ADVERTISEMENT

ಕಂಠೀರವದಲ್ಲಿ ಚೆಟ್ರಿ ಚಮತ್ಕಾರ

ಐಎಸ್‌ಎಲ್‌ ಫುಟ್‌ಬಾಲ್‌: ಕೇರಳ ಬ್ಲಾಸ್ಟರ್ಸ್‌ ಎದುರು ಬೆಂಗಳೂರು ಎಫ್‌ಸಿ ಅಜೇಯ ಓಟ

ಜಿ.ಶಿವಕುಮಾರ
Published 23 ನವೆಂಬರ್ 2019, 21:22 IST
Last Updated 23 ನವೆಂಬರ್ 2019, 21:22 IST
   

ಬೆಂಗಳೂರು: ಕಂಠೀರವ ಕ್ರೀಡಾಂಗಣದಲ್ಲಿ ಶನಿವಾರ ಸುನಿಲ್‌ ಚೆಟ್ರಿ ಚಮತ್ಕಾರ ಮಾಡಿದರು. ಭಾರತದ ಫುಟ್‌ಬಾಲ್‌ನ ‘ಮಾಂತ್ರಿಕ ಆಟಗಾರ’ ಚೆಟ್ರಿ,ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ಗೆ (ಬಿಎಫ್‌ಸಿ) ಆಪತ್ಬಾಂಧವರಾದರು.

ಅವರು ಗಳಿಸಿದ ಗೋಲಿನಿಂದಾಗಿ ಬಿಎಫ್‌ಸಿ ತಂಡ ಇಂಡಿಯನ್‌ ಸೂಪರ್‌ ಲೀಗ್‌ (ಐಎಸ್‌ಎಲ್‌) ಫುಟ್‌ಬಾಲ್‌ ಟೂರ್ನಿಯ 21ನೇ ಪಂದ್ಯದಲ್ಲಿ ಕೇರಳ ಬ್ಲಾಸ್ಟರ್ಸ್‌ ತಂಡವನ್ನು 1–0 ಯಿಂದ ಸೋಲಿಸಿತು. ಇದರೊಂದಿಗೆ ಕೇರಳ ಎದುರಿನ ಜಯದ ದಾಖಲೆಯನ್ನು 4–0ಗೆ ಹೆಚ್ಚಿಸಿಕೊಂಡಿತು.

ಈ ಪಂದ್ಯಕ್ಕೂ ಮುನ್ನ ಉಭಯ ತಂಡಗಳು ನಾಲ್ಕು ಸಲ ಮುಖಾಮುಖಿಯಾಗಿದ್ದವು. ಈ ಪೈಕಿ ಬಿಎಫ್‌ಸಿ ಮೂರ ರಲ್ಲಿ ಗೆದ್ದರೆ ಒಂದು ಪಂದ್ಯ ಡ್ರಾ ಆಗಿತ್ತು.ಹಿಂದಿನ ಸೋಲುಗಳಿಗೆ ಮುಯ್ಯಿ ತೀರಿಸಿಕೊಳ್ಳುವ ಗುರಿಯೊಂದಿಗೆ ಕಣಕ್ಕಿಳಿದಿದ್ದಂತೆ ಕಂಡ ಕೇರಳ, ಆರಂಭ ದಿಂದಲೇ ಆಕ್ರಮಣಕಾರಿಯಾಗಿ ಆಡಿತು.

ADVERTISEMENT

ಈ ತಂಡ ಮೊದಲ 15 ನಿಮಿಷಗಳಲ್ಲಿ ಆತಿಥೇಯ ಬಳಗದ ರಕ್ಷಣಾ ವಿಭಾಗಕ್ಕೆ ತಲೆನೋವಾಗಿ ಕಾಡಿತ್ತು. ಏಳನೇ ನಿಮಿಷದಲ್ಲಿ ತಂಡಕ್ಕೆ ಖಾತೆ ತೆರೆಯುವ ಅವಕಾಶ ಸಿಕ್ಕಿತ್ತು. ಕೆ.ಪಿ.ರಾಹುಲ್ ಅವರ ಪ್ರಯತ್ನಕ್ಕೆ ಬಿಎಫ್‌ಸಿ ಗೋಲ್‌ಕೀಪರ್ ಗುರುಪ್ರೀತ್ ಸಿಂಗ್ ಸಂಧು ಅಡ್ಡಿಯಾದರು.

16ನೇ ನಿಮಿಷದ ಬಳಿಕ ಬಿಎಫ್‌ಸಿ ಆಟ ಅರಳಿತು. 30ನೇ ನಿಮಿಷದಲ್ಲಿ ತಂಡಕ್ಕೆ ಖಾತೆ ತೆರೆಯುವ ಅವಕಾಶ ಕೈತಪ್ಪಿತು. 36ನೇ ನಿಮಿಷದಲ್ಲಿ ಆತಿ ಥೇಯ ಆಟಗಾರರು ಮತ್ತೊಮ್ಮೆ ಎಡವಟ್ಟು ಮಾಡಿಕೊಂಡರು.ಎದುರಾಳಿ ತಂಡದ ಪೆನಾಲ್ಟಿ ಬಾಕ್ಸ್‌ನ ಬಲಭಾಗದಿಂದ ರಾಫೆಲ್‌ ಅಗಸ್ಟೊ ನೀಡಿದ ಕ್ರಾಸ್‌ನಲ್ಲಿ ಚೆಂಡನ್ನು ತಲೆತಾಗಿಸಿ ಗುರಿಮುಟ್ಟಿಸುವ ಅಲ್ಬರ್ಟ್‌ ಸೆರಾನ್‌ ಪ್ರಯತ್ನ ವಿಫಲವಾಯಿತು.

40ನೇ ನಿಮಿಷದಲ್ಲಿ ಎದುರಾಳಿ ತಂಡದ ರಕ್ಷಣಾ ವಿಭಾಗದ ಆಟಗಾರ ರನ್ನು ವಂಚಿಸಿ ಚೆಂಡಿನೊಂದಿಗೆ ಮುನ್ನುಗ್ಗಿದ ರಾಫೆಲ್‌ ಅಗಸ್ಟೊ, ಅದನ್ನು ಆಶಿಕ್‌ ಕುರುಣಿಯನ್‌ ಅವರತ್ತ ತಳ್ಳಿದರು. ಅದನ್ನು ಆಶಿಕ್‌, ಕೇರಳ ತಂಡದ ಪೆನಾಲ್ಟಿ ಆವರಣದಲ್ಲಿದ್ದ ಸುನಿಲ್‌ ಚೆಟ್ರಿ ಅವರತ್ತ ಒದ್ದರು. ಚೆಂಡನ್ನು ಚೆಟ್ರಿ, ಇನ್ನೇನು ಗುರಿ ಸೇರಿಸಬೇಕೆನ್ನುವಷ್ಟರಲ್ಲಿ ಕೇರಳದ ಟಿ.ಪಿ.ರೆನ್ಶಾ ಅಡ್ಡ ಬಂದು ಆತಿಥೇಯ ನಾಯಕನ ಪ್ರಯತ್ನ ವಿಫಲಗೊಳಿಸಿದರು.ನಂತರದ ಐದು ನಿಮಿಷಗಳಲ್ಲೂ ರೋಚಕ ಹಣಾಹಣಿ ಕಂಡುಬಂತು. ಹೀಗಿದ್ದರೂ ಗೋಲು ಮಾತ್ರ ದಾಖಲಾಗಲಿಲ್ಲ.

ಚೆಟ್ರಿ ಮಾಡಿದ ಮೋಡಿ: ಮೊದಲಾರ್ಧ ದಲ್ಲಿ ಚೆಟ್ರಿ ಬಳಿ ಚೆಂಡು ಸುಳಿಯದಂತೆ ಎಚ್ಚರವಹಿಸಿದ್ದ ಕೇರಳ ಆಟಗಾರರು ವಿರಾಮದ ಬಳಿಕ ಮೈಮರೆತಂತೆ ಕಂಡರು. ಅದಕ್ಕೆ ಬೆಲೆಯನ್ನೂ ತೆತ್ತರು. 55ನೇ ನಿಮಿಷದಲ್ಲಿ ಮನಮೋಹಕ ರೀತಿಯಲ್ಲಿ ಚೆಂಡನ್ನು ಗುರಿ ಸೇರಿಸಿದ ಚೆಟ್ರಿ, ಬೆಂಗಳೂರಿನ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟುವಂತೆಮಾಡಿದರು.

ಎದುರಾಳಿ ಆವರಣದ ಬಲ ಕಾರ್ನರ್‌ನಿಂದ ದಿಮಾಸ್‌ ಡೆಲ್ಗಾಡೊ ಚೆಂಡು ಒದೆಯುವುದನ್ನೇ ಕಾಯುತ್ತಿದ್ದ ಅವರು ಕೇರಳ ತಂಡದ ಪೆನಾಲ್ಟಿ ಜಾಗದತ್ತ ಮಿಂಚಿನ ಗತಿಯಲ್ಲಿ ಓಡಿಬಂದು ಅದೇ ವೇಗದಲ್ಲಿ ಮುಂದಕ್ಕೆ ‘ಡೈವ್‌’ ಮಾಡಿದರು. ಅವರು ತಲೆತಾಗಿಸಿ ಕಳುಹಿಸಿದ ಚೆಂಡು ಕೇರಳ ತಂಡದ ಗೋಲು ಪೆಟ್ಟಿಗೆಯ ಬಲಕಂಬದ ಒಳ ಅಂಚನ್ನು ಸವರಿ ಬಲೆಗೆ ಮುತ್ತಿಕ್ಕಿತು. ಆಗ ಗ್ಯಾಲರಿಯಲ್ಲಿ ‘ನೀಲಿ ಧ್ವಜ’ಗಳು ರಾರಾಜಿಸಿದವು. ಪಂದ್ಯ ಮುಗಿಯಲು 10 ನಿಮಿಷ ಇದ್ದಾಗ 1–0 ಮುನ್ನಡೆ ಗಳಿಸಿದ್ದ ಬಿಎಫ್‌ಸಿ ನಂತರ ಇನ್ನಷ್ಟು ಆಕ್ರಮಣಕಾರಿಯಾಗಿ ಆಡಿ ಎದುರಾಳಿಗಳ ಗೆಲುವಿನ ಕನಸಿಗೆ ತಣ್ಣೀರು ಸುರಿಯಿತು.

ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ..

ಪಂದ್ಯದ 30ನೇ ನಿಮಿಷದಲ್ಲಿ ಬಿಎಫ್‌ಸಿ ತಂಡದ ಹರ್ಮನ್‌ಜ್ಯೋತ್‌ ಸಿಂಗ್ ಖಾಬ್ರಾ ಮೈದಾನದ ಮಧ್ಯಭಾಗದಿಂದ ಚೆಂಡನ್ನು ಉದಾಂತ ಸಿಂಗ್ ಅವರತ್ತ ಒದ್ದರು. ಅದನ್ನು ನಿಯಂತ್ರಣಕ್ಕೆ ಪಡೆದ ಉದಾಂತ, ಅದನ್ನು ಎದುರಾಳಿ ಆವರಣದ ಪೆನಾಲ್ಟಿ ಭಾಗದಲ್ಲಿದ್ದ ರಾಫೆಲ್ ಅಗಸ್ಟೊ ಸೆರಾನ್‌ಗೆ ವರ್ಗಾಯಿಸಿದರು. ಆ ಚೆಂಡನ್ನು ಅಗಸ್ಟೊ ತಲೆತಾಗಿಸಿ ಗುರಿ ಸೇರಿಸಿದಾಗ ಮೈದಾನದಲ್ಲಿ ಮೆಕ್ಸಿಕನ್ ಅಲೆ ಎದ್ದಿತು. ತಕ್ಷಣವೇ ‘ಫೌಲ್‌’ ತೀರ್ಪು ನೀಡಿದ ಲೈನ್‌ ರೆಫರಿ, ಉದ್ಯಾನನಗರಿಯ ಅಭಿಮಾನಿಗಳ ಸಂಭ್ರಮಕ್ಕೆ ತಣ್ಣೀರು ಸುರಿದರು!

90ನೇ ನಿಮಿಷದಲ್ಲಿ ಕೇರಳ ತಂಡದ ಕೆ.ಪಿ.ರಾಹುಲ್‌ ಕೂಡ ಗೋಲು ಗಳಿಸಿದ್ದರು. ಆದರೆ ಲೈನ್‌ ರೆಫರಿ ‘ಆಫ್‌ಸೈಡ್‌’ ಎಂದು ತೀರ್ಪು ಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.