ನವದೆಹಲಿ: ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ಫುಟ್‌ಬಾಲ್ ಟೂರ್ನಿಯಲ್ಲಿ ಈಸ್ಟ್ ಬೆಂಗಾಲ್ ಕ್ಲಬ್ ಅನ್ನು ತಕ್ಷಣ ಸೇರ್ಪಡೆಗೊಳಿಸಬೇಕು ಎಂದು ಒತ್ತಾಯಿಸಿ ಭಾರತ ಫುಟ್‌ಬಾಲ್ ಆಟಗಾರರ ಸಂಘ (ಎಫ್‌ಪಿಎಐ) ಆಗ್ರಹಿಸಿದೆ. ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್ (ಎಐಎಫ್‌ಎಫ್) ಮತ್ತು ಫುಟ್‌ಬಾಲ್ ಸ್ಪೋರ್ಟ್ಸ್ ಡೆವಲಪ್‌ಮೆಂಟ್ ಲಿಮಿಟೆಡ್‌ಗೆ (ಎಫ್‌ಎಸ್‌ಡಿಎಲ್) ಈ ಕುರಿತು ಸಂಘವು ಶುಕ್ರವಾರ ಮನವಿ ಸಲ್ಲಿಸಿದೆ.
ಫೆಡರೇಷನ್ ಪ್ರಧಾನ ಕಾರ್ಯದರ್ಶಿ ಕುಶಾಲ್ ದಾಸ್ ಅವರಿಗೆ ಬರೆದಿರುವ ಪತ್ರದಲ್ಲಿ ವೈಯಕ್ತಿಕ ಭಿನ್ನಾಭಿಪ್ರಾಯಗಳನ್ನು ಮರೆತು ‘ಪಾರಂಪರಿಕ‘ ಕ್ಲಬ್‌ಗೆ ಅವಕಾಶ ನೀಡಲು ಸಂಬಂಧಪಟ್ಟವರು ಮುಂದಾಗಬೇಕು, ಈ ಕುರಿತು ನಿರ್ಣಯವೊಂದನ್ನು ಮಂಡಿಸಬೇಕು ಎಂದು ಎಫ್‌ಪಿಎಐ ಪ್ರಧಾನ ವ್ಯವಸ್ಥಾಪಕ ಸೈಪ್ರಸ್ ಕನ್ಫೆಕ್ಷನರ್ ಕೋರಿದ್ದಾರೆ. ಪತ್ರದ ಪ್ರತಿಯನ್ನು ಎಫ್‌ಎಸ್‌ಡಿಎಲ್‌ಗೂ ತಲುಪಿಸಲಾಗಿದೆ.
’ಈಸ್ಟ್ ಬೆಂಗಾಲ್ ಕ್ಲಬ್‌ಗೆ ಅನೇಕ ವರ್ಷಗಳ ಇತಿಹಾಸವಿದೆ. ದೇಶದ ಪ್ರಸಿದ್ಧ ಕ್ಲಬ್‌ಗಳಲ್ಲಿ ಒಂದಾಗಿರುವ ಇದಕ್ಕೆ ಲಕ್ಷಾಂತರ ಅಭಿಮಾನಿಗಳು ಇದ್ದಾರೆ. ಭಾರತದಲ್ಲಿ ಕ್ರೀಡಾ ಬೆಳವಣಿಗೆಗೆ ಇಂಥ ಅಭಿಮಾನಿಗಳ ಬೆಂಬಲ ಬೇಕಿದ್ದು ಅದನ್ನು ಉಳಿಸಬೇಕಾದರೆ ಪ್ರಸಿದ್ಧ ಕ್ಲಬ್‌ಗಳಿಗೆ ಸೂಕ್ತ ಗೌರವ ಸಲ್ಲಿಸಬೇಕಾಗಿದೆ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
‘ಭಾರತದ ಫುಟ್‌ಬಾಲ್ ಕ್ರೀಡೆಯಲ್ಲಿ ತೊಡಗಿಸಿಕೊಂಡಿರುವವರು ತಮ್ಮ ನಡುವಿನ ಭಿನ್ನಾಭಿಪ್ರಾಯಗಳನ್ನು ಬದಿಗೆ ಸರಿಸಬೇಕಾಗಿರುವ ಕಾಲವಿದು. ಕ್ರೀಡೆಯ ಬೆಳವಣಿಗೆಗಾಗಿ ಶ್ರಮಿಸಿದವರನ್ನು ಮರೆಯುವುದು ಸರಿಯಲ್ಲ’ ಎಂದೂ ಅವರು ಹೇಳಿದ್ದಾರೆ.
ಐಎಸ್‌ಎಲ್‌ನ ಮುಂದಿನ ಆವೃತ್ತಿಯಲ್ಲಿ ಈಗ ಇರುವ 10 ತಂಡಗಳನ್ನಷ್ಟೇ ಉಳಿಸಲಾಗುವುದು. ಹೊಸ ತಂಡಗಳನ್ನು ಸೇರ್ಪಡೆಗೊಳಿಸುವ ಉದ್ದೇಶವಿಲ್ಲ ಎಂದು ಗುರುವಾರ ನಡೆದ ಎಫ್‌ಎಸ್‌ಡಿಎಲ್ ಸಭೆಯಲ್ಲಿ ನಿರ್ಧರಿಸಲಾಗಿತ್ತು. ಇದರ ಬೆನ್ನಲ್ಲೇ ಎಫ್‌ಪಿಎಐ ಮನವಿ ಸಲ್ಲಿಸಲು ಮುಂದಾಗಿದೆ.
ಈಸ್ಟ್ ಬೆಂಗಾಲ್ ಕ್ಲಬ್‌ನ ಸಾಂಪ್ರದಾಯಿಕ ಎದುರಾಳಿ ಮೋಹನ್ ಬಾಗನ್ ಕ್ಲಬ್ ಎಟಿಕೆಯೊಂದಿಗೆ ಲೀನವಾಗಿ ಐಎಸ್‌ಎಲ್‌ನ ಮುಂದಿನ ಆವೃತ್ತಿಯಲ್ಲಿ ಪದಾರ್ಪಣೆ ಮಾಡಲು ಸಜ್ಜಾಗಿದೆ. ಈಸ್ಟ್ ಬೆಂಗಾಲ್ ಕೂಡ ಸೇರ್ಪಡೆಗೊಂಡರೆ ಐಎಸ್‌ಎಲ್‌ನಲ್ಲಿ ‘ಕೋಲ್ಕತ್ತ ಡರ್ಬಿ’ಗೆ ವೇದಿಕೆ ಒದಗಲಿದೆ. ಆ ತಂಡ ಐಎಸ್‌ಎಲ್‌ನಲ್ಲಿ ಕಾಣಿಸಿಕೊಳ್ಳಬೇಕೆಂಬ ಬಯಕೆಯನ್ನು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೂ ವ್ಯಕ್ತಪಡಿಸಿದ್ದಾರೆ.
‘ಭಾರತದ ಅಗ್ರ ಲೀಗ್ ಐಎಸ್‌ಎಲ್‌ನಲ್ಲಿ ಈಸ್ಟ್ ಬೆಂಗಾಲ್ ಕೂಡ ಸೇರಬೇಕು ಎಂಬುದು ನಮ್ಮ ಆಸೆ. ಮೋಹನ್ ಬಾಗನ್ ಜೊತೆ ಈ ತಂಡದ ಸೆಣಸಾಟ ನಡೆಯಲು ವೇದಿಕೆ ಒದಗಿಸಿದರೆ ಭಾರತ ಫುಟ್‌ಬಾಲ್‌ನಲ್ಲಿ ರೋಚಕ ಹೋರಾಟಗಳಿಗೆ ಅಕವಾಶ ನೀಡಿದಂತಾಗಲಿದೆ. ಈ ವಿಷಯ ನಮ್ಮ ವ್ಯಾಪ್ತಿ ಮೀರಿದ್ದು ಆಗಿರಬಹುದು. ಆದರೆ ಈಸ್ಟ್ ಬೆಂಗಾಲ್ ಕ್ಲಬ್ ಐಎಸ್‌ಎಲ್‌ನಲ್ಲಿ ಸೇರಬೇಕು ಎಂಬುದು ನಮ್ಮ ಮನದಾಳದ ಆಸೆ. ಆದ್ದರಿಂದ ಈ ಮನವಿಯನ್ನು ಪರಿಗಣಿಸಬೇಕು’ ಎಂದು ಎಫ್‌ಪಿಎಐ ಕೋರಿದೆ.
ಕ್ಲಬ್‌ನಲ್ಲಿ ಹೂಡಿಕೆ ಹೊಂದಿದ್ದ ಕ್ವೆಸ್ ಕಾರ್ಪ್ ಸಂಸ್ಥೆ ದೂರವಾದ ಕಾರಣ ಈಸ್ಟ್ ಬೆಂಗಾಲ್ ಕ್ಲಬ್ ಆರ್ಥಿಕ ಸಮಸ್ಯೆಗೆ ಸಿಲುಕಿದೆ. ಬಾಕಿ ಪಾವತಿಸುವಂತೆ ಕ್ಲಬ್‌ಗೆ ಸೂಚಿಸಬೇಕು ಎಂದು ಆಗ್ರಹಿಸಿ ಕ್ಲಬ್‌ನ ಆಟಗಾರರು ಪ್ರತಿನಿತ್ಯ ಎಐಎಫ್‌ಎಫ್‌ಗೆ ಮನವಿ ಸಲ್ಲಿಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.