ADVERTISEMENT

ಒಡಿಶಾ ವಿರುದ್ಧ ಹೈದರಾಬಾದ್ ಜಯಭೇರಿ

ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್ ಟೂರ್ನಿ: ಪೆನಾಲ್ಟಿ ಕಿಕ್‌ನಲ್ಲಿ ಗೋಲು ಗಳಿಸಿದ ಅರಿದಾನೆ ಸಂಟಾನ

ಪಿಟಿಐ
Published 23 ನವೆಂಬರ್ 2020, 19:45 IST
Last Updated 23 ನವೆಂಬರ್ 2020, 19:45 IST
ಹೈದರಾಬಾದ್ ಎಫ್‌ಸಿ ಪರ ಗೋಲು ಗಳಿಸಿದ ಅರಿದಾನೆ ಸಂಟಾನ (ಎಡಭಾಗ) ಅವರನ್ನು ಸಹ ಆಟಗಾರರು ಅಭಿನಂದಿಸಿದರು –ಐಎಸ್‌ಎಲ್ ಮೀಡಿಯಾ ಚಿತ್ರ
ಹೈದರಾಬಾದ್ ಎಫ್‌ಸಿ ಪರ ಗೋಲು ಗಳಿಸಿದ ಅರಿದಾನೆ ಸಂಟಾನ (ಎಡಭಾಗ) ಅವರನ್ನು ಸಹ ಆಟಗಾರರು ಅಭಿನಂದಿಸಿದರು –ಐಎಸ್‌ಎಲ್ ಮೀಡಿಯಾ ಚಿತ್ರ   

ಬ್ಯಾಂಬೊಲಿಮ್: ಪೆನಾಲ್ಟಿ ಅವಕಾಶದಲ್ಲಿ ಅರಿದಾನೆ ಸಂಟಾನ ಗಳಿಸಿದ ಗೋಲಿನ ಬಲದಿಂದ ಹೈದರಾಬಾದ್ ಎಫ್‌ಸಿ ತಂಡ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯ ಸೋಮವಾರದ ಪಂದ್ಯದಲ್ಲಿ ಒಡಿಶಾ ಎಫ್‌ಸಿಯನ್ನು 1–0ಯಿಂದ ಮಣಿಸಿತು. ಇಲ್ಲಿನ ಜಿಎಂಸಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಹೈದರಾಬಾದ್ ಸಂಪೂರ್ಣ ಆಧಿಪತ್ಯ ಸ್ಥಾಪಿಸಿತು. ಲಭಿಸಿದ ಫ್ರೀ ಕಿಕ್‌ ಅವಕಾಶವನ್ನು ಕೈಚೆಲ್ಲಿದ ಒಡಿಶಾ ಎಫ್‌ಸಿ ನಿರಾಸೆಗೆ ಒಳಗಾಯಿತು.

ಎರಡೂ ತಂಡಗಳು ಕಳೆದ ಆವೃತ್ತಿಯಲ್ಲಿ ಮೊದಲ ಬಾರಿ ಕಣಕ್ಕೆ ಇಳಿದಿದ್ದವು. ಕಳೆದ ವರ್ಷ ನಡೆದ ಎರಡೂ ಮುಖಾಮುಖಿಗಳಲ್ಲಿ ಒಡಿಶಾ ಎಫ್‌ಸಿ ತಂಡ ಹೈದರಾಬಾದ್ ಎಫ್‌ಸಿಯನ್ನು ಮಣಿಸಿತ್ತು. ಹೀಗಾಗಿ ಸೇಡು ತೀರಿಸಿಕೊಳ್ಳುವ ಲೆಕ್ಕಾಚಾರದೊಂದಿಗೆ ಹೈದರಾಬಾದ್ ಕಣಕ್ಕೆಇಳಿದಿತ್ತು. ಇದಕ್ಕೆ ತಕ್ಕಂತೆ ಆರಂಭದಲ್ಲೇ ಆಕ್ರಮಣಕಾರಿ ಆಟಕ್ಕೆ ಮುಂದಾಯಿತು. ಆದ್ದರಿಂದ ಒಡಿಶಾ ಎಫ್‌ಸಿಯ ರಕ್ಷಣಾ ವಿಭಾಗದವರು ತಬ್ಬಿಬ್ಬಾದರು. 21ನೇ ನಿಮಿಷದಲ್ಲಿ ಅರಿದಾನೆ ಸಂಟಾನ ಚೆಂಡಿನೊಂದಿಗೆ ಮುನ್ನುಗ್ಗಿದರು. ಆದರೆ ಒಡಿಶಾ ಆಟಗಾರ ಆ ಪ್ರಯತ್ನವನ್ನು ವಿಫಲಗೊಳಿಸಿದರು.

35ನೇ ನಿಮಿಷದಲ್ಲಿ ಹೈದರಾಬಾದ್ ಪರ ಉತ್ತಮ ಅವಕಾಶ ಸೃಷ್ಟಿಯಾಯಿತು. ಸುಲಭವಾಗಿ ತಮ್ಮತ್ತ ಬಂದ ಚೆಂಡನ್ನು ಹಾಲಿಚರಣ್ ನಜರೆ ಗೋಲುಪೆಟ್ಟಿಗೆಯತ್ತ ಒದ್ದರು. ತಡೆಯಲು ಬಂದ ಸ್ಟೀವನ್ ವಿನ್ಸೆಂಟ್ ಟೇಲರ್ ಅವರ ಕೈಗೆ ಚೆಂಡು ಸೋಕಿತು. ಹೀಗಾಗಿ ಹೈದರಾಬಾದ್‌ಗೆ ಪೆನಾಲ್ಟಿ ಅವಕಾಶ ಲಭಿಸಿತು. ಅರಿದಾನೆ ಚೆಂಡನ್ನು ನೇರವಾಗಿ ಬಲೆಯೊಳಗೆ ಒದ್ದರು. ಗೋಲ್‌ಕೀಪರ್ ಆರ್ಷದೀಪ್ ಸಿಂಗ್ ಬಲಬದಿಗೆ ಡೈವ್ ಮಾಡುವಷ್ಟರಲ್ಲಿ ಚೆಂಡು ಬಲೆಗೆ ಮುತ್ತಿಕ್ಕಿತು.

ADVERTISEMENT

ಮೊದಲಾರ್ಧದ ಮುಕ್ತಾಯಕ್ಕೆ ನಾಲ್ಕು ನಿಮಿಷ ಬಾಕಿ ಇರುವಾಗ ಸಮಬಲ ಸಾಧಿಸಲು ಒಡಿಶಾ ತಂಡಕ್ಕೆ ಸುವರ್ಣಾವಕಾಶ ಲಭಿಸಿತ್ತು. ಆದರೆ ಸುಬ್ರತಾ ಪಾಲ್ ಅವರ ಗೋಡೆಯನ್ನು ಕೆಡವಲು ತಂಡಕ್ಕೆ ಸಾಧ್ಯವಾಗಲಿಲ್ಲ. ಹೈದರಾಬಾದ್‌ನ ಲೂಯಿಸ್ ಸಾಸ್ತ್ರೆ ಗೋಲುಪೆಟ್ಟಿಗೆಯ ಬಳಿ ತಪ್ಪು ಎಸಗಿ ಎದುರಾಳಿ ತಂಡಕ್ಕೆ ಫ್ರೀ ಕಿಕ್ ಅವಕಾಶ ಒದಗಿಸಿದರು. ಮ್ಯಾನ್ಯುಯೆಲ್ ಒನ್ವು ಚೆಂಡನ್ನು ಗುರಿಯತ್ತ ಒದ್ದರು. ಆದರೆ ಸುಬ್ರತಾ ಪಾಲ್ ಚೆಂಡು ತಡೆದು ತಂಡವನ್ನು ಅಪಾಯದಿಂದ ಪಾರು ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.