ADVERTISEMENT

ಫುಟ್‌ಬಾಲ್‌ ದಿಗ್ಗಜ ತುಳಸೀದಾಸ್ ನಿಧನ

ರೋಮ್‌ ಒಲಿಂಪಿಕ್ಸ್‌ನಲ್ಲಿ ಹಂಗರಿ ಎದುರು ಗೋಲು ಗಳಿಸಿದ್ದ ಆಟಗಾರ

ಪಿಟಿಐ
Published 16 ಫೆಬ್ರುವರಿ 2023, 19:22 IST
Last Updated 16 ಫೆಬ್ರುವರಿ 2023, 19:22 IST
ಚುನಿ ಗೋಸ್ವಾಮಿ (ಎಡದಿಂದ), ಪಿ.ಕೆ.ಬ್ಯಾನರ್ಜಿ ಅವರೊಂದಿಗೆ ತುಳಸೀದಾಸ್‌
ಚುನಿ ಗೋಸ್ವಾಮಿ (ಎಡದಿಂದ), ಪಿ.ಕೆ.ಬ್ಯಾನರ್ಜಿ ಅವರೊಂದಿಗೆ ತುಳಸೀದಾಸ್‌   

ಕೋಲ್ಕತ್ತ : ಭಾರತ ಫುಟ್‌ಬಾಲ್‌ ಕ್ರೀಡೆಯ ದಿಗ್ಗಜ ಆಟಗಾರರಲ್ಲಿ ಒಬ್ಬರಾದ ಒಲಿಂಪಿಯನ್‌ ತುಳಸೀದಾಸ್‌ ಬಲರಾಮ್ ಗುರುವಾರ ನಿಧನರಾದರು.

85 ವರ್ಷದ ಅವರು ಕಳೆದ ಕೆಲ ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ಕುಟುಂಬದ ಮೂಲಗಳು ತಿಳಿಸಿವೆ. ಅವಿವಾಹಿತರಾಗಿದ್ದ ತುಳಸೀದಾಸ್‌, ಪಶ್ಚಿಮ ಬಂಗಾಳದ ಉತ್ತರ್‌ಪಾಢಾದಲ್ಲಿ ನೆಲೆಸಿದ್ದರು.

1962ರ ಏಷ್ಯನ್‌ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದಿದ್ದ ಭಾರತ ತಂಡದ ಸದಸ್ಯರಾಗಿದ್ದ ಅವರು 1960ರ ರೋಮ್ ಒಲಿಂಪಿಕ್ಸ್‌ನಲ್ಲೂ ಪಾಲ್ಗೊಂಡಿದ್ದರು. 1950 ಮತ್ತು 60ರ ದಶಕದಲ್ಲಿ ಫುಟ್‌ಬಾಲ್‌ ದಂತಕತೆ ಚುನಿ ಗೋಸ್ವಾಮಿ ಮತ್ತು ಪಿ.ಕೆ.ಬ್ಯಾನರ್ಜಿ ಅವರೊಂದಿಗೆ ಆಡಿದ್ದರು.

ADVERTISEMENT

ರೋಮ್‌ ಒಲಿಂ‍ಪಿಕ್ ಕೂಟದಲ್ಲಿ ‘ಗ್ರೂಪ್ ಆಫ್‌ ಡೆತ್‌’ನಲ್ಲಿ ಸ್ಥಾನ ಪಡೆದಿದ್ದ ಭಾರತ, ಮೊದಲ ಪಂದ್ಯದಲ್ಲಿ 1–2 ರಲ್ಲಿ ಹಂಗರಿ ಎದುರು ಸೋತಿತ್ತು. ಭಾರತ ತಂಡದ ಏಕೈಕ ಗೋಲನ್ನು ತುಳಸೀದಾಸ್‌ ಅವರು 79ನೇ ನಿಮಿಷದಲ್ಲಿ ಗಳಿಸಿದ್ದರು. ಪೆರು ವಿರುದ್ಧದ ಪಂದ್ಯದಲ್ಲೂ ಗೋಲು ಗಳಿಸಿದ್ದರು. ಫ್ರಾನ್ಸ್‌ ಎದುರಿನ ಹಣಾಹಣಿಯಲ್ಲೂ ಗಮನ ಸೆಳೆದಿದ್ದರು.

ಸೆಂಟರ್ ಫಾರ್ವರ್ಡ್‌ ಮತ್ತು ಲೆಫ್ಟ್‌ ವಿಂಗರ್‌ ಆಗಿ ಆಡುತ್ತಿದ್ದ ಅವರು ಚೆಂಡಿನ ಮೇಲೆ ಅದ್ಭುತ ನಿಯಂತ್ರಣ, ಆಕರ್ಷಕ ಡ್ರಿಬ್ಲಿಂಗ್‌ ಮತ್ತು ಚುರುಕಿನ ಪಾಸ್‌ಗಳನ್ನು ನೀಡುವ ಕೌಶಲ ಹೊಂದಿದ್ದರು.

1955 ರಿಂದ 1963ರ ವರೆಗೆ ಆಡಿದ್ದ ಅವರು ಕ್ಷಯರೋಗಕ್ಕೆ ತುತ್ತಾಗಿ ತಮ್ಮ 27ನೇ ವಯಸ್ಸಿನಲ್ಲೇ ಫುಟ್‌ಬಾಲ್‌ನಿಂದ ದೂರವಾಗಿದ್ದರು.

1956 ರಲ್ಲಿ ಮೆಲ್ಬರ್ನ್‌ ಒಲಿಂಪಿಕ್ಸ್‌ನಲ್ಲಿ ಅಂದಿನ ಯುಗೊಸ್ಲಾವಿಯಾ ವಿರುದ್ಧದ ಪಂದ್ಯದೊಂದಿಗೆ ರಾಷ್ಟ್ರೀಯ ತಂಡದಲ್ಲಿ ಪದಾರ್ಪಣೆ ಮಾಡಿದ್ದರು. 36 ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದರಲ್ಲದೆ, 10 ಗೋಲುಗಳನ್ನು ಗಳಿಸಿದ್ದರು. ಏಷ್ಯನ್‌ ಗೇಮ್ಸ್‌ನಲ್ಲಿ ನಾಲ್ಕು ಸಲ ಚೆಂಡನ್ನು ಗುರಿ ಸೇರಿಸಿದ್ದರು.

1958ರ ಏಷ್ಯನ್ ಕ್ರೀಡಾಕೂಟ ಮತ್ತು 1959ರ ಮರ್ಡೆಕಾ ಕಪ್‌ ಟೂರ್ನಿಯಲ್ಲಿ ಭಾಗವಹಿಸಿದ್ದರು. ಈ ಎರಡೂ ಕೂಟಗಳಲ್ಲಿ ಭಾರತ ತಂಡ ರನ್ನರ್ಸ್‌ ಅಪ್‌ ಆಗಿತ್ತು.

ದೇಸಿ ಫುಟ್‌ಬಾಲ್‌ನಲ್ಲಿ ಹೈದರಾಬಾದ್‌ ತಂಡದ ಪರ ನಾಲ್ಕು ಸಲ ಹಾಗೂ ಬಂಗಾಳ ತಂಡದ ಪರ ಮೂರು ಸಲ ಸಂತೋಷ್‌ ಟ್ರೋಫಿ ಜಯಿಸಿದ್ದರು. 1962 ರಲ್ಲಿ ಬಂಗಾಳ ತಂಡ, ತುಳಸೀದಾಸ್‌ ನಾಯಕತ್ವದಲ್ಲಿ ಚಾಂಪಿಯನ್‌ ಅಗಿತ್ತು.

ನಿವೃತ್ತಿಯ ಬಳಿಕ ಅವರು ವಿವಿಧ ತಂಡಗಳಿಗೆ ಕೋಚ್‌ ಆಗಿ ಕಾರ್ಯನಿರ್ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.