ADVERTISEMENT

ಏಷ್ಯನ್ ಕಪ್ ಮಹಿಳಾ ಫುಟ್‌ಬಾಲ್‌: ಎರಡು ದಶಕಗಳ ಬಳಿಕ ಭಾರತ ಅರ್ಹತೆ

20 ವರ್ಷದೊಳಗಿನವರ ಏಷ್ಯನ್ ಕಪ್ ಮಹಿಳಾ ಫುಟ್‌ಬಾಲ್‌

ಪಿಟಿಐ
Published 10 ಆಗಸ್ಟ್ 2025, 15:57 IST
Last Updated 10 ಆಗಸ್ಟ್ 2025, 15:57 IST
ಮ್ಯಾನ್ಮಾರ್ ವಿರುದ್ಧ ಗೆಲುವಿನ ಸಂಭ್ರಮದಲ್ಲಿ ಭಾರತದ ತಂಡದ ವನಿತೆಯರು –ಎಕ್ಸ್‌ ಚಿತ್ರ
ಮ್ಯಾನ್ಮಾರ್ ವಿರುದ್ಧ ಗೆಲುವಿನ ಸಂಭ್ರಮದಲ್ಲಿ ಭಾರತದ ತಂಡದ ವನಿತೆಯರು –ಎಕ್ಸ್‌ ಚಿತ್ರ   

ಯಾಂಗೂನ್ (ಮ್ಯಾನ್ಮಾರ್): ಭಾರತದ ಮಹಿಳಾ ತಂಡವು ಕ್ವಾಲಿಫೈಯರ್‌ ‘ಡಿ’ ಗುಂಪಿನ ಕೊನೆಯ ಪಂದ್ಯದಲ್ಲಿ 1–0 ಗೋಲಿನಿಂದ ಮ್ಯಾನ್ಮಾರ್ ತಂಡವನ್ನು ಮಣಿಸಿತು. ಇದರೊಂದಿಗೆ ಎರಡು ದಶಕಗಳ ನಂತರ ಮೊದಲ ಬಾರಿ ಎಎಫ್‌ಸಿ 20 ವರ್ಷದೊಳಗಿನವರ ಏಷ್ಯನ್ ಕಪ್ ಫುಟ್‌ಬಾಲ್‌ ಟೂರ್ನಿಗೆ ಅರ್ಹತೆ ಪಡೆಯಿತು.

ತುವುನ್ನಾ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಪೂಜಾ ಅವರು 27ನೇ ನಿಮಿಷದಲ್ಲಿ ಭಾರತದ ಗೆಲುವಿನ ಗೋಲು ದಾಖಲಿಸಿದರು. ಇದರಿಂದಾಗಿ ಏಳು ಅಂಕ ಪಡೆದ ಭಾರತ ಗುಂಪಿನಲ್ಲಿ ಅಗ್ರಸ್ಥಾನ ಪಡೆದು 2026ರಲ್ಲಿ ಥಾಯ್ಲೆಂಡ್‌ನಲ್ಲಿ ನಡೆಯುವ ಟೂರ್ನಿಗೆ ಟಿಕೆಟ್‌ ಪಡೆಯಿತು. 2006ರಲ್ಲಿ ಕೊನೆಯ ಬಾರಿ ಅರ್ಹತೆ ಪಡೆದಿತ್ತು.

ಭಾರತದ ವನಿತೆಯರು ಆರಂಭಿಕ ಪಂದ್ಯದಲ್ಲಿ ಇಂಡೊನೇಷ್ಯಾದೊಂದಿಗೆ ಗೋಲುರಹಿತವಾಗಿ ಡ್ರಾ ಸಾಧಿಸಿದ್ದರೆ, ಎರಡನೇ ಪಂದ್ಯದಲ್ಲಿ 7–0 ಗೋಲುಗಳಿಂದ ತುರ್ಕಮೆನಿಸ್ತಾನ ತಂಡವನ್ನು ಸದೆಬಡಿದಿದ್ದರು. ಮ್ಯಾನ್ಮಾರ್ ತಂಡ 4 ಅಂಕದೊಂದಿಗೆ (1 ಗೆಲುವು, 1 ಡ್ರಾ, 1 ಸೋಲು) ಅಭಿಯಾನ ಮುಗಿಸಿತು. 

ADVERTISEMENT

ಎರಡೂ ತಂಡಗಳಿಗೂ ನಿರ್ಣಾಯಕವಾಗಿದ್ದ ಈ ಪಂದ್ಯದ ಮೊದಲಾರ್ಧದಲ್ಲಿ ಭಾರತ ಪ್ರಾಬಲ್ಯ ಸಾಧಿಸಿ ಮುನ್ನಡೆ ಪಡೆಯಿತು. ಉತ್ತರಾರ್ಧದಲ್ಲಿ ಅದೇ ಮುನ್ನಡೆಯನ್ನು ಉಳಿಸಿಕೊಂಡು ಸಂಭ್ರಮಿಸಿತು.  

ಎ ಗುಂಪಿನಲ್ಲಿ ಉತ್ತರ ಕೊರಿಯಾ, ಬಿ ಗುಂಪಿನಲ್ಲಿ ವಿಯೆಟ್ನಾಂ, ಇ ಗುಂಪಿನಲ್ಲಿ ಚೀನಾ, ಎಫ್‌ ಗುಂಪಿನಲ್ಲಿ ಜಪಾನ್‌, ಎಚ್‌ ಗುಂಪಿನಲ್ಲಿ ಬಾಂಗ್ಲಾದೇಶ ಮತ್ತು ದಕ್ಷಿಣ ಕೊರಿಯಾ ತಂಡಗಳೂ ಟೂರ್ನಿಗೆ ಅರ್ಹತೆ ಪಡೆದವು. 

ಬಹುಮಾನ ಘೋಷಣೆ
ಏಷ್ಯನ್ ಕಪ್ ಫುಟ್‌ಬಾಲ್‌ ಟೂರ್ನಿಗೆ ಅರ್ಹತೆ ಪಡೆದ ಭಾರತದ ಮಹಿಳಾ ತಂಡಕ್ಕೆ ಅಖಿಲ ಭಾರತ ಫುಟ್‌ಬಾಲ್‌ ಫೆಡರೇಷನ್‌ ₹21.89 ಲಕ್ಷ ಬಹುಮಾನ ಘೋಷಿಸಿದೆ. ‘ಭಾರತ ಕ್ರೀಡಾ ಪ್ರಾಧಿಕಾರದ ಸಹಯೋಗದೊಂದಿಗೆ ಕಳೆದ ಕೆಲವು ವರ್ಷಗಳಿಂದ ನಿರಂತರ ಯೋಜನೆ ಮತ್ತು ಅಭಿವೃದ್ಧಿ ಪ್ರಯತ್ನಗಳ ಫಲವೇ ಇಂದಿನ ಈ ಸಾಧನೆಗೆ ಕಾರಣ’ ಎಂದು ಎಐಎಫ್‌ಎಫ್ ಪ್ರಕಟಣೆ ತಿಳಿಸಿದೆ.
ಮ್ಯಾನ್ಮಾರ್ ವಿರುದ್ಧ ಗೋಲು ದಾಖಲಿಸಿದ ಸಂಭ್ರಮದಲ್ಲಿ ಭಾರತದ ತಂಡದ ವನಿತೆಯರು –ಎಕ್ಸ್‌ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.