
ಮಡಗಾಂವ್: ಎಫ್‌ಸಿ ಗೋವಾ ತಂಡವು ಭಾನುವಾರ ನಡೆದ ಎಐಎಫ್‌ಎಫ್ ಸೂಪರ್ ಕಪ್ ಫುಟ್‌ಬಾಲ್ ಟೂರ್ನಿಯ ಫೈನಲ್‌ನಲ್ಲಿ ಈಸ್ಟ್ ಬೆಂಗಾಲ್ ತಂಡವನ್ನು ‘ಸಡನ್ ಡೆತ್’ನಲ್ಲಿ ಮಣಿಸಿತು. ಅದರೊಂದಿಗೆ, ಟೂರ್ನಿಯ ಇತಿಹಾಸದಲ್ಲಿ ಪ್ರಶಸ್ತಿಯನ್ನು ತನ್ನಲ್ಲಿಯೇ ಉಳಿಸಿಕೊಂಡ ಮೊದಲ ತಂಡ ಎಂಬ ಗೌರವಕ್ಕೂ ಪಾತ್ರವಾಯಿತು. ಜೊತೆಗೆ, ಮೂರನೇ ಬಾರಿಗೆ ಕಿರೀಟ ತನ್ನದಾಗಿಸಿಕೊಂಡಿತು.
ಕಳೆದ ಬಾರಿಯ ಚಾಂಪಿಯನ್ ಗೋವಾ ತಂಡವು ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಶೂಟೌಟ್‌ನಲ್ಲಿ 6–5ರಿಂದ ಬೆಂಗಾಲ್ ತಂಡಕ್ಕೆ ಸೋಲುಣಿಸಿತು.
ನಿಗದಿತ ಅವಧಿಯ ಆಟದ ನಂತರ ಪಂದ್ಯವು ಗೋಲುರಹಿತ ಡ್ರಾ ಆಗಿತ್ತು. ಹೆಚ್ಚುವರಿ ಅವಧಿಯಲ್ಲಿಯೂ ಗೋಲು ದಾಖಲಾಗಲಿಲ್ಲ. ಪೆನಾಲ್ಟಿ ಶೂಟೌಟ್‌ನಲ್ಲಿ ಉಭಯ ತಂಡಗಳ ಆಟಗಾರರು ತಲಾ 4 ಬಾರಿ ಚೆಂಡನ್ನು ಗೋಲು ಪೆಟ್ಟಿಗೆಗೆ ಸೇರಿಸಿದರು.
ಬಳಿಕ ನಡೆದ ‘ಸಡನ್ ಡೆತ್’ನಲ್ಲಿ ಗೋವಾ ತಂಡದ ಉದಾಂತ ಸಿಂಗ್ ಹಾಗೂ ತಾವೊರಾ ಚೆಂಡನ್ನು ಗುರಿ ಸೇರಿಸಿದರು. ಈಸ್ಟ್ ಬೆಂಗಾಲ್ ಪರ ಅಹದಾದ್ ಯಶಸ್ವಿಯಾದರೂ, ಪಿ.ವಿ. ವಿಷ್ಣು ವಿಫಲರಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.