ADVERTISEMENT

ಫುಟ್‌ಬಾಲ್‌: ಫ್ರಾನ್ಸ್‌ ತಂಡಕ್ಕೆ ಎಂಬಾಪೆ ನಾಯಕ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2023, 18:45 IST
Last Updated 21 ಮಾರ್ಚ್ 2023, 18:45 IST
ಎಂಬಾಪೆ
ಎಂಬಾಪೆ   

ಪ್ಯಾರಿಸ್‌ (ಎಎಫ್‌ಪಿ): ಸ್ಟಾರ್‌ ಆಟಗಾರ ಕಿಲಿಯನ್‌ ಎಂಬಾಪೆ ಅವರು ಫ್ರಾನ್ಸ್‌ ರಾಷ್ಟ್ರೀಯ ಫುಟ್‌ಬಾಲ್ ತಂಡದ ನಾಯಕತ್ವದ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ.

24 ವರ್ಷದ ಎಂಬಾಪೆ ಅವರು ಕೋಚ್‌ ದಿದಿಯೆರ್‌ ದೆಶಾಂಪ್‌ ಅವರೊಂದಿಗಿನ ಸಮಾಲೋಚನೆ ಬಳಿಕ ನಾಯಕತ್ವದ ಹೊಣೆ ಹೊತ್ತುಕೊಳ್ಳಲು ಒಪ್ಪಿಕೊಂಡಿದ್ದಾರೆ ಎಂದು
ಮೂಲಗಳು ತಿಳಿಸಿವೆ.

ಎಂಬಾಪೆ ಅವರು ನಾಯಕನಾಗಿ ತಮ್ಮ ಮೊದಲ ಪಂದ್ಯವನ್ನು ಶುಕ್ರವಾರ ಆಡಲಿದ್ದಾರೆ. ಸ್ಟೇಡ್‌ ಡಿ ಫ್ರಾನ್ಸ್‌ ಕ್ರೀಡಾಂಗಣದಲ್ಲಿ ನಡೆಯಲಿರುವ ಯೂರೊ–2024ರ ಟೂರ್ನಿಯ ಅರ್ಹತಾ ಪಂದ್ಯದಲ್ಲಿ ಫ್ರಾನ್ಸ್‌ ತಂಡ ನೆದರ್ಲೆಂಡ್ಸ್‌ ತಂಡದ ಸವಾಲು ಎದುರಿಸಲಿದೆ.

ADVERTISEMENT

ಫಿಫಾ ವಿಶ್ವಕಪ್‌ ಫೈನಲ್‌ ಬಳಿಕ ಫ್ರಾನ್ಸ್‌ ಆಡಲಿರುವ ಮೊದಲ ಪಂದ್ಯ ಇದಾಗಿದೆ. ಕಳೆದ ವರ್ಷ ಡಿ.18 ರಂದು ನಡೆದಿದ್ದ ವಿಶ್ವಕಪ್‌ ಫೈನಲ್‌ನಲ್ಲಿ ಫ್ರಾನ್ಸ್‌ ತಂಡ ಪೆನಾಲ್ಟಿ ಶೂಟೌಟ್‌ನಲ್ಲಿ ಅರ್ಜೆಂಟೀನಾ ಎದುರು ಸೋತಿತ್ತು.

ವಿಶ್ವಕಪ್‌ ಟೂರ್ನಿಯಲ್ಲಿ ಫ್ರಾನ್ಸ್‌ ತಂಡವನ್ನು ಮುನ್ನಡೆಸಿದ್ದ ಗೋಲ್‌ಕೀಪರ್‌ ಹ್ಯೂಗೊ ಲಾರಿಸ್‌ ಅವರು ಜನವರಿ ತಿಂಗಳಲ್ಲಿ ಅಂತರರಾಷ್ಟ್ರೀಯ ಫುಟ್‌ಬಾಲ್‌ನಿಂದ ನಿವೃತ್ತಿಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.