ADVERTISEMENT

ಏಷ್ಯನ್ ಚಾಂಪಿಯನ್ಸ್ ಟ್ರೋಫಿ: ಹರ್ಮನ್‌ಪ್ರೀತ್‌ ಗೋಲು; ಭಾರತಕ್ಕೆ ಭರ್ಜರಿ ಗೆಲುವು

ಜಪಾನ್‌ಗೆ ನಿರಾಸೆ

ಪಿಟಿಐ
Published 19 ಡಿಸೆಂಬರ್ 2021, 13:32 IST
Last Updated 19 ಡಿಸೆಂಬರ್ 2021, 13:32 IST
ಭಾರತದ ಆಕಾಶದೀಪ್ ಸಿಂಗ್‌ (ಮಧ್ಯ)  ಅವರು ಜಪಾನ್‌ ಆಟಗಾರರಿಂದ ಚೆಂಡು ಕಸಿದುಕೊಳ್ಳಲು ಪ್ರಯತ್ನಿಸಿದರು– ಎಎಫ್‌ಪಿ ಚಿತ್ರ
ಭಾರತದ ಆಕಾಶದೀಪ್ ಸಿಂಗ್‌ (ಮಧ್ಯ)  ಅವರು ಜಪಾನ್‌ ಆಟಗಾರರಿಂದ ಚೆಂಡು ಕಸಿದುಕೊಳ್ಳಲು ಪ್ರಯತ್ನಿಸಿದರು– ಎಎಫ್‌ಪಿ ಚಿತ್ರ   

ಢಾಕಾ: ಉಪನಾಯಕ ಹರ್ಮನ್‌ಪ್ರೀತ್ ಸಿಂಗ್‌ ಮತ್ತೊಮ್ಮೆ ಕೈಚಳಕ ತೋರಿದರು. ಅವರು ಗಳಿಸಿದ ಎರಡು ಗೋಲುಗಳ ನೆರವಿನಿಂದ ಭಾರತ ತಂಡವು ಏಷ್ಯನ್ ಚಾಂಪಿಯನ್ಸ್‌ ಟ್ರೋಫಿ ಹಾಕಿ ಟೂರ್ನಿಯ ಪಂದ್ಯದಲ್ಲಿ ಜಪಾನ್‌ಗೆ 6–0ಯಿಂದ ಸೋಲುಣಿಸಿತು.

ಮೌಲಾನ ಭಸಾನಿ ಹಾಕಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ರೌಂಡ್‌ ರಾಬಿನ್ ಕೊನೆಯ ಪಂದ್ಯದಲ್ಲಿ ಮನ್‌ಪ್ರೀತ್ ಸಿಂಗ್‌ ಬಳಗದ ಪರ ಹರ್ಮನ್‌ಪ್ರೀತ್‌ 10 ಮತ್ತು 53ನೇ ನಿಮಿಷ ಗೋಲು ದಾಖಲಿಸಿದರು. ದಿಲ್‌ಪ್ರೀತ್ ಸಿಂಗ್‌ (23ನೇ ನಿಮಿಷ), ಜರ್ಮನ್‌ಪ್ರೀತ್ ಸಿಂಗ್‌ (34ನೇ ನಿ.), ಸುಮಿತ್‌ (46ನೇ ನಿ.) ಹಾಗೂ ಶಂಷೇರ್‌ ಸಿಂಗ್‌ (54ನೇ ನಿ.) ತಂಡದ ಪರ ಯಶಸ್ಸು ಸಾಧಿಸಿದರು.

ಐದು ತಂಡಗಳು ಸ್ಪರ್ಧಿಸಿರುವ ಚಾಂಪಿಯನ್‌ಷಿಪ್‌ನಲ್ಲಿ ಭಾರತ ಈಗಾಗಲೇ ಸೆಮಿಫೈನಲ್ ತಲುಪಿದೆ. 10 ಪಾಯಿಂಟ್ಸ್‌ಗಳೊಂದಿಗೆ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನವನ್ನೂ ಗಳಿಸಿದೆ. ಕೊರಿಯಾ (6), ಜಪಾನ್ (5) ಮತ್ತು ಪಾಕಿಸ್ತಾನ (2) ಭಾರತಕ್ಕಿಂತ ಹಿಂದಿವೆ.

ADVERTISEMENT

ಟೂರ್ನಿಯಲ್ಲಿ ಭಾರತಕ್ಕೆ ಇದು ಮೂರನೇ ಜಯ. ಪಂದ್ಯದ ಎಲ್ಲ ವಿಭಾಗಗಳಲ್ಲೂ ಭಾರತ ಪಾರಮ್ಯ ಮೆರೆಯಿತು. ಮೊದಲ ಆರು ನಿಮಿಷಗಳೊಳಗೆ ತಂಡಕ್ಕೆ ಎರಡು ಪೆನಾಲ್ಟಿ ಕಾರ್ನರ್ ಅವಕಾಶಗಳು ದೊರೆತವು. ಆದರೆ ಗೋಲಿನಲ್ಲಿ ಪರಿವರ್ತಿಸುವಲ್ಲಿ ಸಾಧ್ಯವಾಗಲಿಲ್ಲ. ಬಳಿಕ ಜಪಾನ್‌ಗೆ ದೊರೆತ ಪೆನಾಲ್ಟಿ ಅವಕಾಶವೂ ಗೋಲಾಗಲಿಲ್ಲ.

ಆಕ್ರಮಣ ಮುಂದುವರಿಸಿದ ಭಾರತಕ್ಕೆ ಸಿಕ್ಕ ಮತ್ತೊಂದು ಪೆನಾಲ್ಟಿ ಅವಕಾಶದಲ್ಲಿ ಹಾರ್ದಿಕ್‌ ಸಿಂಗ್‌ ನೀಡಿದ ಪಾಸ್‌ನಲ್ಲಿ ಹರ್ಮನ್‌ಪ್ರೀತ್ ಸೊಗಸಾದ ಗೋಲು ದಾಖಲಿಸಿ ಮುನ್ನಡೆ ತಂದುಕೊಟ್ಟರು. ಮನದೀಪ್ ಸಿಂಗ್‌, ಶೀಲಾನಂದ ಲಾಕ್ರಾ ನೆರವಿನಿಂದ ದಿಲ್‌ಪ್ರೀತ್ ತಂಡದ ಎರಡನೇ ಗೋಲು ಗಳಿಸಿದರು. ಈ ಹಂತದಲ್ಲಿ ಜಪಾನ್‌ ನಡೆಸಿದ ಪ್ರಯತ್ನಗಳಿಗೆ ಫಲ ಸಿಗಲಿಲ್ಲ. ಜರ್ಮನ್‌ಪ್ರೀತ್‌ ಮಾಡಿದ ’ಕ್ಲೀನ್‌ ಸ್ಟ್ರೈಕ್‌; ಭಾರತಕ್ಕೆ ಮೂರನೇ ಗೋಲು ತಂದುಕೊಟ್ಟಿತು.

36ನೇ ನಿಮಿಷದಲ್ಲಿ ಜಪಾನ್‌ಗೆ ದೊರೆತ ಪೆನಾಲ್ಟಿ ಅವಕಾಶವನ್ನು ಭಾರತದ ಗೋಲ್‌ಕೀಪರ್ ಸೂರಜ್‌ ಕರ್ಕೇರಾ ವಿಫಲಗೊಳಿಸಿದರು. ಅಂತಿಮ ಕ್ವಾರ್ಟರ್‌ನ ಮೊದಲ ನಿಮಿಷದಲ್ಲಿ ಸುಮಿತ್ ತಂಡದ ಮುನ್ನಡೆಯನ್ನು 4–0ಗೆ ಹೆಚ್ಚಿಸಿದರು. ಬಳಿಕ ಹರ್ಮನ್‌ ಪ್ರೀತ್‌ ಮತ್ತು ಶಂಷೇರ್ ಸಿಂಗ್ ಜಪಾನ್ ಕೋಟೆಯನ್ನು ಭೇದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.