ADVERTISEMENT

ಐಎಸ್‌ಎಲ್‌ ಫುಟ್‌ಬಾಲ್ ಟೂರ್ನಿ: ಜಯದ ನಿರೀಕ್ಷೆಯೊಂದಿಗೆ ಮತ್ತೆ ಬಿಎಫ್‌ಸಿ ಕಣಕ್ಕೆ

ಪಿಟಿಐ
Published 1 ಫೆಬ್ರುವರಿ 2021, 13:47 IST
Last Updated 1 ಫೆಬ್ರುವರಿ 2021, 13:47 IST
ಅಭ್ಯಾಸ ನಿರತ ಬಿಎಫ್‌ಸಿ ಆಟಗಾರರು –ಐಎಸ್‌ಎಲ್‌ ಮೀಡಿಯಾ ಚಿತ್ರ
ಅಭ್ಯಾಸ ನಿರತ ಬಿಎಫ್‌ಸಿ ಆಟಗಾರರು –ಐಎಸ್‌ಎಲ್‌ ಮೀಡಿಯಾ ಚಿತ್ರ   

ವಾಸ್ಕೊ: ಸೋಲು ಮತ್ತು ಡ್ರಾಗಳಿಂದ ಕಂಗೆಟ್ಟಿರುವ ಬೆಂಗಳೂರು ಫುಟ್‌ಬಾಲ್ ಕ್ಲಬ್ (ಬಿಎಫ್‌ಸಿ) ಜಯದ ನಿರೀಕ್ಷೆಯೊಂದಿಗೆ ಮತ್ತೊಮ್ಮೆ ಕಣಕ್ಕೆ ಇಳಿಯಲು ಸಜ್ಜಾಗಿದ್ದು ಮಂಗಳವಾರ ನಡೆಯಲಿರುವ ಪಂದ್ಯದಲ್ಲಿ ಎಸ್‌ಸಿ ಈಸ್ಟ್ ಬೆಂಗಾಲ್ ತಂಡವನ್ನು ಎದುರಿಸಲಿದೆ. ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯ ಏಳನೇ ಆವೃತ್ತಿಯ ಆರಂಭದ ಆರು ಪಂದ್ಯಗಳ ಪೈಕಿ ಮೂರರಲ್ಲಿ ಜಯ ಗಳಿಸಿದ ಬಿಎಫ್‌ಸಿ ಆಮೇಲೆ ಕುಸಿತ ಕಂಡಿದೆ. ತಂಡ ಈ ವರೆಗೆ 14 ‍ಪಂದ್ಯಗಳನ್ನು ಆಡಿದ್ದು ಮೂರು ಜಯ ಮತ್ತು ಐದು ಸೋಲು ಅನುಭವಿಸಿದೆ. 15 ಪಾಯಿಂಟ್‌ಗಳೊಂದಿಗೆ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ. ಹೀಗಾಗಿ ಪ್ಲೇ ಆಫ್‌ ಹಂತಕ್ಕೇರಬೇಕಾದರೆ ಇನ್ನು ಉಳಿದ ಪಂದ್ಯಗಳಲ್ಲಿ ಉತ್ತಮ ಸಾಮರ್ಥ್ಯ ತೋರಲೇಬೇಕಾಗಿದೆ.

ಸತತ ನಾಲ್ಕು ಸೋಲುಗಳ ನಂತರ ಒಂದು ಪಂದ್ಯವನ್ನು ಡ್ರಾ ಮಾಡಿಕೊಂಡರೂ ಮತ್ತೆ ಸೋಲಿನ ಸುಳಿಯಲ್ಲಿ ಸಿಲುಕಿತ್ತು. ಹಿಂದಿನ ಎರಡು ಪಂದ್ಯಗಳನ್ನು ‌ಡ್ರಾ ಮಾಡಿಕೊಳ್ಳಲು ಮಾತ್ರ ತಂಡಕ್ಕೆ ಸಾಧ್ಯವಾಗಿದೆ. ಪಾಯಿಂಟ್ ಪಟ್ಟಿಯ ಕೊನೆಯ ಸ್ಥಾನದಲ್ಲಿರುವ ಒಡಿಶಾ ಎಫ್‌ಸಿ ಎದುರಿನ ಪಂದ್ಯವನ್ನು 1–1ರಲ್ಲಿ ಡ್ರಾ ಮಾಡಿಕೊಂಡ ತಂಡ ಹೈದರಾಬಾದ್ ಎಫ್‌ಸಿ ವಿರುದ್ಧದ ಪಂದ್ಯದಲ್ಲಿ ಕೊನೆಯ ಆರು ನಿಮಿಷಗಳಲ್ಲಿ ಎರಡು ಗೋಲುಗಳನ್ನು ಬಿಟ್ಟುಕೊಟ್ಟು ಕೈಸುಟ್ಟುಕೊಂಡಿತ್ತು.

ಅತ್ತ ಎಸ್‌ಸಿ ಈಸ್ಟ್ ಬೆಂಗಾಲ್ ಕೂಡ ಸಂಕಷ್ಟದಲ್ಲಿದೆ. ಆರಂಭದಲ್ಲಿ ಸತತ ಸೋಲುಗಳಿಂದ ಕಂಗೆಟ್ಟಿದ್ದ ತಂಡ ನಂತರ ಚೇತರಿಸಿಕೊಂಡಿತ್ತು. ಆದರೆ ನಂತರ ನಿರಾಸೆಯ ಕೂಪಕ್ಕೆ ಬಿದ್ದಿದೆ. ಹಿಂದಿನ ನಾಲ್ಕು ಪಂದ್ಯಗಳಲ್ಲಿ ಈ ತಂಡ ಜಯ ಕಾಣಲಿಲ್ಲ. 14 ಪಂದ್ಯಗಳಲ್ಲಿ 13 ಪಾಯಿಂಟ್ ಮಾತ್ರ ಕಲೆ ಹಾಕಿರುವ ಕೋಚ್‌ ರಾಬಿ ಫಾವ್ಲರ್ ಬಳಗ ಪಾಯಿಂಟ್ ಪಟ್ಟಿಯಲ್ಲಿ ಕೊನೆಯಿಂದ ಎರಡನೇ ಸ್ಥಾನದಲ್ಲಿದೆ.

ADVERTISEMENT

ಅವಕಾಶಗಳನ್ನು ಗೋಲಾಗಿ ಪರಿವರ್ತಿಸಲು ಸಾಧ್ಯವಾಗದೇ ಇರುವುದು ಈಸ್ಟ್ ಬೆಂಗಾಲ್ ತಂಡವನ್ನು ಚಿಂತೆಗೆ ಈಡು ಮಾಡಿದೆ. ಲೀಗ್‌ನಲ್ಲಿ ಈ ವರೆಗೆ ತಂಡ ಗಳಿಸಿರುವುದು 12 ಗೋಲು ಮಾತ್ರ. ಚೆನ್ನೈಯಿನ್ ಎಫ್‌ಸಿ (11) ಬಿಟ್ಟರೆ ಕಡಿಮೆ ಗೋಲು ಗಳಿಸಿರುವ ತಂಡ ಈಸ್ಟ್ ಬೆಂಗಾಲ್‌. ತಂಡಕ್ಕೆ ಅಗ್ರ ನಾಲ್ಕರಲ್ಲಿ ಸ್ಥಾನ ಗಳಿಸಲು ಇನ್ನು ನಾಲ್ಕು ಪಾಯಿಂಟ್‌ಗಳು ಬೇಕಾಗಿವೆ. ಹೀಗಾಗಿ ‍‍‍ಪ್ಲೇ ಆಫ್ ಹಂತಕ್ಕೇರುವ ಅವಕಾಶ ಇನ್ನೂ ಇದೆ ಎಂಬುದು ಫಾವ್ಲರ್ ಭರವಸೆ.

ಹಿಂದಿನ ಎಂಟು ಪಂದ್ಯಗಳಲ್ಲಿ ಗೆಲುವು ಕಾಣದೇ ಇರುವ ಬಿಎಫ್‌ಸಿ ಅವುಗಳ ಪೈಕಿ ಐದರಲ್ಲಿ ಸೋತಿದೆ. ಐಎಸ್‌ಎಲ್‌ನ ಚಾಣಾಕ್ಷ ಗೋಲ್‌ಕೀಪರ್‌ಗಳಲ್ಲಿ ಒಬ್ಬರಾಗಿರುವ ಗುರುಪ್ರೀತ್ ಸಿಂಗ್ ಸಂಧು ಅವರಿದ್ದೂ ತಂಡ ನಿರಂತರವಾಗಿ ಗೋಲುಗಳನ್ನು ಬಿಟ್ಟುಕೊಡುತ್ತಿದೆ. ಒಟ್ಟು 11 ಪಂದ್ಯಗಳಲ್ಲಿ ಕ್ಲೀನ್ ಶೀಟ್‌ ಉಳಿಸಿಕೊಳ್ಳಲು ತಂಡಕ್ಕೆ ಸಾಧ್ಯವಾಗಲಿಲ್ಲ. ತಂಡ 19 ಗೋಲುಗಳನ್ನು ಬಿಟ್ಟುಕೊಟ್ಟಿದೆ. ಕೇರಳ (25) ಮತ್ತು ಒಡಿಶಾ (20) ಮಾತ್ರ ಬಿಎಫ್‌ಸಿಗಿಂತ ಹೆಚ್ಚು ಗೋಲು ಬಿಟ್ಟುಕೊಟ್ಟಿವೆ.

ಬಿಎಫ್‌ಸಿ ಈ ವರೆಗೆ ಜಯದ ಹಾದಿಯಲ್ಲಿ ಎಡವಿ ಒಟ್ಟು ಒಂಬತ್ತು ಪಾಯಿಂಟ್‌ಗಳನ್ನು ಬಿಟ್ಟುಕೊಟ್ಟಿದೆ. ಮಂಗಳವಾರದ ಪಂದ್ಯಕ್ಕೆ ಎರಿಕ್ ಪಾರ್ಟಲು ಮತ್ತು ಜುವಾನನ್ ಲಭ್ಯ ಇರುವುದಿಲ್ಲ ಎಂಬುದು ಬಿಎಫ್‌ಸಿಯ ಗಾಯದ ಮೇಲೆ ಬರೆ ಎಳೆದಿದೆ.

‘ತಂಡ ನೀರಸ ಪ್ರದರ್ಶನ ನೀಡಿರುವುದು ನಿಜ. ಆದರೆ ಇನ್ನು ಕೇವಲ ಒಂದು ಜಯ ಗಳಿಸಿದರೆ ಪ್ಲೇ ಆ‍ಫ್‌ ಹಂತಕ್ಕೇರುವ ಹಾದಿ ಸುಗಮವಾಗಲಿದೆ. ಆದ್ದರಿಂದ ಭರವಸೆ ಇನ್ನೂ ಕೈಬಿಟ್ಟಿಲ್ಲ’ ಎಂದು ಹಂಗಾಮಿ ಕೋಚ್ ನೌಶಾದ್ ಮೂಸಾ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.