ADVERTISEMENT

ವಿಮಾನ ದುರಂತ: ಫುಟ್‌ಬಾಲ್ ಆಟಗಾರರ ಸಾವು

ರಾಯಿಟರ್ಸ್
Published 24 ಜನವರಿ 2021, 18:32 IST
Last Updated 24 ಜನವರಿ 2021, 18:32 IST
ಫುಟ್‌ಬಾಲ್‌
ಫುಟ್‌ಬಾಲ್‌   

ಸಾವೊ ಪೌಲೊ: ಪಲ್ಮಾಸ್ ಫುಟ್‌ಬಾಲ್ ಕ್ಲಬ್‌ನ ಅಧ್ಯಕ್ಷ ಮತ್ತು ನಾಲ್ವರು ಆಟಗಾರರು ಭಾನುವಾರ ಸಂಭವಿಸಿದ ವಿಮಾನ ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಬ್ರೆಜಿಲಿಯನ್ ಕಪ್ ಟೂರ್ನಿಯ ಪಂದ್ಯದಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ತಂಡವನ್ನು ಕರೆದೊಯ್ಯಲು ಸಜ್ಜಾಗಿದ್ದ ಲಘು ವಿಮಾನ ಟೇಕ್ ಆಫ್ ಸಂದರ್ಭದಲ್ಲಿ ಅಪಘಾತಕಕ್ಕೆ ಈಡಾಗಿತ್ತು.

ಕ್ಲಬ್ ಅಧ್ಯಕ್ಷ ಲೂಕಾಸ್‌ ಮೇರಾ, ಆಟಗಾರರಾದ ಲೂಕಾಸ್ ಪ್ರಕ್ಸಿಡಿಸ್‌, ಗುಲೆರ್ಮೆ ನೊಯೆ, ರಣುಲ್‌ ಮತ್ತು ಮಾರ್ಕಸ್ ಮೋಲಿನರಿ ಸಾವಿಗೀಡಾಗಿರುವುದಾಗಿ ಕ್ಲಬ್ ತಿಳಿಸಿದೆ. ಪೈಲಟ್‌ ಕೂಡ ಸಾವಿಗೀಡಾಗಿದ್ದಾರೆ.

ಪಲ್ಮಾಸ್‌ನಿಂದ 800 ಕಿಲೋಮೀಟರ್ ದೂರದ ಗೊಯಾನಿಯದಲ್ಲಿ ಸೋಮವಾರ ನಡೆಯಲಿದ್ದ ವಿಲಾ ನೋವಾ ತಂಡದ ಎದುರಿನ ಪಂದ್ಯದಲ್ಲಿ ಪಾಲ್ಗೊಳ್ಳಲು ಆಟಗಾರರು ತೆರಳುತ್ತಿದ್ದರು. ಪಲ್ಮಾಸ್‌ ಬಳಿಯ ಕಿರು ವಾಯುನೆಲೆ ಟೆಕಾಟಿನೆನ್ಸ್‌ ಏವಿಯೇಷನ್ ಅಸೋಸಿಯೇಷನ್‌ನಿಂದ ಟೇಕ್ ಆಫ್‌ ಆದ ಕೆಲವೇ ಕ್ಷಣಗಳಲ್ಲಿ ವಿಮಾನ ಪತನಗೊಂಡಿತು.

ADVERTISEMENT

2016ರಲ್ಲಿ ಮೆಡಿಲಿನ್‌ ಹೊರವಲಯದ ಗುಡ್ಡದಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲಿ ತಂಡವೊಂದರ ಎಲ್ಲ ಆಟಗಾರರು ಅಸುನೀಗಿದ್ದರು. ಗೊಯಾಸ್‌ನಲ್ಲಿ ಎರಡು ವರ್ಷಗಳ ಹಿಂದೆ ಹೆಲಿಕಾಪ್ಟರ್ ಪತನಗೊಂಡ ಕಾರಣ ಬ್ರೆಜಿಲ್ ತಂಡದ ಮಾಜಿ ಫರ್ನಾಂಡೊ ನಿಧನರಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.