ADVERTISEMENT

Indian Football: 2 ವರ್ಷ ಅವಧಿಗೆ ಖಾಲಿದ್‌ ಕೋಚ್‌

ಪಿಟಿಐ
Published 13 ಆಗಸ್ಟ್ 2025, 14:17 IST
Last Updated 13 ಆಗಸ್ಟ್ 2025, 14:17 IST
<div class="paragraphs"><p>ಖಾಲಿದ್ ಜಮೀಲ್</p></div>

ಖಾಲಿದ್ ಜಮೀಲ್

   

ನವದೆಹಲಿ: ಖಾಲಿದ್ ಜಮೀಲ್ ಅವರು ಎರಡು ವರ್ಷಗಳ ಪೂರ್ಣ ಅವಧಿಗೆ ಭಾರತ ಸೀನಿಯರ್ ಫುಟ್‌ಬಾಲ್‌ ತಂಡದ ತರಬೇತುದಾರ ಹೊಣೆ ವಹಿಸಿಕೊಂಡಿದ್ದಾರೆ ಎಂದು ಅಖಿಲ ಭಾರತ ಫುಟ್‌ಬಾಲ್‌ ಫೆಡರೇಷನ್ ಬುಧವಾರ ತಿಳಿಸಿದೆ. ಫಲಿತಾಂಶಗಳನ್ನು ಆಧರಿಸಿ ಮತ್ತೊಂದು ವರ್ಷಕ್ಕೆ ಮುಂದುವರಿಯುವ ಆಯ್ಕೆಯೂ ಅವರ ಮುಂದಿದೆ.

ಐಎಸ್‌ಎಲ್‌ ತಂಡವಾದ ಜಮ್‌ಶೆಡ್‌ಪುರ ತಂಡದ ಒಪ್ಪಂದವನ್ನು ಕೊನೆಗೊಳಿಸಿದ ನಂತರ ಅವರು ಎಐಎಫ್‌ಎಫ್‌ ಜೊತೆಗೆ ಪೂರ್ಣಾವಧಿ ಕೋಚ್‌ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ ಎಂದು ಫೆಡರೇಷನ್ ತಿಳಿಸಿದೆ.

ADVERTISEMENT

ಬೆಂಗಳೂರಿನ ಡ್ರಾವಿಡ್‌– ಪಡುಕೋಣೆ ಕ್ರೀಡಾ ಶ್ರೇಷ್ಠತಾ ಕೇಂದ್ರದಲ್ಲಿ ಆಗಸ್ಟ್‌ 15ರಿಂದ ತರಬೇತಿ ಶಿಬಿರ ನಡೆಸುವ ಮೂಲಕ ಅವರು ತಮ್ಮ ಕೆಲಸ ಆರಂಭಿಸಲಿದ್ದಾರೆ.

ತರಬೇತುದಾರರಾಗಿ ಅವರ ಪಾಲಿಗೆ ಸಿಎಎಫ್‌ಎ ನೇಷನ್ಸ್‌ ಕಪ್‌ ಟೂರ್ನಿಯು ಮೊದಲ ಸವಾಲು ಆಗಿದೆ. ಆ ಟೂರ್ನಿಯ ಬಿ ಗುಂಪಿನಲ್ಲಿರುವ ಭಾರತವು, ತಜಿಕಿಸ್ತಾನ (ಆ. 29ರಂದು), ಇರಾನ್ (ಸೆ. 1) ಮತ್ತು ಅಫ್ಗಾನಿಸ್ತಾನ (ಸೆ. 4) ತಂಡಗಳನ್ನು ಎದುರಿಸಲಿದೆ. 

ಅಕ್ಟೋಬರ್‌ನಲ್ಲಿ ಎಎಫ್‌ಸಿಎ ಏಷ್ಯನ್ ಕಪ್ (2027ರ) ಅರ್ಹತಾ ಟೂರ್ನಿಯಲ್ಲಿ ಭಾರತ ಆಡಲಿದೆ. ಸಿಂಗಪುರದಲ್ಲಿ ಅಕ್ಟೋಬರ್ 9 ಮತ್ತು 14ರಂದು ಎರಡು ಪಂದ್ಯಗಳನ್ನು ಆಡಬೇಕಾಗಿದೆ.

‘ರಾಷ್ಟ್ರೀಯ ತಂಡವನ್ನು ಕೋಚ್‌ ಆಗಿ ಮುನ್ನಡೆಸುವ ಹೊಣೆ ವಹಿಸಿರುವುದು ತಮಗೆ ಹೆಮ್ಮೆ ಮತ್ತು ಸಂತಸ ತಂದಿದೆ’ ಎಂದು 48 ವರ್ಷ ವಯಸ್ಸಿನ ಜಮೀಲ್ ಪ್ರತಿಕ್ರಿಯಿಸಿದರು.

ಸ್ಪೇನ್‌ನ ಮನೊಲೊ ಮಾರ್ಕ್ವೆಝ್ ಅವರು ಎಐಎಫ್‌ಎಫ್‌ ಒತೆ ಒಪ್ಪಂದವನ್ನು ಹೋದ ತಿಂಗಳು ಸಮ್ಮತಿಯೊಡನೆ ಕೊನೆಗೊಳಿಸಿದ ನಂತರ ಕೋಚ್‌ ಹುದ್ದೆ ತೆರವಾಗಿತ್ತು.

ಅವರು 2012ರ ನಂತರ ಸೀನಿಯರ್ ತಂಡಕ್ಕೆ ಕೋಚ್‌ ಆದ ಮೊದಲ ಭಾರತೀಯ ಎನಿಸಿದ್ದಾರೆ ಜಮೀಲ್‌. ಆ ವರ್ಷ ಭಾರತದವರೇ ಆದ ಸಾವಿಯೊ ಮೆಡೀರಾ ಕೋಚ್‌ ಆಗಿದ್ದರು.

ಐಎಸ್‌ಎಲ್‌ನಲ್ಲಿ ಅವರು ಕೋಚ್‌ ಆಗಿ ಸಾಕಷ್ಟು ಅನುಭವ ಹೊಂದಿದ್ದಾರೆ. ಜಮ್‌ಷೆಡ್‌ಪುರ, ನಾರ್ತ್‌ಈಸ್ಟ್‌ ಯುನೈಟೆಡ್‌, ಐಜ್ವಾಲ್ ಎಫ್‌ಸಿ, ಈಸ್ಟ್‌ ಬೆಂಗಾಲ್‌, ಮೋಹನ್ ಬಾಗನ್ ಮತ್ತು ಮುಂಬೈ ಎಫ್‌ಸಿ ಅಂಥ ಘಟಾನುಘಟಿ ತಂಡಗಳಿಗೆ ಅವರು ತರಬೇತುದಾರರಾಗಿ ಕೆಲಸ ಮಾಡಿದ್ದಾರೆ.

ಅದರಲ್ಲೂ 2016–17ನೇ ಸಾಲಿನಲ್ಲಿ ಅವರು ತರಬೇತುದಾರರಾಗಿದ್ದಾಗ ಐಜ್ವಾಲ್‌ ಎಫ್‌ಸಿ  ಐಲೀಗ್ ಪ್ರಶಸ್ತಿ ಗೆದ್ದಿದ್ದು ಗಮನಸೆಳೆದಿತ್ತು. ಈ ವರ್ಷ ಅವರ ತರಬೇತಿಯಡಿ ಜಮ್‌ಷೆಡ್‌ಪುರ ತಂಡ ಸೂಪರ್ ಕಪ್‌ ಫೈನಲ್ ತಲುಪಿತ್ತು.

ಮಿಡ್‌ಫೀಲ್ಡರ್ ಆಗಿ ಜಮೀಲ್ ಭಾರತ ತಂಡದ ಪರ 15 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಸಂತೋಷ್‌ ಟ್ರೋಫಿಯಲ್ಲಿ ಮಹಾರಾಷ್ಟ್ರ ತಂಡವನ್ನು ಪ್ರತಿನಿಧಿಸಿದ್ದರು.

ಕನಿಕರ ವ್ಯಕ್ತಪಡಿಸಿದ ಬೈಚುಂಗ್ ಭುಟಿಯಾ

ಅತ್ಯಂತ ಕಠಿಣ ಸನ್ನಿವೇಶದಲ್ಲಿ ಭಾರತ ಫುಟ್‌ಬಾಲ್ ತಂಡದ ತರಬೇತು ಹೊಣೆ ವಹಿಸಿಕೊಂಡಿರುವ ಖಾಲಿದ್ ಜಮೀಲ್ ಅವರ ಬಗ್ಗೆ ದೇಶದ ದಿಗ್ಗಜ ಆಟಗಾರ  ಬೈಚುಂಗ್ ಭುಟಿಯಾ ಸಹಾನುಭೂತಿ ವ್ಯಕ್ತಪಡಿಸಿದ್ದಾರೆ.

‘ಅವರು (ಜಮೀಲ್‌) ಬಹಳ ಬೇಡಿಕೆಗಳನ್ನು ಮುಂದಿಡುವ ಸಾಧ್ಯತೆಯಿಲ್ಲದ ಕಾರಣ ಅಖಿಲ ಭಾರತ ಫುಟ್‌ಬಾಲ್‌ ಫೆಡರೇಷನ್‌ ಅವರಿಗೆ ಆದ್ಯತೆ ನೀಡಿದೆ ಎಂದೂ ಲೇವಡಿ ಮಾಡಿದ್ದಾರೆ.

‘ಎರಡು ವಿಶ್ವ ದರ್ಜೆಯ ಕೋಚ್‌ಗಳು ನಮ್ಮನ್ನು ಬಿಟ್ಟು ಹೊರನಡೆದರು. ಇಗೊರ್‌ ಸ್ಟಿಮಾಚ್‌ ಅವರು ಕ್ರೊವೇಷ್ಯಾ ತಂಡಕ್ಕೆ ಕೋಚ್‌ ಆಗಿದ್ದವರು. ಮನೊಲೊ ಮಾರ್ಕ್ವೆಝ್ ಅವರು ಮಹಾನ್‌ ತರಬೇತುದಾರರಲ್ಲಿ ಒಬ್ಬರಾಗಿದ್ದು, ಉತ್ತಮ ಹಿನ್ನೆಲೆ ಹೊಂದಿದವರು’ ಎಂದು ಭುಟಿಯಾ ಅವರು ಫಿಡೆಲ್‌ ಕ್ಯಾಸ್ಟ್ರೊ ಸೆಂಟಿನರಿ ಫುಟ್‌ಬಾಲ್‌ ಕಪ್‌ ಪ್ರದರ್ಶನ ಪಂದ್ಯದ ನಂತರ ಪಿಟಿಐ ವಿಡಿಯೊಸ್‌ಗೆ ತಿಳಿಸಿದರು.

‘ಈ ಇಬ್ಬರು ಕೋಚ್‌ಗಳಿಗೆ ಫೆಡರೇಷನ್ ಜೊತೆ ಕೆಲಸ ಮಾಡಲು ಸಾಧ್ಯವಾಗಲಿಲ್ಲ. ಈಗ ಫೆಡರೇಷನ್‌ ಹೇಳಿದ ಹಾಗೆ ಮಾಡುವ ವ್ಯಕ್ತಿಯನ್ನು ಕರೆತರುತ್ತಿದ್ದೀರಿ. ಇಂಥ ಪರಿಸ್ಥಿತಿಯಲ್ಲಿ ಕೋಚ್‌ಗಳು ಸ್ವತಂತ್ರವಾಗಿ ಯೋಚನೆ ಮಾಡುವುದಿಲ್ಲ ಮತ್ತು ಫೆಡರೇಷನ್ ಮುಂದೆ ಬೇಡಿಕೆಗಳನ್ನು ಇರಿಸುವುದಿಲ್ಲ’ ಎಂದು ಹೇಳಿದರು.

‘ದೇಶೀ ಕೋಚ್ ಆಗಿರುವ ಜಮೀಲ್ ಅವರು ರಾಷ್ಟ್ರೀಯ ತಂಡಕ್ಕೆ ಹೊಸಬರು. ತಂಡ ತುಂಬಾ ಸಂಕಷ್ಟದಲ್ಲಿರುವಾಗ ಈ ಹೊಣೆ ಹೊತ್ತುಕೊಂಡಿರುವ ಅವರ ಬಗ್ಗೆ ಕನಿಕರ ಮೂಡುತ್ತಿದೆ’ ಎಂದು ಅವರು ಹೇಳಿದರು. ಮಂಗಳವಾರ ಸಂಸತ್ತಿನಲ್ಲಿ ಅಂಗೀಕಾರಗೊಂಡ ರಾಷ್ಟ್ರೀಯ ಕ್ರೀಡಾ ಆಡಳಿತ ಮಸೂದೆಯನ್ನು ಅವರು ಸ್ವಾಗತಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.