ದೇಶದ ಫುಟ್‌ಬಾಲ್ ಅಂಗಣಗಳಲ್ಲೂ ಕಾಲ್ಚೆಂಡು ಆಟದ ಪ್ರೇಮಿಗಳ ಮನದಲ್ಲೂ ರೋಮಾಂಚನ ಸೃಷ್ಟಿಸಬಲ್ಲ ಇಂಡಿಯನ್ ಸೂಪರ್ ಲೀಗ್ ಟೂರ್ನಿಯ ಆರನೇ ಆವೃತ್ತಿಗೆ ದಿನಗಣನೆ ಆರಂಭವಾಗಿದೆ. ಹೆಚ್ಚಿನ ತಂಡಗಳು ಆಟಗಾರರನ್ನು ಬದಲಿಸಿ ಫುಟ್‌ಬಾಲ್ ಪ್ರಿಯರಿಗೆ ಪುಳಕ ನೀಡಲು ಮುಂದಾಗಿವೆ. ಕದನ ಕಣ ರಂಗೇರಿದೆ.
ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ಫುಟ್‌ಬಾಲ್ ಟೂರ್ನಿಯಲ್ಲಿ ಪಾಲ್ಗೊಳ್ಳುವ ಎಲ್ಲ ತಂಡಗಳ ಮಾಲೀಕರು ಮತ್ತು ಕೋಚ್‌ಗಳು ಆಗಸ್ಟ್ 31ರ ದಿನಕ್ಕಾಗಿ ಕಾಯುತ್ತಿದ್ದರು. ಬೇಸಿಗೆಯ ಋತು ಮುಗಿದು ತಂಡಗಳಲ್ಲಿ ಬದಲಾವಣೆ ಮಾಡಿಕೊಳ್ಳುವ ಪ್ರಕ್ರಿಯೆಯ ‘ಕಿಟಕಿ’ (ಸಮ್ಮರ್ ವಿಂಡೊ) ಅಂದು ತೆರೆದಿತ್ತು. ನಂತರದ ಕೆಲವು ದಿನ ಎಲ್ಲ ತಂಡಗಳಲ್ಲೂ ಬಿರುಸಿನ ಚಟುವಟಿಕೆ ನಡೆಯಿತು. ಅಳೆದು, ತೂಗಿ ಯಾರನ್ನು ಕಳುಹಿಸಬೇಕು, ಯಾರನ್ನು ಉಳಿಸಿಕೊಳ್ಳಬೇಕು ಮತ್ತು ಯಾರನ್ನು ಸೇರಿಸಿಕೊಳ್ಳಬೇಕು ಎಂಬ ಲೆಕ್ಕಾಚಾರದಲ್ಲಿ ಪ್ರತಿ ತಂಡಗಳೂ ಬ್ಯುಸಿಯಾಗಿದ್ದವು. ಫುಟ್‌ಬಾಲ್ ಪ್ರಿಯರಲ್ಲೂ ಕುತುಹಲ ಕೆರಳಿತ್ತು. ಸೆಪ್ಟೆಂಬರ್ 25ರಂದು ಎಲ್ಲ ಪ್ರಕ್ರಿಯೆಗಳು ಪೂರ್ಣಗೊಂಡವು. ಈಗ 10 ತಂಡಗಳು ವಿದೇಶಿ ಮತ್ತು ಸ್ವದೇಶಿ ಕೋಟಾಗಳನ್ನು ಪೂರ್ತಿಗೊಳಿಸಿ ಕಲಿಗಳನ್ನು ಕಣಕ್ಕೆ ಇಳಿಸಲು ಸಜ್ಜಾಗಿವೆ. ಎಫ್‌ಸಿ ಪುಣೆ ಮತ್ತು ಡೆಲ್ಲಿ ಡೈನಾಮೋಸ್ ತಂಡಗಳ ಬದಲಿಗೆ ಈ ಬಾರಿ ಒಡಿಶಾ ಎಫ್‌ಸಿ ಮತ್ತು ಹೈದರಾಬಾದ್ ಎಫ್‌ಸಿ ತಂಡಗಳು ಸೇರ್ಪಡೆಯಾಗಿವೆ. ಅಕ್ಟೋಬರ್ 20ರಂದು ಆರಂಭವಾಗಲಿರುವ ಟೂರ್ನಿ ಮುಂದಿನ ವರ್ಷ ಫೆಬ್ರುವರಿ ಕೊನೆಯ ವರೆಗೂ ಕಾಲ್ಚಳಕದ ರೋಮಾಂಚನ ಸೃಷ್ಟಿಸಲಿದೆ. ತಂಡಗಳಲ್ಲಿ ಕಾಣಿಸಿಕೊಂಡಿರುವ ಆಟಗಾರರು ಈಗ ಕಾಗದದ ಹುಲಿಗಳು. ಅವರು ನಿಜವಾದ ಕಲಿಗಳು ಆಗುವರೇ ಎಂಬುದು ಮುಂದಿನ ಕುತೂಹಲ.
ಮಿಕು ಇಲ್ಲದ ಚೆಟ್ರಿ ಬಳಗ
ಹಾಲಿ ಚಾಂಪಿಯನ್ ಬೆಂಗಳೂರು ಫುಟ್‌ಬಾಲ್ ಕ್ಲಬ್ (ಬಿಎಫ್‌ಸಿ) ತಂಡಕ್ಕೆ ಈ ಆವೃತ್ತಿ ಸವಾ ಲಿನದ್ದು. ಎರಡು ವರ್ಷಗಳಿಂದ ತಂಡಕ್ಕೆ ಬಲ ತುಂಬಿದ್ದ ಸ್ಟ್ರೈಕರ್ ಮಿಕು ಈ ಬಾರಿ ತಂಡ ದಲ್ಲಿಲ್ಲ. ವೆನೆಜುವೆಲಾದ ಈ ಆಟಗಾರನನ್ನು ಬಿಎಫ್‌ಸಿ ಅಭಿ ಮಾನಿಗಳು ‘ತವರಿನ ಮಗ’ನಂತೆ ಕಂಡಿದ್ದರು. ಸುನಿಲ್ ಚೆಟ್ರಿ, ಉದಾಂತ ಸಿಂಗ್, ಗುರುಪ್ರೀತ್ ಸಿಂಗ್ ಸಂಧು, ರಾಹುಲ್ ಭೆಕೆ ಮುಂತಾದ ಭಾರತೀಯ ಆಟಗಾರರನ್ನು ಉಳಿಸಿಕೊಳ್ಳಲು ಯಶಸ್ವಿಯಾದ ಬಿಎಫ್‌ಸಿಯಲ್ಲಿ ಫ್ರಾನ್ಸಿಸ್ಕೊ ಹೆರ್ನಾಂಡಸ್ ಕೂಡ ಇಲ್ಲ. ಆಲ್ಬರ್ಟ್ ಸೆರಾನ್, ಜುವಾನನ್ ದಿಮಾಸ್ ಡೆಲ್ಗಾಡೊ, ಎರಿಕ್ ಪಾರ್ಟಲು ಮುಂತಾದ ವಿದೇಶಿ ಆಟಗಾರರನ್ನೂ ತಂಡ ಉಳಿಸಿಕೊಂಡಿದೆ. ಚೆನ್ನೈಯಿನ್ ಎಫ್‌ಸಿಯಲ್ಲಿದ್ದ ಬ್ರೆಜಿಲ್ ಆಟಗಾರ ರಾಫೆಲ್ ಆಗಸ್ಟೊ,
ಲಾ ಲಿಗಾ ಟೂರ್ನಿಯಲ್ಲಿ ಮಿಂಚಿದ್ದ ಸ್ಪೇನ್‌ನ ಮ್ಯಾನ್ಯುಯೆಲ್ ಒನ್ವು ಅವರನ್ನು ತಂಡ ಕರೆಸಿಕೊಂಡಿದೆ. ಎರಡು ವರ್ಷ ಪುಣೆ ಸಿಟಿಯಲ್ಲಿದ್ದ ಆಶಿಕ್ ಕುರುಣಿಯನ್ ಕೂಡ ಬಿಎಫ್‌ಸಿಯಲ್ಲಿ ಹೊಸಮುಖ. ಬಲಿಷ್ಠ ತಂಡ ಕಟ್ಟಿರುವ ಕಾರ್ಲ್ಸ್ ಕ್ವದ್ರತ್ ಮೂವರು ಹೊಸಬರನ್ನು ಯಾವ ರೀತಿ ಬಳಸಿಕೊಳ್ಳುತ್ತಾರೆ ಎಂಬುದು ಫುಟ್‌ಬಾಲ್ ಪ್ರಿಯರ ಕುತೂಹಲ.
ಸ್ಟಾರ್‌ಗಳನ್ನು ಉಳಿಸಿಕೊಂಡ ಗೋವಾ
ಕಳೆದ ಬಾರಿಯ ರನ್ನರ್ ಅಪ್ ಎಫ್‌ಸಿ ಗೋವಾ ತಂಡ ಹಿಂದಿನ ಸಲದ ಸ್ಟಾರ್ ಆಟಗಾರರನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಫೆರಾನ್ ಕೊರೊಮಿನಾಸ್, ಹ್ಯೂಜೊ ಬೌಮೊಸ್, ಅಹಮ್ಮದ್ ಜಹೊ, ಕಾರ್ಲೊಸ್ ಪೆನಾ, ಬ್ರೆಂಡನ್ ಮತ್ತು ಸೆರಿಟನ್ ಫರ್ನಾಂಡಸ್ ಅವರು ಈ ಬಾರಿಯೂ ಗೋವಾದ ಶಕ್ತಿಯಾಗಿ ಉಳಿದಿದ್ದಾರೆ. ಕೇರಳ ಬ್ಲಾಸ್ಟರ್ಸ್‌ನಿಂದ ಬಂದಿರುವ ಸೆಮಿನ್ಲೆನ್ ಡೊಂಜೆಲ್ ಮತ್ತು ಶಿಲಾಂಗ್ ಲಜೊಂಗ್‌ನಿಂದ ಬಂದಿರುವ ಐಬನ್ ಡೊಹ್ಲಿಂಗ್ ಎಫ್‌ಸಿ ಗೋವಾದ ನಿರೀಕ್ಷೆಗಳನ್ನು ಹೆಚ್ಚಿಸಿದೆ.
ಚೆನ್ನೈಯಿನ್‌ನಲ್ಲಿ ಅಫ್ಗಾನಿಸ್ತಾನದ ಮಸಿಹ್
ಎರಡು ಬಾರಿಯ ಚಾಂಪಿಯನ್ ಚೆನ್ನೈಯಿನ್ ಎಫ್‌ಸಿ ಈ ಬಾರಿ ಭಾರಿ ಬದಲಾವಣೆಗಳನ್ನು ಮಾಡಿಕೊಂಡಿದೆ. ನಾಯಕ ಮೇಲ್ಸನ್ ಆಳ್ವಸ್, ಮಿಡ್‌ಫೀಲ್ಡರ್ ಗ್ರೆಗರಿ ನೆಲ್ಸನ್ ಮತ್ತು ರಾಫೆಲ್ ಆಗಸ್ಟೊ ಅವರನ್ನು ಕಳೆದುಕೊಂಡಿರುವ ತಂಡ ವಿದೇಶಿ ಆಟಗಾರರ ಕೋಟಾದಲ್ಲಿ ಹೊಸಬರಿಗೇ ಒತ್ತು ನೀಡಿದೆ. ಎಲಿ ಸಬಿಯಾ ಅವರೊಂದಿಗೆ ಒಪ್ಪಂದ ಮುಂದುವರಿಸಿದ್ದು ಲೂಸಿಯನ್ ಗೋಯನ್ ಮತ್ತು ಅಫ್ಗಾನಿಸ್ತಾನದ ಮಸಿಹ್ ಸೈಗಾನಿ ಅವರನ್ನು ಕರೆಸಿಕೊಂಡಿದೆ. ಎಡ್ವಿನ್ ವನ್ಸ್ ಪಾಲ್ ಮತ್ತು ನೆರಿಜಿಉಸ್ ವಲ್ಸ್ ಕಿಸ್ ಅವರು ಫಾರ್ವರ್ಡ್ ವಿಭಾಗದಲ್ಲಿ ಜೆಜೆ ಲಾಲ್‌ಫೆಕ್ಲುವಾಗೆ ಸಹಕಾರ ನೀಡಲು ಬಂದಿದ್ದಾರೆ.
ಎಟಿಕೆಗೆ ಹೊಸತನದ ಕಳೆ
ಎಟಿಕೆ ತಂಡ ಹೊಸತನದ ಕಳೆ ಹೊಂದಿದೆ. ವಿದೇಶಿ ಆಟಗಾರರ ಕೋಟಾದಲ್ಲಿ ಜಾನ್ ಜಾನ್ಸನ್ ಅವರನ್ನು ಮಾತ್ರ ಉಳಿಸಿಕೊಂಡಿರುವ ತಂಡ ಮ್ಯಾನ್ಯುಯೆಲ್ ಲಾನ್ಜರೊಟೆ, ಆ್ಯಂಡ್ರೆ ಬಿಕಿ, ಎವರ್ಟನ್ ಸಾಂಟೋಸ್ ಮುಂತಾದವರನ್ನು ಕಳುಹಿಸಿಕೊಟ್ಟಿದೆ. ಹೆಸರಾಂತ ಆಟಗಾರರಾದ ರಾಯ್ ಕೃಷ್ಣ, ಡೇವಿಡ್ ವಿಲಿಯಮ್ಸ್, ದರಿಯೊ ವಿಡೊಸಿಚ್, ಆಗಸ್ಟಿನ್ ಗ್ರೇಸಿಯಾ, ಜೇವಿಯರ್ ಹೆರ್ನಾಂಡಜ್ ಮತ್ತು ಕಾರ್ಲ್ ಮೆಕ್ ಹ್ಯೂ ಅವರನ್ನು ಕರೆಸಿಕೊಂಡಿದೆ. ಅನಾಸ್ ಎಡತೋಡಿಕಾ, ಮೈಕಲ್ ಸುಸೈರಾಜ್, ಧೀರಜ್ ಸಿಂಗ್ ಮೊದಲಾದವರೂ ತಂಡಕ್ಕೆ ಬಲ ತುಂಬಲು ಬಂದಿದ್ದಾರೆ.
ಕೇರಳಕ್ಕೆ ಕಳೆದ ಬಾರಿಯ ಹೀರೊಗಳ ಬಲ
ಕೇರಳ ಬ್ಲಾಸ್ಟರ್ಸ್ ಈ ಬಾರಿ ಕಳೆದ ಸಲದ ಹೀರೊಗಳ ಮೇಲೆ ಕಣ್ಣಿಟ್ಟು ತಂಡ ಕಟ್ಟಿದೆ. ವಿದೇಶದ ಎಲ್ಲ ಏಳೂ ಆಟಗಾರರನ್ನು ಬದಲಿಸಿದ್ದು ಬಾರ್ತಲೋಮಿ ಒಗ್ಬೆಚೆ, ಸರ್ಜಿಯೊ ಸಿಡೋಂಚ, ಮಾರಿಯೊ ಆರ್ಕಿಸ್, ಜಿಯಾನ್ ಜುವೆರ್ಲೂನ್, ಜೈರೊ ರಾಡ್ರಿಗಸ್, ಮೊಹಮ್ಮದ್ ಮುಸ್ತಫಾ, ರಾಫೆಲ್ ಎರಿಕ್ ಮೆಸ್ಸಿ ಮುಂತಾದವರು ತಂಡಕ್ಕೆ ಬಂದಿದ್ದಾರೆ. ಧೀರಜ್ ಮತ್ತು ನವೀನ್ ಕುಮಾರ್ ತಂಡವನ್ನು ತೊರೆದಿದ್ದಾರೆ. ಆದರೆ ಸ್ಥಳೀಯ ಆಟಗಾರರಾದ ಅನಾಸ್ ಮತ್ತು ಸಿ.ಕೆ.ವಿನೀತ್ ಅವರನ್ನು ಕೈಬಿಟ್ಟು ತವರಿನ ಪ್ರೇಕ್ಷಕರನ್ನು ಆಡಳಿತ ನಿರಾಸೆಗೊಳಿಸಿದೆ. ಈ ಕೊರತೆಯನ್ನು ನೀಗಿಸಲು ಮೊಹಮ್ಮದ್ ರಫಿ ತಂಡಕ್ಕೆ ಮರಳಿದ್ದಾರೆ. ಕಳೆದ ಎರಡು ಆವೃತ್ತಿಗಳಲ್ಲಿ ಅವರು ತಂಡದಲ್ಲಿರಲಿಲ್ಲ.
ಮುಂಬೈಗೆ ಮಿಡ್ ಫೀಲ್ಡ್ ಬಲಪಡಿಸುವ ಛಲ
ಕೋಚ್ ಜಾರ್ಜ್ ಕೋಸ್ಟಾ ಅವರೊಂದಿಗಿನ ಒಪ್ಪಂದ ಮುಂದುವರಿಸಿರುವ ಮುಂಬೈ ಸಿಟಿ ಎಫ್‌ಸಿ ನಾಯಕ ಪೌಲೊ ಮಚಾದೊ ಅವರನ್ನೂ ಮುಂದುವರಿಸಲು ನಿರ್ಧರಿಸಿದೆ. ಮಿಡ್‌ಫೀಲ್ಡ್ ವಿಭಾಗವನ್ನು ಬಲಪಡಿಸಲು ಹೆಚ್ಚು ಗಮನ ನೀಡಿರುವ ತಂಡದ ಆಡಳಿತವು ಮಿಲನ್, ಅರ್ನಾಲ್ಡ್ ಇಸೊಕೊ ಮತ್ತು ಶೆಹನಾಜ್ ಸಿಂಗ್ ಅವರನ್ನು ವಾಪಸ್ ಕಳುಹಿಸಿ ರೌಲಿಂಗ್ ಬೋರ್ಜೆಸ್, ಸರ್ಜ್ ಕೆವಿನ್, ಡೀಗೊ ಕಾರ್ಲೋಸ್ ಅವರನ್ನು ಕರೆಸಿಕೊಂಡಿದೆ.
ಕೋಚ್ ಬದಲಾಯಿಸಿದ ಜೆಎಫ್‌ಸಿ
ಜೆಮ್‌ಶೆಡ್‌ಪುರ ಎಫ್‌ಸಿ ತಂಡದ ಆಡಳಿತ ಕೋಚ್ ಆ್ಯಂಟೊನಿಯೊ ಇರಿಯಂಡೊ ಅವರನ್ನು ಬದಲಿಸಿ ಸ್ಪೇನ್‌ನವರೇ ಆದ ಸೀಸರ್ ಫೆರಾಂಡೊಗೆ ಅವಕಾಶ ನೀಡಿದೆ. ಸಿಡೊಂಚಾ ಮತ್ತು ಆರ್ಕಿಸ್ ಅವರನ್ನು ಕಳೆದುಕೊಂಡಿರುವ ತಂಡ ಟಿಮ್ ಕಾಹಿಲ್ ಅವರನ್ನು ಉಳಿಸಿಕೊಂಡಿದೆ. ಅನುಭವಿಗಳಾದ ಪೀಟಿ, ನೊಯ್ ಅಕೊಸ್ಟ, ಸರ್ಜಿಯೊ ಕಾಸೆಲ್, ಐತರ್ ಮೊನ್ರೊಯ್ ಅವರಿಂದ ತಂಡ ಭರವಸೆ ಹೊಂದಿದೆ. ಯುವ ಆಟಗಾರರಾದ ಅಮರ್‌ಜೀತ್ ಸಿಂಗ್ ಮತ್ತು ನರೇಂದರ್ ಗೆಹ್ಲೊಟ್ ಅವರ ಕಾಲ್ಚಳಕ ನೋಡುವ ಕುತೂಹಲವೂ ಪ್ರೇಕ್ಷಕರನ್ನು ತುದಿಗಾಲಲ್ಲಿ ನಿಲ್ಲಿಸಿದೆ.
ಇದನ್ನೂ ಓದಿ:ಕುರಿಗಾಹಿ ಹುಡುಗ ಗೋಲ್ ಕೀಪರ್ ಆದದ್ದು
ಒಗ್ಬೆಚೆ ಹೊರಗೆ; ಗಾಲೆಗೊ ಒಳಗೆ
ನಾರ್ತ್ ಈಸ್ಟ್ ಯುನೈಟೆಡ್ ಪ್ರಮುಖ ಆಟಗಾರರನ್ನು ಕಳೆದುಕೊಂಡು ನಿರಾಸೆಗೆ ಒಳಗಾಗಿದೆ. ಒಗ್ಬೆಚೆ, ಬೋರ್ಜೆಸ್, ಗ್ರಿಕ್ ಮುಂತಾದವರು ತಂಡವನ್ನು ತೊರೆದಿದ್ದಾರೆ. ಆದರೆ ಫೆಡೆರಿಕೊ ಗಾಲೆಗೊ ಅವರನ್ನು ಸೇರಿಸಿಕೊಳ್ಳಲು ತಂಡ ಯಶಸ್ವಿಯಾಗಿದೆ. ಕೋಚ್ ಶಟೋರಿ ಅವರ ಸ್ಥಾನವನ್ನು ರಾಬರ್ಟ್ ಜಾರ್ನಿ ತುಂಬಿಕೊಳ್ಳಲಿದ್ದಾರೆ. ಯುವ ಆಟಗಾರರಾದ ರೆಡೀಮ್ ತ್ಲಾಂಗ್, ಲಾಲ್ ತತಾಂಗ್ ಹಾಗೂ ಮಾರಿಯೊ ಕಾಲ್ವಸ್ ಮೇಲೆ ತಂಡದ ನಿರೀಕ್ಷೆಯ ಭಾರವಿದೆ.
ಫುಟ್‌ಬಾಲ್ ಪರಂಪೆಯ ನಾಡಿನಿಂದ
ಈ ಬಾರಿಯ ಮತ್ತೊಂದು ಹೊಸ ತಂಡ ಹೈದರಾಬಾದ್ ಎಫ್‌ಸಿ. ಫುಟ್‌ಬಾಲ್‌ನ ಪರಂಪರೆ ಹೊಂದಿರುವ ಹೈದರಾಬಾದ್‌ನಿಂದ ಐಎಸ್‌ಎಲ್‌ನಲ್ಲಿ ಪಾಲ್ಗೊಳ್ಳುತ್ತಿರುವ ಮೊದಲ ತಂಡ ಇದು. ವಿಜಯ್ ಮದ್ದೂರಿ ಮತ್ತು ವರುಣ್ ತ್ರಿಪುರನೇನಿ ಮಾಲೀಕತ್ವದ ತಂಡ ಹೈದರಾಬಾದ್ ನಗರದ ಪ್ರಮುಖ ಆಕರ್ಷಣೆಯಾದ ಚಾರ್ ಮಿನಾರ್ ಆಕೃತಿಯ ಲಾಂಛನವನ್ನು ಹೊಂದಿದೆ. ಫಿಲ್ ಬ್ರಾನ್ ಕೋಚ್ ಆಗಿರುವ ತಂಡದಲ್ಲಿ ಪ್ರಮುಖ ಆಟಗಾರರ ಕೊರತೆ ಇದೆ. ಫಾರ್ವರ್ಡ್‌ಗಳಾದ ಮಾರ್ಸೆಲೊ ಪೆರೇರ, ಅಭಿಷೇಕ್ ಹಲ್ದರ್, ಡಿಫೆಂಡರ್ ಸಾಹಿಲ್ ಪನ್ವರ್ ಅವರನ್ನು ಬಿಟ್ಟರೆ ಉಳಿದವರೆಲ್ಲ ಅನನುಭವಿ ಆಟಗಾರರು.
ಅಮಾ ಟೀಮ್
ಅಮಾ ಗೇಮ್
ಐಎಸ್‌ಎಲ್‌ಗೆ ಹೊಸ ಸೇರ್ಪಡೆ ಒಡಿಶಾ ಎಫ್‌ಸಿ. ಅಮಾ ಟೀಮ್; ಅಮಾ ಗೇಮ್ (ನಮ್ಮ ತಂಡ; ನಮ್ಮ ಆಟ) ಎಂಬ ಘೋಷಣೆಯೊಂದಿಗೆ ಕಣಕ್ಕೆ ಇಳಿಯಲಿರುವ ತಂಡ ಹಡಗು ಮತ್ತು ಸಾಗರೋತ್ಪನ್ನಗಳ ಮಾರಾಟ ಮಾಡುವ ಜಿಎಂಎಸ್ ಎಂಬ ಕಂಪನಿಯ ಮಾಲೀಕತ್ವದ್ದು. ಡೆಲ್ಲಿ ಸಾಕರ್ ಪ್ರೈವೆಟ್ ಲಿಮಿಟೆಡ್ ಎಂಬ ಸಂಸ್ಥೆಯ ಸಹಯೋಗವೂ ತಂಡಕ್ಕೆ ಇದೆ. ಒಡಿಶಾದ ಕೊನಾರ್ಕ್ ದೇವಾಲಯದ ಚಕ್ರವನ್ನು ಹೋಲುವ ಲಾಂಛನ ಹೊಂದಿರುವ ತಂಡ ಕ್ರೀಡೆಯೊಂದಿಗೆ ಸ್ಥಳೀಯ ಸಂಸ್ಕೃತಿ-ಪರಂಪರೆಯ ಸ್ವಾದವನ್ನೂ ನೀಡಲು ಸಜ್ಜಾಗಿದೆ.
ಹೆಚ್ಚು ಗೋಲು ತಡೆದ ತಂಡಗಳು
ಗೋವಾ- 300, ಡೆಲ್ಲಿ -277, ಮುಂಬೈ-275, ಪುಣೆ- 260, ನಾರ್ತ್ ಈಸ್ಟ್- 247
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.