ADVERTISEMENT

74ರ ಅಜ್ಜನಿಗೆ ದಾಖಲೆಯ ‘ಹಿರಿ’ಮೆ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2020, 19:30 IST
Last Updated 19 ಅಕ್ಟೋಬರ್ 2020, 19:30 IST
ತಂಡದ ಸಹ ಆಟಗಾರರ ಜೊತೆ ಸಂಭ್ರಮಿಸಿದ ಎಜೆಲ್ದಿನ್ ಬಹದೇರ್ (ಎಡ) –ರಾಯಿಟರ್ಸ್ ಚಿತ್ರ
ತಂಡದ ಸಹ ಆಟಗಾರರ ಜೊತೆ ಸಂಭ್ರಮಿಸಿದ ಎಜೆಲ್ದಿನ್ ಬಹದೇರ್ (ಎಡ) –ರಾಯಿಟರ್ಸ್ ಚಿತ್ರ   

ಮುಂದಿನ ತಿಂಗಳ ಮೂರನೇ ತಾರೀಕು ಬಂತೆಂದರೆ ಈ ತಾತನಿಗೆ 75 ವರ್ಷ ತುಂಬುತ್ತದೆ. ಮುಕ್ಕಾಲು ಶತಮಾನದ ಸಂಭ್ರಮದ ಆಚರಣೆಗೆ ಕುಟುಂಬದವರು ಸಜ್ಜಾಗುತ್ತಿದ್ದರೆ, ತಾತ ಫುಟ್‌ಬಾಲ್ ಅಂಗಣದಲ್ಲಿ ಚೆಂಡು ಡ್ರಿಬಲ್ ಮಾಡುತ್ತಎದುರಾಳಿ ತಂಡದ ಆಟಗಾರರನ್ನು ವಂಚಿಸಿ ಮುನ್ನುಗ್ಗುವ ತಂತ್ರದಲ್ಲಿ ಮಗ್ನರಾಗಿದ್ದರು.

ಇವರು ಈಜಿಪ್ಟ್‌ನ ಎಜೆಲ್ದಿನ್ ಬಹದೇರ್. ಕೈರೊದಲ್ಲಿ ಎರಡು ದಿನಗಳ ಹಿಂದೆ ನಡೆದ ಇಐ ಅಯಾತ್ ಸ್ಪೋರ್ಟ್ಸ್ ಕ್ಲಬ್ ತಂಡದ ಎದುರಿನ ಪಂದ್ಯದಲ್ಲಿಸಿಕ್ಸ್ತ್‌ ಅಕ್ಟೋಬರ್‌ ತಂಡದ ಪರ ಕಣಕ್ಕೆ ಇಳಿದ ಅವರು ವಿಶ್ವದ ಅತಿ ಹಿರಿಯ ವೃತ್ತಿಪರ ಫುಟ್‌ಬಾಲ್ ಆಟಗಾರ ಎಂಬ ಹಿರಿಮೆಗೆ ಪಾತ್ರಾಗಿದ್ದಾರೆ.

ಇದು, ಅಂತಿಂಥ ಪಂದ್ಯವಲ್ಲ. ಈಜಿಪ್ಟ್‌ನ ಮೂರನೇ ಡಿವಿಷನ್ ಟೂರ್ನಿಯ ಹಣಾಹಣಿಯಾಗಿತ್ತು. ಅದರಲ್ಲಿಎಜೆಲ್ದಿನ್ ಬಹದೇರ್ ಪ್ರತಿನಿಧಿಸಿದ ತಂಡ 2–3ರಲ್ಲಿ ಸೋತಿತು. ಬಹದೇರ್ ಅವರಿಗೆ ಪೆನಾಲ್ಟಿ ಕಿಕ್‌ ಮೂಲಕ ಗೋಲು ಗಳಿಸುವ ಅಪೂರ್ವ ಅವಕಾಶ ಒದಗಿತ್ತು. ಅದನ್ನುಇಐ ಅಯಾತ್ ಸ್ಪೋರ್ಟ್ಸ್ ಕ್ಲಬ್‌ನ ಗೋಲ್‌ ಕೀಪರ್ ತಡೆದರು. ಆದರೆ ಪಂದ್ಯ ಮುಗಿದ ನಂತರ ಗಿನೆಸ್ ವಿಶ್ವ ದಾಖಲೆಯ ಪುಸ್ತಕದ ಪುಟಗಳಲ್ಲಿ ಬಹದೇರ್ ಹೆಸರು ಅಚ್ಚಾಯಿತು. 73ನೇ ವಯಸ್ಸಿನಲ್ಲಿ ಫುಟ್‌ಬಾಲ್ ಆಡಿದ್ದ ಇಸ್ರೇಲ್‌ನ ಐಸಾಕ್ ಹಾಯಿಕ್ ಹೆಸರಿನಲ್ಲಿ ಇಲ್ಲಿಯ ವರೆಗೆ ಈ ದಾಖಲೆ ಇತ್ತು.

ADVERTISEMENT

ಈ ಹಿಂದೆ ಹವ್ಯಾಸಿ ಫುಟ್‌ಬಾಲ್ ಆಡುತ್ತಿದ್ದಬಹದೇರ್ ಮಾರ್ಚ್‌ನಲ್ಲಿ ನಡೆದಿದ್ದ ಪಂದ್ಯದಲ್ಲಿ ವೃತ್ತಿಪರ ಫುಟ್‌ಬಾಲ್‌ಗೆ ಪದಾರ್ಪಣೆ ಮಾಡಿದ್ದರು. ಚೊಚ್ಚಲ ಪಂದ್ಯದಲ್ಲಿ ಪೆನಾಲ್ಟಿ್ ಮೂಲಕ ಗೋಲು ಗಳಿಸಿ ಗಮನ ಸೆಳೆದಿದ್ದರು. ಅದೇ ತಿಂಗಳಲ್ಲಿ ಮತ್ತೊಂದು ಪಂದ್ಯ ಆಡುವುದಕ್ಕೆ ಸಜ್ಜಾಗಿದ್ದರು. ಆದರೆ ಅಷ್ಟರಲ್ಲಿ ಕೋವಿಡ್–19 ಹಾವಳಿ ತಡೆಗಟ್ಟುವ ಸಲುವಾಗಿ ಕ್ರೀಡಾ ಚಟುವಟಿಕೆ ಸ್ಥಗಿತಗೊಂಡ ಕಾರಣ ಆಸೆ ಕೈಗೂಡಿರಲಿಲ್ಲ.

ಬಹದೇರ್ ಅವರ ಮೊಮ್ಮಕ್ಕಳ ಪೈಕಿ ಆರು ಮಂದಿ ಶನಿವಾರದ ಪಂದ್ಯದ ಸಂದರ್ಭದಲ್ಲಿ ಸ್ಟ್ಯಾಂಡ್‌ಗಳಲ್ಲಿ ಕುಳಿತಿದ್ದರು. ಪ್ರೀತಿಯ ಅಜ್ಜ ಅಂಗಣದಲ್ಲಿ ಮಿಂಚುತ್ತಿದ್ದಾಗ ಅವರು ’ಕಮಾನ್ ಗ್ರ್ಯಾನ್‌ಪಾ...ಕಮಾನ್‘ ಎಂದು ಕೂಗುತ್ತ ಹುರಿದುಂಬಿಸಿದರು. ’ಇನ್ನೂ ಒಂದು ಪಂದ್ಯ ಆಡುವ ಹುಮ್ಮಸ್ಸು ಇದೆ’ ಎಂದು ಬಹದೇರ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.