ADVERTISEMENT

ISL 2025 Final | ಪ್ರಶಸ್ತಿಗೆ ಬಿಎಫ್‌ಸಿ, ಮೋಹನ್ ಬಾಗನ್ ಪೈಪೋಟಿ

ಕೋಲ್ಕತ್ತದಲ್ಲಿ ಐಎಸ್‌ಎಲ್‌ ಕಪ್‌ ಫೈನಲ್ ಇಂದು

ಪಿಟಿಐ
Published 12 ಏಪ್ರಿಲ್ 2025, 0:30 IST
Last Updated 12 ಏಪ್ರಿಲ್ 2025, 0:30 IST
   

ಕೋಲ್ಕತ್ತ: ಉತ್ಸಾಹದಲ್ಲಿರುವ ಬೆಂಗಳೂರು ಎಫ್‌ಸಿ ತಂಡವು, ಶನಿವಾರ ಇಲ್ಲಿ ನಡೆಯಲಿರುವ ಐಎಸ್‌ಎಲ್‌ ಕಪ್‌ ಫುಟ್‌ಬಾಲ್‌ ಟೂರ್ನಿಯ ಫೈನಲ್‌ನಲ್ಲಿ ಲೀಗ್‌ ವಿಜೇತರಾದ ಮೋಹನ್ ಬಾಗನ್ ಸೂಪರ್‌ ಜೈಂಟ್ಸ್‌ ತಂಡವನ್ನು ಎದುರಿಸಲಿದೆ.

ಮೋಹನ್ ಬಾಗನ್ ತಂಡದ ಭದ್ರ ಕೋಟೆ ಎನಿಸಿರುವ ವಿವೇಕಾನಂದ ಯುವ ಭಾರತಿ ಕ್ರೀಡಾಂಗಣದಲ್ಲಿ ನಡೆಯಲಿರುವ ‘ಬ್ಲಾಕ್‌ಬಸ್ಟರ್‌ ಫೈನಲ್’ನಲ್ಲಿ ತುರುಸಿನ ಪೈಪೋಟಿ ನಿರೀಕ್ಷಿಸಲಾಗಿದೆ.

‘ಈ ಹಿಂದಿನ ಪಂದ್ಯಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಮುಂದಿನದಷ್ಟೇ ಮುಖ್ಯ’ ಎಂದು ಮೋಹನ್‌ ಬಾಗನ್ ಕೋಚ್‌ ಜೋಸ್ ಮೊಲಿನಾ ಹೇಳಿದರೆ, ಇಲ್ಲಿ ಆಡುವ ಬಗ್ಗೆ ಒಂದಿಷ್ಟೂ ವಿಚಲಿತರಾಗದ ಎಫ್‌ಸಿ ಕೋಚ್‌ ಜೆರಾರ್ಡ್‌ ಝಾರ್ಗೋಝಾ ಮತ್ತು ನಾಯಕ ಗುರುಪ್ರೀತ್ ಸಿಂಗ್‌ ಸಂಧು, ಕೋಲ್ಕತ್ತವನ್ನು ತಮ್ಮ ಎರಡನೇ ತವರು ಎಂದು ಬಣ್ಣಿಸಿದ್ದಾರೆ.

ADVERTISEMENT

‘ನಾವು ಲೀಗ್‌ ಶೀಲ್ಡ್‌ ಗೆದ್ದುಕೊಂಡಿದ್ದೇವೆ. ಇದರಿಂದಾಗಿ ಐಎಸ್‌ಎಲ್‌ ಕಪ್‌ ಗೆಲ್ಲಲೂ ನಾವು ಪ್ರೇರಣೆ ಹೊಂದಿದ್ದೇವೆ’ ಎಂದು ಕೋಚ್‌ ಮೊಲಿನಾ ಹೇಳಿದರು. 

‘ನಾವು ಫೈನಲ್ ಆಡಲು ತವಕದಿಂದ ಇದ್ದೇವೆ. ಕೋಲ್ಕತ್ತ ನಮಗೆ ಬಹುತೇಕ ಎರಡನೇ ತವರು ಇದ್ದಂತೆ. ಡ್ಯುರಾಂಡ್‌ ಕಪ್‌ ಆಡಲೂ ಇಲ್ಲಿಗೆ ಬಂದಿದ್ದೆವು. ಪ್ಲೇ ಆಫ್‌ ಪಂದ್ಯಗಳಲ್ಲಿ ಉತ್ತಮವಾಗಿ ಆಡಿದ್ದೇವೆ. ಗ್ರ್ಯಾಂಡ್‌ ಫಿನಾಲೆ ಆಡಲು ತುದಿಗಾಲಲ್ಲಿದ್ದೇವೆ’ ಎಂದು ಬೆಂಗಳೂರು ತಂಡದ ಕೋಚ್‌ ಝಾರ್ಗೋಝಾ ಹೇಳಿದರು.

ಲೀಗ್ ಹಂತದ ಪಂದ್ಯಗಳ ನಂತರ ಬಾಗನ್‌ ಅಗ್ರಸ್ಥಾನ ಪಡೆದಿದ್ದರೆ, ಬೆಂಗಳೂರಿನ ತಂಡ ಮೂರನೇ ಸ್ಥಾನ ಪಡೆದಿತ್ತು. ನಂತರ ಪ್ಲೇ ಆಫ್‌ ಸವಾಲುಗಳನ್ನು ನಿಭಾಯಿಸಿ ಪ್ರಶಸ್ತಿ ಸುತ್ತಿಗೆ ಲಗ್ಗೆಯಿಟ್ಟಿದೆ.

ಬೆಂಗಳೂರಿನ ತಂಡಕ್ಕೆ ಇದು ಎಂಟು ವರ್ಷಗಳಲ್ಲಿ ನಾಲ್ಕನೇ ಫೈನಲ್ ಆಗಿದೆ. ಮೋಹನ್ ಬಾಗನ್ ಸತತ ಮೂರನೇ ಬಾರಿ ಫೈನಲ್ ತಲುಪಿದ ಮೊದಲ ತಂಡವೆನಿಸಿದೆ.

2022–23ರಲ್ಲಿ ಇವೆರಡು ತಂಡಗಳು ಫೈನಲ್‌ನಲ್ಲಿ ಮುಖಾಮುಖಿ ಆಗಿದ್ದವು. ಆ ಬಾರಿ ಕೋಲ್ಕತ್ತದ ತಂಡ ಕಠಿಣ ಹೋರಾಟದ ಬಳಿಕ ಪೆನಾಲ್ಟಿ ಶೂಟೌಟ್‌ನಲ್ಲಿ ಜಯಗಳಿಸಿತ್ತು. ಈ ಬಾರಿಯೂ ತವರಿನಲ್ಲಿ ಪ್ರೇಕ್ಷಕರ ಬೆಂಬಲದ ನಡುವೆ ಅದೇ ಫಲಿತಾಂಶದ ನಿರೀಕ್ಷೆಯಲ್ಲಿ ಕೋಲ್ಕತ್ತದ ತಂಡ ಇದೆ. ಬೆಂಗಳೂರು ತಂಡ ಇತ್ತೀಚಿನ ದಿನಗಳಲ್ಲಿ ಕಂಡುಕೊಂಡಿರುವ ಲಯದಿಂದಾಗಿ, ತವರಿನಲ್ಲಿ ಕೋಲ್ಕತ್ತದ ಅಜೇಯ ದಾಖಲೆಯನ್ನು ಮುರಿಯುವ ವಿಶ್ವಾಸದಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.