
ಇಲ್ಯಾಸ್ ಪಾಷಾ
ಬೆಂಗಳೂರು: ಭಾರತ ಫುಟ್‌ಬಾಲ್ ತಂಡದ ಮತ್ತು ಈಸ್ಟ್ ಬೆಂಗಾಲ್ ಕ್ಲಬ್ ಆಟಗಾರ ಇಲ್ಯಾಸ್ ಪಾಷಾ (61) ಅವರು ದೀರ್ಘಕಾಲದ ಅನಾರೋಗ್ಯದ ನಂತರ ಗುರುವಾರ ನಗರದಲ್ಲಿ ನಿಧನರಾದರು. ಕರ್ನಾಟಕ ಕಂಡ ಶ್ರೇಷ್ಠ ಫುಟ್‌ಬಾಲ್ ಆಟಗಾರರಲ್ಲಿ ಅವರು ಒಬ್ಬರಾಗಿದ್ದರು.
ಅವರಿಗೆ ಪತ್ನಿ, ಇಬ್ಬರು ಪುತ್ರಿಯರು, ಪುತ್ರರು ಇದ್ದಾರೆ. ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದೆ.
ರಕ್ಷಣೆ ವಿಭಾಗದ (ವೈಟ್ ವಿಂಗ್ ಬ್ಯಾಕ್) ಆಟಗಾರರಾಗಿದ್ದ ಇಲ್ಯಾಸ್ ಪಂದ್ಯದ ಗತಿ ಗ್ರಹಿಸುವ ಸಾಮರ್ಥ್ಯದಿಂದ ಹೆಸರು ಪಡೆದಿದ್ದರು. 1987ರ ಜನವರಿ 27ರಂದು ಕೋಯಿಕ್ಕೋಡ್‌ನಲ್ಲಿ ಬಲ್ಗೇರಿಯಾ ವಿರುದ್ಧ ನೆಹರೂ ಕಪ್ ಟೂರ್ನಿಯಲ್ಲಿ ಆಡುವ ಮೂಲಕ ಭಾರತ ಸೀನಿಯರ್ ತಂಡಕ್ಕೆ ಪದಾರ್ಪಣೆ ಮಾಡಿದ್ದರು. ಎಂಟು ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದರು.
ಬೆಂಗಳೂರಿನ ವೈಯಾಲಿಕಾವಲ್‌ನಲ್ಲಿ ವಿನಾಯಕ ಫುಟ್‌ಬಾಲ್ ಕ್ಲಬ್‌ಗೆ ಆಡುವ ಮೂಲಕ ವೃತ್ತಿಜೀವನ ಆರಂಭಿಸಿದ ಅವರು, ನಂತರ ಉತ್ತಮ ಆಟದಿಂದಾಗಿ 1980ರ ದಶಕದ ಮಧ್ಯದಲ್ಲಿ ಇಂಡಿಯನ್ ಟೆಲಿಫೋನ್ ಇಂಡಸ್ಟ್ರೀಸ್‌ಗೆ (ಐಟಿಐ) ಸೇರ್ಪಡೆಯಾದರು. 1987 ರಿಂದ ಮೂರು ವರ್ಷ ಸಂತೋಷ್ ಟ್ರೋಫಿಯಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದರು. 1993 ಮತ್ತು 1995ರಲ್ಲಿ ಬಂಗಾಳ ತಂಡವನ್ನು ಪ್ರತಿನಿಧಿಸಿದ್ದರು. ಆ ಎರಡೂ ವರ್ಷ ಆ ತಂಡ ಚಾಂಪಿಯನ್ ಆಗಿತ್ತು.
ಅವರು 1993–94ರಲ್ಲಿ ಈಸ್ಟ್ ಬೆಂಗಾಲ್ ತಂಡಕ್ಕೆ ನಾಯಕರಾಗಿದ್ದರು. ಅವರ ಆಡುತ್ತಿದ್ದ ಅವಧಿಯಲ್ಲಿ ಈ ಕ್ಲಬ್ ಐದು ಬಾರಿ ಕೋಲ್ಕತ್ತ ಲೀಗ್‌ನಲ್ಲಿ ಚಾಂಪಿಯನ್ ಆಗಿತ್ತು. ನಾಲ್ಕು ಬಾರಿ ಡುರಾಂಡ್ ಕಪ್ ಜಯಿಸಿತ್ತು. ಎರಡು ಬಾರಿ ರೋವರ್ಸ್ ಕಪ್ ಗೆದ್ದ ತಂಡದಲ್ಲೂ ಆಡಿದ್ದರು. 1990ರಲ್ಲಿ ಈಸ್ಟ್ ಬೆಂಗಾಲ್ ತಂಡ ಮೂರು ಪ್ರಮುಖ ಪ್ರಶಸ್ತಿ ಗೆಲ್ಲುವಲ್ಲಿ ಅವರ ಪಾತ್ರ ಪ್ರಮುಖವಾಗಿತ್ತು.
2012ರಲ್ಲಿ ಈಸ್ಟ್ ಬೆಂಗಾಲ್ ಕ್ಲಬ್ ಅವರನ್ನು ಜೀವಮಾನದ ಸಾಧನೆಗಾಗಿ ವಿಶೇಷ ಗೌರವ ನೀಡಿತ್ತು. ಈಸ್ಟ್ ಬೆಂಗಾಲ್ ಕ್ಲಬ್ ಅವರ ಮನೆಗೆ ತೆರಳಿ ಅಂತಿಮ ನಮನ ಸಲ್ಲಿಸಿದೆ. ಕ್ಲಬ್‌ನ ಕಾರ್ಯಕಾರಿ ಸಮಿತಿ ಸದಸ್ಯ ದೀಪ್ತೆನ್ ಬೋಸ್, ಮಾಜಿ ಆಟಗಾರರಾದ ಸರಣವನ್, ಥಾಮಸ್ ಮತ್ತು ಫಿರೋಜ್ ಅವರೂ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.