
ಫುಟ್‌ಬಾಲ್
ನವದೆಹಲಿ: ಭಾರತ ಫುಟ್‌ಬಾಲ್ ತಂಡದ ಆಟಗಾರ್ತಿಯರಿಗೆ ನೀಡಿರುವ ಕಿಟ್ ಕಳಪೆಯಾಗಿದೆ. ‘ಪೋಷಾಕುಗಳು ಸರಿಯಾಗಿ ಹೊಂದುತ್ತಿಲ್ಲ’ ಎಂದು ಆಟಗಾರ್ತಿಯರು ದೂರಿದ್ದಾರೆ. ಪಂದ್ಯಕ್ಕೆ ಒಂದು ದಿನವಿರುವಾಗ ನಡೆದ ಈ ಬೆಳವಣಿಗೆ ಮುಜುಗರ ಉಂಟುಮಾಡಿದ್ದು, ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್‌ನ ದುರಾಡಳಿತವನ್ನು ಬಯಲು ಮಾಡಿದೆ.
ಇದು ಪಂದ್ಯಕ್ಕೆ ಮೊದಲು ತಮ್ಮ ನೈತಿಕ ಸ್ಥೈರ್ಯ ಮತ್ತು ಏಕಾಗ್ರತೆಯ ಮೇಲೆ ಪರಿಣಾಮ ಬೀರಿದೆ ಎಂದು ಆಟಗಾರ್ತಿಯರು ಎಐಎಫ್‌ಎಫ್ ಉಪ ಕಾರ್ಯದರ್ಶಿ ಎಂ.ಸತ್ಯನಾರಾಯಣ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
‘ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸುವ ವೇಳೆ ಕಿಟ್‌ಗಳು ವೃತ್ತಿಪರ ಮಟ್ಟದಲ್ಲಿರುವಂತೆ ನೋಡಿಕೊಳ್ಳಬೇಕಿತ್ತು. ಪಂದ್ಯದ ವೇಳೆ ಮತ್ತು ಅಭ್ಯಾಸದ ವೇಳೆ ಧರಿಸಲು ನೀಡಿದ ಉಡುಪುಗಳು ಹೊಂದುತ್ತಿಲ್ಲ. ಇದರಿಂದಾಗಿ ಆಟಗಾರ್ತಿಯರು ಮತ್ತು ಸಿಬ್ಬಂದಿ ಸಿದ್ಧತೆಯ ವೇಳೆ ಸಮಸ್ಯೆ ಅನುಭವಿಸಿದ್ದಾರೆ. ನಿರ್ಣಾಯಕ ಘಟ್ಟದಲ್ಲಿ ಹೀಗೆ ಆಗಿರುವುದು ನಮ್ಮ ಸ್ಥೈರ್ಯ ಉಡುಗುವಂತೆ ಮಾಡಿದೆ’ ಎಂದು ಪತ್ರದಲ್ಲಿ ಬರೆದಿದ್ದಾರೆ. ಎಲ್ಲ ಆಟಗಾರ್ತಿಯರು ಪತ್ರಕ್ಕೆ ಸಹಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.