ಶಿಲ್ಲಾಂಗ್: ಬೆಂಗಳೂರು ಎಫ್‌ಸಿ ತಂಡ, ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್ ಪಂದ್ಯದಲ್ಲಿ ಶುಕ್ರವಾರ ನಾರ್ತ್‌ಈಸ್ಟ್ ಯುನೈಟೆಡ್ ತಂಡವನ್ನು 2–0 ಗೋಲುಗಳಿಂದ ಸೋಲಿಸಿತು. ಈ ಮೂಲಕ ಲೀಗ್‌ನಲ್ಲಿ ಹತ್ತನೇ ಗೆಲುವಿನಿಂದ ಪಾಯಿಂಟ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿತು.
ಇಲ್ಲಿನ ಜವಾಹರಲಾಲ್ ನೆಹರೂ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ವಿರಾಮದ ವೇಳೆ ಬ್ಲೂಸ್ ತಂಡ 1–0 ಗೋಲಿನಿಂದ ಮುಂದಿತ್ತು. ಮೂರನೇ ನಿಮಿಷವೇ ಆಲ್ಬರ್ಟೊ ನೊಗುಯೇರಾ ಪಾಸ್‌ನಲ್ಲಿ ರಯಾನ್ ವಿಲಿಯಮ್ಸ್ ತಂಡಕ್ಕೆ ಮುನ್ನಡೆ ಒದಗಿಸಿದರು. 81ನೇ ನಿಮಿಷ ಆಲ್ಬರ್ಟೊ ನೊಗುಯೇರಾ ಸ್ವತಃ ಗೋಲು ಗಳಿಸಿ ಗೆಲುವಿನ ಅಂತರ ಹೆಚ್ಚಿಸಿದರು.
21 ಪಂದ್ಯಗಳನ್ನು ಆಡಿರುವ ಸುನಿಲ್ ಚೆಟ್ರಿ ಪಡೆ 10 ಗೆದ್ದು, ನಾಲ್ಕು ಡ್ರಾ ಮಾಡಿಕೊಂಡಿದ್ದು, ಏಳರಲ್ಲಿ ಸೋತಿದ್ದು ಒಟ್ಟು 34 ಪಾಯಿಂಟ್‌ಗಳೊಡನೆ ನಾಲ್ಕನೇ ಸ್ಥಾನಕ್ಕೇರಿತು. ಈ ಹಿಂದೆ ನಾಲ್ಕನೇ ಸ್ಥಾನದಲ್ಲಿದ್ದ ನಾರ್ತ್‌ಈಸ್ಟ್ (32 ಪಾಯಿಂಟ್ಸ್) ಐದನೇ ಸ್ಥಾನಕ್ಕೆ ಸರಿಯಿತು.
ಮೋಹನ್ ಬಾಗನ್ (49 ಪಾಯಿಂಟ್ಸ್), ಎಫ್‌ಸಿ ಗೋವಾ (39), ಜಮ್ಷೆಡ್‌ಪುರ (37) ಕ್ರಮವಾಗಿ ಮೊದಲ ಮೂರು ಸ್ಥಾನದಲ್ಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.