ADVERTISEMENT

ಶಾಲಾ ವಿದ್ಯಾರ್ಧಿಗಳ ಫುಟ್ಬಾಲ್: ದಕ್ಷಿಣ ಕನ್ನಡಕ್ಕೆ ‘ಟ್ರಿಪಲ್’ ಚಾಂಪಿಯನ್ ಪಟ್ಟ

ಪ್ರಾಥಮಿಕ, ಪ್ರೌಢಶಾಲೆಗಳ ಬಾಲಕ–ಬಾಲಕಿಯರ ಮೈಸೂರು ವಿಭಾಗ ಮಟ್ಟದ ಫುಟ್ಬಾಲ್ ಟೂರ್ನಿ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2022, 16:00 IST
Last Updated 29 ಸೆಪ್ಟೆಂಬರ್ 2022, 16:00 IST
ಕೊಡಗು ತಂಡದ ಎದುರಿನ ಫೈನಲ್ ಪಂದ್ಯದಲ್ಲಿ ದಕ್ಷಿಣ ಕನ್ನಡದ ಸಿಂಚನ ಚೆಂಡಿನೊಂದಿಗೆ ಮುನ್ನುಗ್ಗಿದರು –ಪ್ರಜಾವಾಣಿ ಚಿತ್ರ/ ಗಣೇಶ್ ಅದ್ಯಪಾಡಿ
ಕೊಡಗು ತಂಡದ ಎದುರಿನ ಫೈನಲ್ ಪಂದ್ಯದಲ್ಲಿ ದಕ್ಷಿಣ ಕನ್ನಡದ ಸಿಂಚನ ಚೆಂಡಿನೊಂದಿಗೆ ಮುನ್ನುಗ್ಗಿದರು –ಪ್ರಜಾವಾಣಿ ಚಿತ್ರ/ ಗಣೇಶ್ ಅದ್ಯಪಾಡಿ   

ಬಜಪೆ (ದಕ್ಷಿಣ ಕನ್ನಡ): ಆತಿಥೇಯ ದಕ್ಷಿಣ ಕನ್ನಡ ಜಿಲ್ಲಾ ತಂಡಗಳು ಇಲ್ಲಿನ ಸೇಂಟ್ ಜೋಸೆಫ್ಸ್‌ ಪಿಯು ಕಾಲೇಜು ಅಂಗಣದಲ್ಲಿ ನಡೆದ ಪ್ರಾಥಮಿಕ ಹಾಗೂ ಪ್ರೌಢಶಾಲೆ ವಿದ್ಯಾರ್ಥಿಗಳ ಮೈಸೂರು ವಿಭಾಗ ಮಟ್ಟದ ಫುಟ್ಬಾಲ್ ಟೂರ್ನಿಯ ಮೂರು ವಿಭಾಗಗಳಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದವು.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ದೈಹಿಕ ಶಿಕ್ಷಣ ಇಲಾಖೆ, ಜಿಲ್ಲಾ ಪಂಚಾಯಿತಿ ಮತ್ತು ಸೇಂಟ್‌ ಜೋಸೆಫ್ಸ್‌ ಪಿಯು ಕಾಲೇಜು ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಟೂರ್ನಿಯ 17 ಮತ್ತು 14 ವರ್ಷದೊಳಗಿನ ಬಾಲಕಿಯರ ವಿಭಾಗ ಮತ್ತು 14 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಆತಿಥೇಯ ತಂಡದವರು ಪ್ರಶಸ್ತಿ ಮುಡಿಗೇರಿಸಿಕೊಂಡರು. 17 ವರ್ಷದೊಳಗಿನ ಬಾಲಕರ ವಿಭಾಗದ ಪ್ರಶಸ್ತಿ ಮೈಸೂರು ತಂಡದ ಪಾಲಾಯಿತು.

14 ವರ್ಷದೊಳಗಿನ ಬಾಲಕರ ವಿಭಾಗದ ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ದಕ್ಷಿಣ ಕನ್ನಡ ತಂಡ ಕೊಡಗು ಜಿಲ್ಲಾ ತಂಡವನ್ನು ಪೆನಾಲ್ಟಿ ಶೂಟೌಟ್‌ನಲ್ಲಿ (5-4) ಮಣಿಸಿತು. 14 ಬಾಲಕಿಯರ ವಿಭಾಗದ ಫೈನಲ್‌ನಲ್ಲಿ ದಕ್ಷಿಣ ಕನ್ನಡ 3–0ಯಿಂದ ಕೊಡಗು ತಂಡವನ್ನು ಸೋಲಿಸಿತು. 17 ವರ್ಷದೊಳಗಿನ ಬಾಲಕರ ವಿಭಾಗದ ಫೈನಲ್‌ನಲ್ಲಿ ಮೈಸೂರು ತಂಡ ಕೊಡಗು ವಿರುದ್ಧ 2-0 ಗೋಲುಗಳಿಂದ ಜಯ ಸಾಧಿಸಿತು. ಬಾಲಕಿಯರ ವಿಭಾಗದಲ್ಲಿ ದಕ್ಷಿಣ ಕನ್ನಡವು ಕೊಡಗು ಎದುರು 2-1 ಗೋಲುಗಳ ಗೆಲುವು ಸಾಧಿಸಿತು.

ADVERTISEMENT

17 ವರ್ಷದೊಳಗಿನವರ ವಿಭಾಗದಲ್ಲಿ ಕೊಡಗಿನ ಮನುಶ್ರೀ ಹಾಗೂ ಸುಬ್ರಮಣಿ ಉತ್ತಮ ಆಟಗಾರರು ಎನಿಸಿಕೊಂಡರೆ ದಕ್ಷಿಣ ಕನ್ನಡದ ಅನುಷಾ ಮತ್ತು ಮೈಸೂರಿನ ಚೇತನ್ ಉತ್ತಮ‌ ಗೋಲ್‌ಕೀಪರ್ ಪ್ರಶಸ್ತಿ ಪಡೆದುಕೊಂಡರು. 14 ವರ್ಷದೊಳಗಿನವರ ವಿಭಾಗದಲ್ಲಿ ದಕ್ಷಿಣ ಕನ್ನಡದ ಭೂಮಿಕಾ ಹಾಗೂ ಕೊಡಗಿನ ಜೀವನ್ ಉತ್ತಮ ಆಟಗಾರರು, ದಕ್ಷಿಣ ಕನ್ನಡದ ಅಧಿತಿ ಮತ್ತು ಸಮೃದ್ಧ್ ಉತ್ತಮ ಗೋಲ್‌ಕೀಪರ್ ಪ್ರಶಸ್ತಿ ಪಡೆದುಕೊಂಡರು.

ಸಮಾರೋಪ ಸಮಾರಂಭದಲ್ಲಿ ಕೃಪಾ ಸಾಧನಾದ ನಿರ್ದೇಶಕ ಆ್ಯಂಟನಿ ಕ್ಲಾನಿ ಡಿಸೋಜ, ಉದ್ಯಮಿ ಕೃಷ್ಣ ಕಲ್ಲೋಡಿ, ಸೇಂಟ್ ಜೋಸೆಫ್ಸ್‌ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಆಲ್ವಿನ್ ನೊರೋನ್ಹ, ಪಿಯು ಕಾಲೇಜು ಪ್ರಾಂಶುಪಾಲ ರಾಮಕೃಷ್ಣ ಉಡುಪ, ಫಾದರ್ ರೋಹಿತ್ ಡಿ ಕೋಸ್ಟ, ದೈಹಿಕ ಶಿಕ್ಷಣ ಶಿಕ್ಷಕ ವಿನೋದ್ ಕುಮಾರ್, ಹರಿಚಂದ್ರ, ಪ್ರಶಾಂತ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.