ADVERTISEMENT

ವಿಶ್ವಕಪ್ ಫುಟ್‌ಬಾಲ್‌ ಅರ್ಹತಾ ಟೂರ್ನಿ: 19ರಂದು ಕತಾರ್‌ಗೆ ಭಾರತದ ಆಟಗಾರರು

ಪಿಟಿಐ
Published 15 ಮೇ 2021, 14:56 IST
Last Updated 15 ಮೇ 2021, 14:56 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: 2022ರ ವಿಶ್ವಕಪ್ ಅರ್ಹತಾ ಪಂದ್ಯಗಳಿಗಾಗಿ ಸಿದ್ಧತೆ ನಡೆಸಲು ಭಾರತ ಫುಟ್‌ಬಾಲ್ ತಂಡವು ಇದೇ 19ರಂದು ಕತಾರ್‌ಗೆ ತೆರಳಲಿದೆ. ಜೂನ್ 3ರಿಂದ ನಡೆಯುವ ಪಂದ್ಯಗಳಿಗೆ ತಾಲೀಮು ನಡೆಸಲು ಭಾರತದ ಆಟಗಾರರಿಗೆ ಕತಾರ್‌ನಲ್ಲಿ ಅವಕಾಶ ಕಲ್ಪಿಸಲಾಗಿದೆ. ಈ ಕುರಿತು ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್‌ (ಎಐಎಫ್‌ಎಫ್‌) ಸಲ್ಲಿಸಿದ ಮನವಿಗೆ ಆ ರಾಷ್ಟ್ರವು ಸ್ಪಂದಿಸಿದೆ.

ಆಟಗಾರರಿಗೆ 10 ದಿನಗಳ ಕ್ವಾರಂಟೈನ್‌ ಅವಧಿಯಿಂದ ವಿನಾಯಿತಿ ನೀಡಬೇಕೆಂಬ ಮನವಿಗೂ ಕತಾರ್ ಒಪ್ಪಿದೆ. ಮೊದಲ ಪಂದ್ಯಕ್ಕೂ ಮುನ್ನ ಆಟಗಾರರು ಬಯೋಬಬಲ್‌ನಲ್ಲಿ ಎರಡು ವಾರಗಳ ಪೂರ್ವಸಿದ್ಧತಾ ಶಿಬಿರ ನಡೆಸಲಿದ್ದಾರೆ.

‘ಮೇ 19ರ ಸಂಜೆ ನಾವು ಕತಾರ್‌ಗೆ ತೆರಳಲಿದ್ದೇವೆ. ಅಲ್ಲಿ ಆಟಗಾರರಿಗೆ ಕ್ವಾರಂಟೈನ್ ಇರುವುದಿಲ್ಲ. ಆದರೆ ಬಯೋಬಬಲ್ ವ್ಯವಸ್ಥೆ ಇರಲಿದೆ. ಹೊರಡುವ ಮೊದಲು ಎಲ್ಲ ಆಟಗಾರರು ಕೋವಿಡ್‌ ಪರೀಕ್ಷೆಗೆ ಒಳಗಾಗಲಿದ್ದಾರೆ‘ ಎಂದು ಎಐಎಫ್‌ಎಫ್ ಪ್ರಧಾನ ಕಾರ್ಯದರ್ಶಿ ಕುಶಲ್ ದಾಸ್ ತಿಳಿಸಿದ್ದಾರೆ.

ADVERTISEMENT

ಭಾರತ ತಂಡವು ವಿಶ್ವಕಪ್ ಅರ್ಹತೆಯಿಂದ ಈಗಾಗಲೇ ಹೊರಬಿದ್ದಿದೆ. ಆದರೆ 2023ರ ಏಷ್ಯಾಕಪ್‌ ಟೂರ್ನಿಯಲ್ಲಿ ಸ್ಥಾನ ಪಡೆಯಲು ಈ ಪಂದ್ಯಗಳನ್ನು ಆಡಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.