ADVERTISEMENT

ತಡೆಯುತ್ತಾರೆ ಗೋಲ್‌ ಮಾಡುತ್ತಾರೆ ಕಮಾಲ್‌

ವಿಕ್ರಂ ಕಾಂತಿಕೆರೆ
Published 3 ಫೆಬ್ರುವರಿ 2019, 19:30 IST
Last Updated 3 ಫೆಬ್ರುವರಿ 2019, 19:30 IST
ಗುರುಪ್ರೀತ್ ಸಿಂಗ್ ಸಂಧು
ಗುರುಪ್ರೀತ್ ಸಿಂಗ್ ಸಂಧು   

‘ಉತ್ತಮ ವ್ಯಕ್ತಿತ್ವ ಎಂದರೆ ಗೋಲ್‌ಕೀಪರ್ ಇದ್ದಂತೆ. ಎಷ್ಟು ಗೋಲು ತಡೆದಿದ್ದಾನೆ ಎಂಬುದು ಎಂದಿಗೂ ಗೌಣವೇ. ಒಂದೇ ಒಂದು ಗೋಲು ಬಿಟ್ಟುಕೊಟ್ಟರೂ ಅದನ್ನು ಜೀವನಪರ್ಯಂತೆ ಜನರು ನೆನೆಯುತ್ತಾರೆ...’

ಸ್ಪೇನ್‌ನ ಪ್ರಮುಖ ಗೋಲ್‌ಕೀಪರ್‌ ಐಕರ್‌ ಕಾಸಿಲಸ್ ಅವರ ಪ್ರಸಿದ್ಧ ಹೇಳಿಕೆ ಇದು. ಹೌದು, ತಂಡಗಳ ಗೆಲುವಿನಲ್ಲಿ ಪ್ರಮುಖ ಪಾತ್ರ, ಕೆಲವೊಮ್ಮೆ ಮುಖ್ಯ ಭೂಮಿಕೆ ನಿಭಾಯಿಸುವ ಗೋಲ್‌ಕೀಪರ್‌ಗಳು ಕೆಲವೊಮ್ಮೆ ಖಳನಾಯಕರಾಗಿ ಪ್ರೇಕ್ಷಕರ ಕೋಪಕ್ಕೆ ಕಾರಣರಾಗುತ್ತಾರೆ.

ಇಂಡಿಯನ್ ಸೂಪರ್ ಲೀಗ್‌ನಲ್ಲಿ ಹೀಗೆ ಖಳನಾಯಕರಾದ ಗೋಲ್‌ಕೀಪರ್‌ಗಳು ಕಡಿಮೆ. ಬಹುತೇಕ ಎಲ್ಲ ಪಂದ್ಯಗಳಲ್ಲೂ ಗೋಲು ಕಾಯುವವರು ತಂಡಗಳ ಗೌರವವನ್ನೂ ಕಾದಿದ್ದಾರೆ. ಐಎಸ್‌ಎಲ್‌ನಲ್ಲಿ ಆಡುತ್ತಿರುವ ಗೋಲ್‌ಕೀಪರ್‌ಗಳ ಪೈಕಿ ಬಹುತೇಕರು ಭಾರತೀಯರು. ಹೀಗಾಗಿ ಭಾರತ ಫುಟ್‌ಬಾಲ್‌ಗೆ ಉತ್ತಮ ಗೋಲ್‌ಕೀಪರ್‌ಗಳನ್ನು ಐಎಸ್‌ಎಲ್‌ ಕಾಣಿಕೆಯಾಗಿ ನೀಡುತ್ತಿದೆ.

ADVERTISEMENT

ಐಎಸ್‌ಎಲ್‌ನ ನಿಯಮವೇ ಹಾಗಿದೆ. ಈ ಟೂರ್ನಿಯಲ್ಲಿ ಆಡುವ ವಿದೇಶಿ ಆಟಗಾರರ ಸಂಖ್ಯೆಗೆ ನಿರ್ಬಂಧವಿದೆ. ಭಾರತದ ಆಟಗಾರರಿಗೆ ಹೆಚ್ಚು ಅವಕಾಶ ಕೊಡುವುದಕ್ಕಾಗಿ ಭಾರತೀಯರನ್ನೇ ಗೋಲ್‌ಕೀಪರ್‌ಗಳಾಗಿ ಕಣಕ್ಕೆ ಇಳಿಸಲು ಎಲ್ಲ ತಂಡಗಳೂ ಬಯಸುತ್ತವೆ.
ಭಾರತ ತಂಡದ ಗೋಲ್‌ಕೀಪರ್‌ಗಳಾದ ಗುರುಪ್ರೀತ್‌ ಸಿಂಗ್ ಸಂಧು, ಅಮರಿಂದರ್ ಸಿಂಗ್‌ ಮತ್ತು ವಿಶಾಲ್ ಕೇತ್ ಐಎಸ್‌ಎಲ್‌ನಲ್ಲಿ ವಿವಿಧ ತಂಡಗಳಲ್ಲಿ ಗಮನ ಸೆಳೆಯುತ್ತಿದ್ದಾರೆ.

ಎಟಿಕೆ ತಂಡ ಸತತ ಮೂರು ಬಾರಿ ತನ್ನಲ್ಲೇ ಉಳಿಸಿಕೊಂಡಿರುವ ದೇಬಜಿತ್ ಮಜುಂದಾರ್‌ ಈ ವರೆಗೆ ಟೂರ್ನಿಯಲ್ಲಿ ಅಮೋಘ ಸಾಮರ್ಥ್ಯ ಮೆರೆದಿದ್ದಾರೆ. 29 ಪಂದ್ಯಗಳಲ್ಲಿ 67 ಗೋಲು ಉಳಿಸಿದ್ದಾರೆ. ಎಂಟು ಪಂದ್ಯಗಳಲ್ಲಿ ಒಂದು ಗೋಲೂ ಬಿಟ್ಟುಕೊಡದೆ ದೈತ್ಯಶಕ್ತಿಯಾಗಿ ನಿಂತಿದ್ದಾರೆ.

ಅರಿಂದಂ ಭಟ್ಟಾಚಾರ್ಯ, ಅಮರಿಂದರ್ ಸಿಂಗ್‌, ಸುಬ್ರತಾ ಪಾಲ್‌ ಮುಂತಾದ ಹಿರಿಯ ಗೋಲ್‌ಕೀಪರ್‌ಗೆ ನೆರಳಿನಲ್ಲಿ ಬೆಳೆಯುತ್ತಿರುವ ಹೊಸ ತಲೆಮಾರಿನ ಆದಿತ್ಯ ಪಾತ್ರ (18 ವರ್ಷ), ಧೀರಜ್ ಸಿಂಗ್‌ (18), ಗುರುಮೀತ್ (19), ಅವಿನಾಶ್ ಪಾಲ್‌ (24), ಶಯನ್ ರಾಯ್‌ (21), ಮೊಹಮ್ಮದ್ ನವಾಜ್‌ (19), ಅನೂಜ್ ಕುಮಾರ್‌ (20), ರಫೀಕ್ ಅಲಿ (20), ಸುಜಿತ್ ಶಶಿಕುಮಾರ್‌, ಕಮಲ್‌ಜೀತ್ ಸಿಂಗ್‌ (23), ರವಿಕುಮಾರ್‌ (25), ಟಿ.ಪಿ.ರಹನೇಶ್‌ ಮುಂತಾದವರು ಭಾರತದ ಫುಟ್‌ಬಾಲ್‌ನಲ್ಲಿ ಕನಸಿನ ಬೀಜ ಬಿತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.