ADVERTISEMENT

ಮೆಸ್ಸಿ ಮೋಡಿಯಲ್ಲಿ ಅರಳಿದ ಜಯ

ಮೆಕ್ಸಿಕೊ ವಿರುದ್ಧ ಅರ್ಜೆಂಟೀನಾಗೆ 2–0 ಗೋಲುಗಳ ಗೆಲುವು

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2022, 12:19 IST
Last Updated 27 ನವೆಂಬರ್ 2022, 12:19 IST
ಲಯೊನೆಲ್ ಮೆಸ್ಸಿ ಆಟದ ಪರಿ– ಎಎಫ್‌ಪಿ ಚಿತ್ರ
ಲಯೊನೆಲ್ ಮೆಸ್ಸಿ ಆಟದ ಪರಿ– ಎಎಫ್‌ಪಿ ಚಿತ್ರ   

ಲುಸೈಲ್‌, ಕತಾರ್: ಸೌದಿ ಅರೇಬಿಯಾ ಎದುರಿನ ಆರಂಭಿಕ ಪಂದ್ಯದಲ್ಲಿ ಆಘಾತಕ್ಕೊಳಗಾಗಿದ್ದ ಅರ್ಜೆಂಟೀನಾ ಶನಿವಾರ ವಿಶ್ವಕಪ್ ಟೂರ್ನಿಯ ಪ್ರಶಸ್ತಿ ಆಸೆಯನ್ನು ಜೀವಂತವಾಗಿರಿಸಿಕೊಂಡಿತು.

ನಾಯಕ ಲಯೊನೆಲ್ ಮೆಸ್ಸಿ ಮತ್ತು ಎಂಜೊ ಫರ್ನಾಂಡಿಸ್‌ ಕಾಲ್ಚಳಕದ ಬಲದಿಂದಇಲ್ಲಿ ನಡೆದ ‘ಸಿ’ ಗುಂಪಿನ ಹಣಾಹಣಿಯಲ್ಲಿ ಅರ್ಜೆಂಟೀನಾ 2–0ರಿಂದ ಮೆಕ್ಸಿಕೊ ತಂಡವನ್ನು ಮಣಿಸಿ ನಾಕೌಟ್‌ ಸ್ಪರ್ಧೆಯಲ್ಲುಳಿಯಿತು. ವಿಶ್ವದಾದ್ಯಂತ ತೀವ್ರ ನಿರಾಸೆಗೆ ಒಳಗಾಗಿದ್ದ ಮೆಸ್ಸಿ ಅಭಿಮಾನಿಗಳಲ್ಲಿಈ ಗೆಲುವಿನಿಂದಾಗಿ ಸಂತಸದ ಹೊನಲು ಹರಿಯಿತು.

ಗೆಲ್ಲಲೇಬೇಕಿದ್ದ ಸೆಣಸಾಟದಲ್ಲಿ ಅರ್ಜೆಂಟೀನಾ ತಂಡವು ಮೆಕ್ಸಿಕೊ ಒತ್ತಡವನ್ನು ಮೆಟ್ಟಿ ನಿಂತಿತು. ಜಿದ್ದಾಜಿದ್ದಿನ ಹಣಾಹಣಿಯಲ್ಲಿ ಮೊದಲಾರ್ಧ ಗೋಲುರಹಿತವಾಗಿತ್ತು. 64ನೇ ನಿಮಿಷದಲ್ಲಿ ಮೆಸ್ಸಿ ಗಳಿಸಿದ ಮನಮೋಹಕ ಗೋಲು ಪಂದ್ಯಗ ಗತಿ ಪರಿವರ್ತಿಸಿತು. ಎಂಜೆಲ್ ಡಿ ಮರಿಯಾ ನೀಡಿದ ಪಾಸ್‌ ಪಡೆದ ಮೆಸ್ಸಿ 25 ಮೀಟರ್ಸ್ ದೂರದಿಂದ ಚೆಂಡನ್ನು ಕೆಳಮಟ್ಟದಲ್ಲಿ ಗೋಲ್‌ಪೋಸ್ಟ್‌ನತ್ತ ಕಿಕ್ ಮಾಡಿದರು.

ADVERTISEMENT

ಮಿಂಚಿನ ವೇಗದಲ್ಲಿ ಬಂದ ಚೆಂಡು ತಡೆಯುವಲ್ಲಿ ಮೆಕ್ಸಿಕೊ ಗೋಲ್‌ಕೀಪರ್‌ ವಿಫಲರಾದರು. ಚೆಂಡು ಗುರಿ ಸೇರುತ್ತಲೇ ಮೆಸ್ಸಿ ಭಾವುಕರಾಗಿ ಅಭಿಮಾನಿಗಳತ್ತ ಓಡಿ ಸಿಹಿಮುತ್ತಿನ ಸಂಕೇತ ತೋರಿದರು.

ಬದಲಿ ಆಟಗಾರನಾಗಿ ಬಂದ ಫರ್ನಾಂಡೀಸ್‌ 87ನೇ ನಿಮಿಷದಲ್ಲಿ ಗೋಲು ದಾಖಲಿಸಿ ಅರ್ಜೆಂಟೀನಾದ ಸಂಭ್ರಮ ಇಮ್ಮಡಿಯಾಗುವಂತೆ ಮಾಡಿದರು.

35 ವರ್ಷದ ಮೆಸ್ಸಿ ಅವರಿಗೆ ವಿಶ್ವಕಪ್ ಟೂರ್ನಿಯಲ್ಲಿ ಇದು ಒಟ್ಟು ಎಂಟನೇ ಗೋಲಾಗಿದೆ. ಈ ಆವೃತ್ತಿಯಲ್ಲಿ ಎರಡನೆಯದು. ಪೋರ್ಚುಗಲ್‌ನ ಕ್ರಿಸ್ಟಿಯಾನೊ ರೊನಾಲ್ಡೊ ಮತ್ತು ಅರ್ಜೆಂಟೀನಾದ ದಂತಕತೆ ಡಿಗೊ ಮರಡೋನಾ ಕೂಡ ಎಂಟು ಗೋಲು ದಾಖಲಿಸಿದ್ದಾರೆ.

ಆದರೆ ಮೆಸ್ಸಿ ಅವರಿಗೆ ವಿಶ್ವಕಪ್ ಗೆಲುವು ಮರೀಚಿಕೆಯಾಗಿದೆ. ಬಹುಶಃ ಇದು ಅವರಿಗೆ ಕೊನೆಯ ವಿಶ್ವಕಪ್ ಟೂರ್ನಿಯಾಗಬಹುದು. ಹೀಗಾಗಿ ಟ್ರೋಫಿಯ ಕನಸು ನನಸಾಗಿಸಿಕೊಳ್ಳಲು ಇನ್ನೂ ದೂರ ಸಾಗಬೇಕಿದೆ.

ಟೂರ್ನಿಯ ಮೊದಲ ಪಂದ್ಯದಲ್ಲಿ ಅರ್ಜೆಂಟೀನಾ 1–2ರಿಂದ ಸೌದಿ ಅರೇಬಿಯಾಕ್ಕೆ ಮಣಿದಿತ್ತು. ಗುಂಪಿನಲ್ಲಿ ಎರಡನೇ ಸ್ಥಾನದಲ್ಲಿರುವ ಮೆಸ್ಸಿ ಬಳಗ ಬುಧವಾರ ಪೋಲೆಂಡ್ ಸವಾಲು ಎದುರಿಸಲಿದೆ. ಪೋಲೆಂಡ್‌ ಸಿ ಗುಂಪಿನಲ್ಲಿ ಅಗ್ರಸ್ಥಾನದಲ್ಲಿದೆ.

ಗೋಲುಗಳ ವಿವರ

ಅರ್ಜೆಂಟೀನಾ 2

ಲಯೊನೆಲ್ ಮೆಸ್ಸಿ (64ನೇ ನಿಮಿಷ)

ಎಂಜೊ ಫರ್ನಾಂಡೀಸ್‌ (87ನೇ ನಿಮಿಷ)

ಮೆಕ್ಸಿಕೊ 0

ಪಂದ್ಯದ ಬಳಿಕ ಹಾಡು, ನೃತ್ಯ

ಮೆಸ್ಸಿ ಮತ್ತು ಅರ್ಜೆಂಟೀನಾ ತಂಡದ ಆಟಗಾರರು ಪಂದ್ಯದ ಗೆಲುವಿನ ಬಳಿಕಡ್ರೆಸ್ಸಿಂಗ್‌ ರೂಮ್‌ನಲ್ಲಿ ಹಾಡು, ನೃತ್ಯದ ಮೂಲಕ ಸಂಭ್ರಮಿಸಿದರು.

ಗರಿಷ್ಠ ಸಂಖ್ಯೆ ಪ್ರೇಕ್ಷಕರು

ಅರ್ಜೆಂಟೀನಾ ಮತ್ತು ಮೆಕ್ಸಿಕೊ ನಡುವಣ ಪಂದ್ಯಕ್ಕೆ 88,966 ಪ್ರೇಕ್ಷಕರು ಸಾಕ್ಷಿಯಾದರು. ವಿಶ್ವಕಪ್ ಪಂದ್ಯವೊಂದಕ್ಕೆ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಪ್ರೇಕ್ಷಕರು ಸೇರಿದ್ದು, 28 ವರ್ಷಗಳಲ್ಲೇ ಗರಿಷ್ಠ ಎನಿಸಿದೆ. 1994ರಲ್ಲಿ ಅಮೆರಿಕದ ಕ್ಯಾಲಿಫೋರ್ನಿಯಾದ ಪಾಸುಡಿನಾದ ರೋಸ್‌ಬೌಲ್‌ ಕ್ರೀಡಾಂಗಣದಲ್ಲಿ ನಡೆದ ವಿಶ್ವಕಪ್ ಫೈನಲ್‌ ಪಂದವನ್ನು91,194 ಜನರು ವೀಕ್ಷಿಸಿದ್ದರು. ಈ ಪಂದ್ಯದಲ್ಲಿ ಬ್ರೆಜಿಲ್ ತಂಡವು ಇಟಲಿಯನ್ನು ಸೋಲಿಸಿತ್ತು.

1950ರಲ್ಲಿ ರಿಯೊ ಡಿ ಜನೈರೊದ ಮರಕಾನಾ ಕ್ರೀಡಾಂಗಣದಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ ಉರುಗ್ವೆ ತಂಡವು 2–1ರಿಂದ ಆತಿಥೇಯ ಬ್ರೆಜಿಲ್ ತಂಡವನ್ನು ಸೋಲಿಸಿತ್ತು. ಈ ಪಂದ್ಯವನ್ನು 1,73,850 ಮಂದಿ ಕ್ರೀಡಾಂಗಣದಲ್ಲಿ ವೀಕ್ಷಿಸಿದ್ದು ಅತ್ಯಂತ ಗರಿಷ್ಠ ಎನಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.