲಂಬಿಯಾ ತಂಡವು ಪ್ರಶಸ್ತಿ ಗೆದ್ದಿತ್ತು. ಅದಾದ ನಂತರ ಕೊಪಾ ಅಮೆರಿಕ ಟೂರ್ನಿಯ ಫೈನಲ್ ಈಗ ಮತ್ತೊಮ್ಮೆ ಫೈನಲ್‌ಗೆ ಲಗ್ಗೆ ಹಾಕಿದೆ.
ಹಾಲಿ ಚಾಂಪಿಯನ್ ಅರ್ಜೆಂಟೀನಾ ತಂಡವು 16ನೇ ಪ್ರಶಸ್ತಿ ಮೇಲೆ ಕಣ್ಣಿಟ್ಟಿದೆ. ಅಲ್ಲದೇ ಸತತ ಮೂರು ಬಾರಿ ಪ್ರಶಸ್ತಿ ಜಯಿಸಿರುವ ಸ್ಪೇನ್ ತಂಡದ ದಾಖಲೆ ಸರಿಗಟ್ಟುವ ವಿಶ್ವಾಸದಲ್ಲಯೂ ಅರ್ಜೆಂಟೀನಾ ಇದೆ.
ಸೆಮಿಫೈನಲ್ ಪಂದ್ಯದಲ್ಲಿ ಉಭಯ ತಂಡಗಳ ಆಟಗಾರರು ತಲಾ ಮೂರು ಹಳದಿ ಕಾರ್ಡ್ ಮತ್ತು ಒಂದು ಬಾರಿ ಕೆಂಪು ಕಾರ್ಡ್ ದರ್ಶನ ಮಾಡಿದರು.
ಹಾಗೆ ನೋಡಿದರೆ ಪಂದ್ಯದಲ್ಲಿ ಉರುಗ್ವೆ ತಂಡವೇ ಚೆಂಡಿನ ಮೇಲೆ ಹೆಚ್ಚು ಸಮಯ ಹಿಡಿತ ಸಾಧಿಸಿತ್ತು. ನಿಖರ ಪಾಸ್‌ಗಳನ್ನು ನೀಡುವಲ್ಲಿಯೂ ಉರುಗ್ವೆಯೇ ಮುಂದಿತ್ತು. ಆದರೂ ಜಯದ ಅದೃಷ್ಟ ಒಲಿಯಲಿಲ್ಲ.
ಪಂದ್ಯ ನಡೆದ ಬ್ಯಾಂಕ್ ಆಫ್ ಅಮೆರಿಕ ಕ್ರೀಡಾಂಗಣದಲ್ಲಿ ಸೇರಿದ್ದ ಉರುಗ್ವೆ ಅಭಿಮಾನಿಗಳು ನಿರಾಶೆಗೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.