
ನವದೆಹಲಿ: ನನೆಗುದಿಗೆ ಬಿದ್ದಿರುವ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ಫುಟ್‌ಬಾಲ್ ಟೂರ್ನಿಯು ಫೆಬ್ರುವರಿ 14ರಂದು ಆರಂಭವಾಗಲಿದೆ ಎಂದು ಕ್ರೀಡಾ ಸಚಿವ ಮನ್ಸುಖ್ ಮಾಂಡವೀಯ ಸೋಮವಾರ ಘೋಷಿಸಿದ್ದಾರೆ.
ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್‌ಗೆ (ಎಐಎಫ್‌ಎಫ್) ವಾಣಿಜ್ಯ ಪಾಲುದಾರ ಸಿಗದ ಕಾರಣ 2025–26ನೇ ಸಾಲಿನ ಐಎಸ್‌ಎಲ್ ಟೂರ್ನಿ ನಡೆಯುವ ಬಗ್ಗೆ ಅನುಮಾನಗಳು ಮೂಡಿದ್ದವು.
ಐಎಸ್‌ಎಲ್‌ನಲ್ಲಿ ಮಾಮೂಲಿನಂತೆ 14 ತಂಡಗಳು ಭಾಗವಹಿಸಲಿವೆ. ತ್ರಿಶಂಕು ಸ್ಥಿತಿಯಲ್ಲಿದ್ದ ಐ ಲೀಗ್ ಸಹ ‘ಇದೇ ಸಮಯ’ಕ್ಕೆ ಆರಂಭವಾಗಲಿದೆ. ಇದರಲ್ಲಿ 11 ಕ್ಲಬ್‌ಗಳು ಭಾಗಿಯಾಗಲಿವೆ ಎಂದರು.
‘ಐಎಸ್‌ಎಲ್ ಬಗ್ಗೆ ಸಾಕಷ್ಟು ಅನುಮಾನಗಳು ಮೂಡಿದ್ದವು. ಆದರೆ ಸರ್ಕಾರ, ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್ ಮತ್ತು 14 ಕ್ಲಬ್‌ಗಳು ಮಂಗಳವಾರ ಸಭೆ ನಡೆಸಿದವು. ಫೆಬ್ರುವರಿ 14ರಂದು ಐಎಸ್‌ಎಲ್ ಆರಂಭಿಸಲು ನಿರ್ಧರಿಸಲಾಗಿದೆ. ಎಲ್ಲ ಕ್ಲಬ್‌ಗಳು ಭಾಗಿಯಾಗಲಿವೆ’ ಎಂದು ಮಾಂಡವೀಯ ಪ್ರಕಟಿಸಿದರು.
ಸಚಿವರ ಘೋಷಣೆಯ ನಂತರ ಐಎಎಫ್‌ಎಫ್ ಅಧ್ಯಕ್ಷ ಕಲ್ಯಾಣ್ ಚೌಬೆ ಅವರು ಟೂರ್ನಿಯ ವಿವರಗಳನ್ನು ನೀಡಿದರು. ಐಎಸ್‌ಎಲ್‌ನಲ್ಲಿ ‘ಹೋಮ್ ಆ್ಯಂಡ್ ಅವೇ’ (ತವರು ಮತ್ತು ಹೊರಗೆ) ಆಧಾರದಲ್ಲಿ 91 ಪಂದ್ಯಗಳು ನಡೆಯಲಿವೆ. ಕಾರ್ಯಕ್ರಮ ಪಟ್ಟಿಯ ರೂಪುರೇಷೆ ಸಿದ್ಧಗೊಳಿಸಲಾಗುತ್ತಿದೆ ಎಂದರು.
ಐ–ಲೀಗ್ ವ್ಯಾಪ್ತಿ ಸ್ವಲ್ಪ ಕಡಿತಗೊಳ್ಳಲಿದ್ದು, 55 ಪಂದ್ಯಗಳು ಇರಲಿವೆ.
‘ವಾಣಿಜ್ಯ ಪಾಲುದಾರ ಸಿಗುವವರೆಗೆ ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್, ಐಎಸ್‌ಎಲ್ ಆಯೋಜನೆಗೆ ₹14 ಕೋಟಿ ನೀಡಲಿದೆ. ಐ ಲೀಗ್ ನಡೆಸಲು ಸುಮಾರು ₹3.2 ಕೋಟಿ ನೀಡಲಿದೆ’ ಎಂದು ಚೌಬೆ ಹೇಳಿದರು.
ಲೀಗ್‌ಗಳ ನಿರ್ವಹಣೆಗೆ ಆಡಳಿತ ಮಂಡಳಿ ಸ್ಥಾಪಿಸಲಾಗುವುದು. ವಾಣಿಜ್ಯ ಸಂಬಂಧಿ ನಿರ್ಧಾರ ಕೈಗೊಳ್ಳುವ ಅಧಿಕಾರ ಈ ಮಂಡಳಿಗೆ ಇರಲಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.