ADVERTISEMENT

ವಿಶ್ವಕಪ್ ಫುಟ್‌ಬಾಲ್ ಟೂರ್ನಿ: ನೆದರ್ಲೆಂಡ್ಸ್‌ಗೆ ಅಮೆರಿಕ ಸವಾಲು

ಮೊದಲ ಪ್ರಿ ಕ್ವಾರ್ಟರ್‌ ಫೈನಲ್‌ನಲ್ಲಿ ಇಂದು ಪೈಪೋಟಿ

ರಾಯಿಟರ್ಸ್
Published 2 ಡಿಸೆಂಬರ್ 2022, 14:14 IST
Last Updated 2 ಡಿಸೆಂಬರ್ 2022, 14:14 IST
ನೆದರ್ಲೆಂಡ್ಸ್‌ ತಂಡದ ಆಟಗಾರರು ಅಭ್ಯಾಸ ನಡೆಸಿದರು –ಎಎಫ್‌ಪಿ ಚಿತ್ರ
ನೆದರ್ಲೆಂಡ್ಸ್‌ ತಂಡದ ಆಟಗಾರರು ಅಭ್ಯಾಸ ನಡೆಸಿದರು –ಎಎಫ್‌ಪಿ ಚಿತ್ರ   

ದೋಹಾ: ವಿಶ್ವಕಪ್‌ ಟೂರ್ನಿಯ ಕ್ವಾರ್ಟರ್‌ ಫೈನಲ್‌ ಮೇಲೆ ಕಣ್ಣಿಟ್ಟಿರುವ ನೆದರ್ಲೆಂಡ್ಸ್‌ಗೆ ಪೈಪೋಟಿ ನೀಡಲು ಅಮೆರಿಕ ತಂಡ ಸಜ್ಜಾಗಿದೆ.

ಖಲೀಫಾ ಇಂಟರ್‌ನ್ಯಾಷನಲ್‌ ಕ್ರೀಡಾಂಗಣದಲ್ಲಿ ಶನಿವಾರ ನಡೆಯಲಿರುವ 16ರ ಘಟ್ಟದ ಪಂದ್ಯದಲ್ಲಿ ಇವೆರಡು ತಂಡಗಳು ಹಣಾಹಣಿ ನಡೆಸಲಿದ್ದು, ತುರುಸಿನ ಹೋರಾಟ ನಿರೀಕ್ಷಿಸಲಾಗಿದೆ.

ನೆದರ್ಲೆಂಡ್ಸ್‌ ತಂಡ ‘ಎ’ ಗುಂಪಿನಲ್ಲಿ ಅಗ್ರಸ್ಥಾನ ಪಡೆದು ಪ್ರಿ ಕ್ವಾರ್ಟರ್ ಫೈನಲ್‌ ಪ್ರವೇಶಿಸಿತ್ತು. ಲೀಗ್‌ ಹಂತದಲ್ಲಿ ಸೆನೆಗಲ್‌ ಮತ್ತು ಕತಾರ್‌ ವಿರುದ್ಧ 2–0 ಗೋಲುಗಳ ಗೆಲುವು ಪಡೆದಿದ್ದರೆ, ಈಕ್ವೆಡಾರ್‌ ಜತೆ 1–1 ಗೋಲಿನ ಸಮಬಲ ಸಾಧಿಸಿತ್ತು.

ADVERTISEMENT

ಒಮ್ಮೆಯೂ ವಿಶ್ವಕಪ್‌ ಜಯಿಸದ ಡಚ್‌ ತಂಡ 1974, 1978 ಮತ್ತು 2010 ರಲ್ಲಿ ‘ರನ್ನರ್ಸ್‌ ಅಪ್‌’ ಆಗಿತ್ತು. 2020ರ ಯೂರೊ ಕಪ್‌ನಲ್ಲಿ ಸೋತು ಹೊರಬಿದ್ದ ಬಳಿಕ ಆಡಿರುವ 18 ಪಂದ್ಯಗಳಲ್ಲಿ ಈ ತಂಡ ಸೋಲು ಅನುಭವಿಸಿಲ್ಲ. ಗೆಲುವಿನ ಓಟ ಮುಂದುವರಿಸುವುದು ನೆದರ್ಲೆಂಡ್ಸ್‌ ಗುರಿ.

ಮೂರು ಪಂದ್ಯಗಳಲ್ಲಿ ಮೂರು ಗೋಲು ಗಳಿಸಿರುವ ಫಾರ್ವರ್ಡ್‌ ಆಟಗಾರ ಕೋಡಿ ಗಾಕ್ಪೊ ಅವರ ಮೇಲೆ ನೆದರ್ಲೆಂಡ್ಸ್‌ ತಂಡ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದೆ.

‘ಅಮೆರಿಕ ತಂಡವನ್ನು ಲಘುವಾಗಿ ಪರಿಗಣಿಸುವುದಿಲ್ಲ. ಅವರ ಸಾಮರ್ಥ್ಯ ಏನೆಂಬುದು ಎಲ್ಲರಿಗೂ ತಿಳಿದಿದೆ. ನಾಕೌಟ್‌ ಪ್ರವೇಶಿಸಿರುವ ಅತ್ಯುತ್ತಮ ತಂಡಗಳಲ್ಲಿ ಅಮೆರಿಕ ಕೂಡಾ ಒಂದು’ ಎಂದು ನೆದರ್ಲೆಂಡ್ಸ್‌ ತಂಡದ ಕೋಚ್‌ ಲೂಯಿಸ್‌ ವಾನ್‌ ಗಾಲ್‌ ಹೇಳಿದ್ದಾರೆ.

ಯುವ ಆಟಗಾರರನ್ನು ಒಳಗೊಂಡಿರುವ ಅಮೆರಿಕ, ಎದುರಾಳಿಗಳಿಗೆ ಪ್ರಬಲ ಪೈಪೋಟಿ ನೀಡುವ ಸಾಧ್ಯತೆಯಿದೆ. ಈ ತಂಡ ‘ಬಿ’ ಗುಂಪಿನಲ್ಲಿ ಎರಡನೇ ಸ್ಥಾನ ಪಡೆದು ನಾಕೌಟ್‌ ಪ್ರವೇಶಿಸಿದೆ. ಇಂಗ್ಲೆಂಡ್‌ ಮತ್ತು ವೇಲ್ಸ್‌ ಜತೆ ಡ್ರಾ ಮಾಡಿಕೊಂಡಿದ್ದ ಅಮೆರಿಕ, ಕೊನೆಯ ಪಂದ್ಯದಲ್ಲಿ ಇರಾನ್‌ ವಿರುದ್ಧ ಗೆದ್ದಿತ್ತು.

ಮುಖಾಮುಖಿ: ನೆದರ್ಲೆಂಡ್ಸ್‌ ಮತ್ತು ಅಮೆರಿಕ ತಂಡಗಳು ಇದುವರೆಗೆ ಐದು ಸಲ ಪರಸ್ಪರ ಎದುರಾಗಿದ್ದು, ನೆದರ್ಲೆಂಡ್ಸ್‌ ನಾಲ್ಕು ಸಲ ಗೆದ್ದಿದೆ. 2015 ರಲ್ಲಿ ಇವೆರಡು ತಂಡಗಳು ಕೊನೆಯ ಬಾರಿ ಎದುರಾಗಿದ್ದಾಗ ಅಮೆರಿಕ 4–3 ರಲ್ಲಿ ಗೆಲುವು ಪಡೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.