ADVERTISEMENT

ಇಂಡಿಯನ್‌ ಸೂಪರ್‌ ಲೀಗ್‌: ಮತ್ತೆ ಮೋಡಿ ಮಾಡುವರೇ ಚೆಟ್ರಿ?

ಇಂದು ಒಡಿಶಾ ಎದುರು ಹಣಾಹಣಿ; ಜಯದ ವಿಶ್ವಾಸದಲ್ಲಿ ಬಿಎಫ್‌ಸಿ

ಜಿ.ಶಿವಕುಮಾರ
Published 21 ಜನವರಿ 2020, 19:45 IST
Last Updated 21 ಜನವರಿ 2020, 19:45 IST
ಅಭ್ಯಾಸ ನಿರತ ಬಿಎಫ್‌ಸಿ ಆಟಗಾರರು
ಅಭ್ಯಾಸ ನಿರತ ಬಿಎಫ್‌ಸಿ ಆಟಗಾರರು   
""

ಬೆಂಗಳೂರು: ಭಾರತದ ‘ಫುಟ್‌ಬಾಲ್‌ ಮಾಂತ್ರಿಕ’ ಸುನಿಲ್‌ ಚೆಟ್ರಿ, ಕಂಠೀರವ ಕ್ರೀಡಾಂಗಣದಲ್ಲಿ ಮತ್ತೊಮ್ಮೆ ‘ಮ್ಯಾಜಿಕ್‌’ ಮಾಡುವರೇ..

ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ (ಬಿಎಫ್‌ಸಿ) ತಂಡದಲ್ಲಿರುವ ಇತರ ಆಟಗಾರರು ಇನ್ನಾದರೂ ಕಾಲ್ಚಳಕ ತೋರಿ ತವರಿನ ಅಭಿಮಾನಿಗಳನ್ನು ಪುಳಕಿತರನ್ನಾಗಿಸುವರೇ...

ಇಂತಹ ಕೆಲ ಪ್ರಶ್ನೆಗಳು ಈಗ ಬೆಂಗಳೂರಿನ ಫುಟ್‌ಬಾಲ್‌ ಪ್ರಿಯರನ್ನು ಕಾಡುತ್ತಿವೆ. ಬುಧವಾರ ನಡೆಯುವ ಇಂಡಿಯನ್‌ ಸೂಪರ್‌ ಲೀಗ್‌ (ಐಎಸ್‌ಎಲ್‌) ಆರನೇ ಆವೃತ್ತಿಯ 64ನೇ ಪಂದ್ಯದಲ್ಲಿ ಇವುಗಳಿಗೆ ಉತ್ತರ ಸಿಗುವ ನಿರೀಕ್ಷೆ ಇದೆ.

ADVERTISEMENT

ಒಡಿಶಾ ಎಫ್‌ಸಿ ಎದುರಿನ ಈ ಪೈಪೋಟಿ ಬಿಎಫ್‌ಸಿ ಪಾಲಿಗೆ ಮಹತ್ವದ್ದಾಗಿದೆ. ಇದರಲ್ಲಿ ಗೆದ್ದರೆ ಚೆಟ್ರಿ ಬಳಗ ಪಾಯಿಂಟ್ಸ್‌ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ವಿರಾಜಮಾನವಾಗಬಹುದು. ಇದಕ್ಕಾಗಿ ಆತಿಥೇಯರಿಂದ ಸಾಂಘಿಕ ಹೋರಾಟ ಮೂಡಿಬರಬೇಕು.

ಬಿಎಫ್‌ಸಿ ಆಡಿರುವ ಹಿಂದಿನ 13 ಪಂದ್ಯಗಳ ಫಲಿತಾಂಶಗಳ ಮೇಲೆ ಕಣ್ಣಾಡಿಸಿದರೆ ಅಲ್ಲಿ ಚೆಟ್ರಿ ಚಮತ್ಕಾರಗಳೇ ಎದ್ದು ಕಾಣುತ್ತವೆ. ಸಂದಿಗ್ಧ ಸಂದರ್ಭಗಳಲ್ಲೆಲ್ಲಾ ತಂಡಕ್ಕೆ ಆಪತ್ಬಾಂಧವರಾಗಿರುವ ಸುನಿಲ್‌, ಅನೇಕ ಪಂದ್ಯಗಳಲ್ಲಿ ಹಾಲಿ ಚಾಂಪಿಯನ್ನರಿಗೆ ಏಕಾಂಗಿಯಾಗಿ ಗೆಲುವಿನ ಸಿಹಿ ಉಣಬಡಿಸಿದ್ದಾರೆ.

ಈ ಬಾರಿ ಬಿಎಫ್‌ಸಿ ದಾಖಲಿಸಿರುವ 15 ಗೋಲುಗಳಲ್ಲಿ ಚೆಟ್ರಿ ಪಾಲೇ ಹೆಚ್ಚಿದೆ. ಅವರ ಕಾಲ್ಚಳಕದಲ್ಲಿ ಎಂಟು ಗೋಲುಗಳು ಅರಳಿವೆ. ಈ ಸಲ ಅತಿ ಹೆಚ್ಚು ಗೋಲು ಹೊಡೆದವರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಅವರು ಈಗ ಅಗ್ರಪಟ್ಟದ ಮೇಲೆ ಕಣ್ಣಿಟ್ಟಿದ್ದಾರೆ. ಅದಕ್ಕಾಗಿ ಇನ್ನೆರಡು ಬಾರಿ ಚೆಂಡನ್ನು ಗುರಿ ಮುಟ್ಟಿಸಬೇಕು. ಒಡಿಶಾ ವಿರುದ್ಧವೇ ಈ ಸಾಧನೆ ಮೂಡಿಬರುವ ನಿರೀಕ್ಷೆ ಇದೆ.

ಎರಿಕ್‌ ಪಾರ್ಟಲು, ಹಾವೊಕಿಪ್‌, ಅಲ್ಬರ್ಟ್‌ ಸೆರಾನ್‌ ಮತ್ತು ವುವಾನ್‌ ಆ್ಯಂಟೋನಿಯೊ ಅವರು ಲಭಿಸಿದ ಅವಕಾಶಗಳಲ್ಲಿ ಗೋಲು ದಾಖಲಿಸಲು ವಿಫಲರಾಗುತ್ತಿದ್ದಾರೆ. ಇದು ಕಾರ್ಲೊಸ್‌ ಕ್ವದ್ರತ್‌ ಮಾರ್ಗದರ್ಶನದ ಬಿಎಫ್‌ಸಿಗೆ ತಲೆನೋವಾಗಿ ಪರಿಣಮಿಸಿದೆ.

ಆರಂಭದ ಕೆಲ ಪಂದ್ಯಗಳಲ್ಲಿ ಅಮೋಘ ಆಟ ಆಡಿದ್ದ ರಕ್ಷಣಾ ವಿಭಾಗದ ಆಟಗಾರರು ಇದೇ ತಿಂಗಳ 17ರಂದು ನಡೆದಿದ್ದ ಮುಂಬೈ ಎದುರಿನ ಹಣಾಹಣಿಯಲ್ಲಿ ಮಂಕಾಗಿದ್ದರು. ಗೋಲ್‌ಕೀಪರ್‌ ಗುರುಪ್ರೀತ್‌ ಸಿಂಗ್‌ ಸಂಧು ಮಾಡಿದ ಎಡವಟ್ಟುಗಳೂ ತಂಡಕ್ಕೆ ಮುಳುವಾಗಿದ್ದವು. ಹಿಂದಿನ ತಪ್ಪುಗಳನ್ನು ತಿದ್ದಿಕೊಂಡು ಗುಣಮಟ್ಟದ ಸಾಮರ್ಥ್ಯ ತೋರುವ ಸವಾಲು ಈಗ ಆತಿಥೇಯರ ಎದುರಿಗಿದೆ.

ವಿಶ್ವಾಸದಲ್ಲಿ ಒಡಿಶಾ: ಹಿಂದಿನ ನಾಲ್ಕು ಪಂದ್ಯಗಳಲ್ಲೂ ಗೆದ್ದಿರುವ ಒಡಿಶಾ ತಂಡ ವಿಶ್ವಾಸದಿಂದ ಪುಟಿಯುತ್ತಿದೆ. 13 ಪಂದ್ಯಗಳಿಂದ 21 ಪಾಯಿಂಟ್ಸ್‌ ಕಲೆಹಾಕಿ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಹೊಂದಿರುವ ಈ ತಂಡ ಚೆಟ್ರಿ ಪಡೆಗೆ ‘ಚಳ್ಳೆ ಹಣ್ಣು’ ತಿನ್ನಿಸುವ ತವಕದಲ್ಲಿದೆ.

ಈ ಬಾರಿ ಅತಿ ಹೆಚ್ಚು ಗೋಲು ಗಳಿಸಿರುವ ತಂಡಗಳ ಪಟ್ಟಿಯಲ್ಲಿ ಒಡಿಶಾ ನಾಲ್ಕನೇ ಸ್ಥಾನದಲ್ಲಿದೆ. ಅರಿದಾನೆ ಜೀಸಸ್‌ ಕಾಬ್ರೆರಾ ಈ ತಂಡದ ಬೆನ್ನೆಲುಬು. ಅತಿ ಹೆಚ್ಚು ಗೋಲು ಹೊಡೆದವರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಕಾಬ್ರೆರಾ, ಬಿಎಫ್‌ಸಿ ತಂಡದ ರಕ್ಷಣಾ ವಿಭಾಗಕ್ಕೆ ಸವಾಲಾಗುವ ಸಾಧ್ಯತೆ ಇದೆ. ಫ್ರಾನ್ಸಿಸ್ಕೊ ಮಾರ್ಕೊಸ್‌, ಜೆರಿ ಮಾವಿ, ಕಾರ್ಲೊಸ್‌ ಜೇವಿಯರ್‌ ಡೆಲ್ಗಾಡೊ ಅವರ ಬಲವೂ ಈ ತಂಡಕ್ಕಿದೆ.

ಆರಂಭ: ರಾತ್ರಿ 7.30

ನೇರ ಪ್ರಸಾರ: ಸ್ಟಾರ್‌ ನೆಟ್‌ವರ್ಕ್‌.

*
ಮುಂಬೈ ಎದುರಿನ ಪಂದ್ಯದಲ್ಲಿ ಹಲವು ಎಡವಟ್ಟುಗಳನ್ನು ಮಾಡಿಕೊಂಡಿದ್ದೆವು. ಹೀಗಾಗಿ ಗೆಲುವು ಕೈಜಾರಿತ್ತು. ಒಡಿಶಾ ಎದುರು ಜಯಿಸುವುದು ನಮ್ಮ ಗುರಿ.
-ಕಾರ್ಲಸ್‌ ಕ್ವದ್ರತ್‌, ಬಿಎಫ್‌ಸಿ ಕೋಚ್‌

*
ಹಿಂದಿನ ನಾಲ್ಕು ಪಂದ್ಯಗಳನ್ನು ಗೆದ್ದಿರುವುದರಿಂದ ಆಟಗಾರರ ವಿಶ್ವಾಸ ಇಮ್ಮಡಿಸಿದೆ. ಬಿಎಫ್‌ಸಿ ಬಲಿಷ್ಠ ತಂಡ. ಆ ತಂಡವನ್ನು ಸೋಲಿಸಲು ಶಕ್ತಿಮೀರಿ ಪ್ರಯತ್ನಿಸುತ್ತೇವೆ.
-ಜೋಸೆಫ್‌ ಗೊಂಬವು, ಒಡಿಶಾ ಕೋಚ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.