ಕ್ರಿಸ್ಟಿಯಾನೊ ರೊನಾಲ್ಡೊ
ಚಿತ್ರ ಕೃಪೆ: ಎಕ್ಸ್
ರಿಯಾಧ್: ಮುಂದಿನ ವರ್ಷದ ಫುಟ್‌ಬಾಲ್ ವಿಶ್ವಕಪ್ ತಮ್ಮ ಪಾಲಿಗೆ ಕೊನೆಯದಾಗಲಿದೆ ಎಂದು ಪೋರ್ಚುಗಲ್‌ನ ಸೂಪರ್ ಸ್ಟಾರ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಮಂಗಳವಾರ ತಿಳಿಸಿದ್ದಾರೆ. ಆ ಮೂಲಕ ಈ ಕ್ರೀಡೆಯ ಮಹಾನ್ ಆಟಗಾರ ಮುಂದಿನ ವರ್ಷ ವೃತ್ತಿಜೀವನ ಕೊನೆಗೊಳಿಸುವ ಸುಳಿವು ನೀಡಿದ್ದಾರೆ.
40 ವರ್ಷ ವಯಸ್ಸಿನ ರೊನಾಲ್ಡೊ ಅವರು ಅಂತರರಾಷ್ಟ್ರೀಯ ಮತ್ತು ಕ್ಲಬ್ ಪಂದ್ಯಗಳಲ್ಲಿ 950ಕ್ಕೂ ಹೆಚ್ಚು ಗೋಲುಗಳನ್ನು ಗಳಿಸಿದ್ದಾರೆ. ಒಂದು ಅಥವಾ ಎರಡು ವರ್ಷಗಳಲ್ಲಿ ನಿವೃತ್ತರಾಗುವುದಾಗಿಯೂ ಅವರು ತಿಳಿಸಿದ್ದಾರೆ.
2026ರ ವಿಶ್ವಕಪ್ ನಿಮ್ಮ ಪಾಲಿಗೆ ಕೊನೆಯದೇ ಎಂದು ಸೌದಿಯ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ಅವರು ‘ಖಂಡಿತಕ್ಕೂ ಹೌದು. ಆಗ ನನಗೆ 41 ವರ್ಷವಾಗಲಿದೆ. ಅದು ಸಂದರ್ಭವಾಗಲಿದೆ’ ಎಂದಿದ್ದಾರೆ.
ಐದು ವರ್ಷದ ಬ್ಯಾಲನ್ ಡಿ ಓರ್ ವಿಜೇತ ರೊನಾಲ್ಡೊ ಅವರು ಮುಂದಿನ ವಿಶ್ವಕಪ್‌ನಲ್ಲಿ ಆಡುವ ವಿಶ್ವಾಸ ಹೊಂದಿದ್ದಾರೆ.
ಹಂಗೆರಿ ಎದುರು ಕಳೆದ ತಿಂಗಳು ಎರಡು ಗೋಲುಗಳನ್ನು ಬಾರಿಸುವ ಮೂಲಕ ವಿಶ್ವ ಕಪ್ ಅರ್ಹತಾ ಸುತ್ತಿನಲ್ಲಿ ಅತ್ಯಧಿಕ ಗೋಲು ಬಾರಿಸಿದ ಆಟಗಾರನೆಂಬ ಹಿರಿಮೆಗೆ ರೊನಾಲ್ಡೊ ಪಾತ್ರರಾಗಿದ್ದಾರೆ. ಅವರು ಒಟ್ಟು 41 ಗೋಲು ಗಳಿಸಿದಂತಾಗಿತ್ತು. ಈ ಹಿಂದಿನ ದಾಖಲೆ ಗ್ವಾಟೆಮಾಲಾದ ಕಾರ್ಲೋಸ್ ರುಯಿಸ್ (39 ಗೋಲು) ಹೆಸರಿನಲ್ಲಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.