ಬ್ಯಾಂಬೊಲಿಮ್, ಗೋವಾ: ನೀರಸ ಆಟವಾಡಿ ನಿರಾಶೆಗೆ ಒಳಗಾಗಿರುವ ಬೆಂಗಳೂರು ಫುಟ್‌ಬಾಲ್ ಕ್ಲಬ್ (ಬಿಎಫ್‌ಸಿ) ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ಫುಟ್‌ಬಾಲ್ ಟೂರ್ನಿಯಲ್ಲಿ ಮತ್ತೊಂದು ಸವಾಲಿಗೆ ಸಜ್ಜಾಗಿದೆ. ಶನಿವಾರ ಇಲ್ಲಿನ ಅಥ್ಲೆಟಿಕ್ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಬಿಎಫ್‌ಸಿ ಆತಿಥೇಯ ಎಫ್‌ಸಿ ಗೋವಾ ಎದುರು ಸೆಣಸಲಿದೆ.
ಲೀಗ್‌ನ ಬಲಿಷ್ಠ ತಂಡಗಳೆಂದೇ ಹೇಳಲಾಗುವ ಬಿಎಫ್‌ಸಿ ಮತ್ತು ಗೋವಾ ಈ ಬಾರಿ ನಿರೀಕ್ಷೆ ತಕ್ಕಂತೆ ಮಿಂಚಲಿಲ್ಲ. ಹೀಗಾಗಿ ಪಾಯಿಂಟ್ ಪಟ್ಟಿಯ ತಳಭಾಗದಲ್ಲಿವೆ. ಆದ್ದರಿಂದ ಮರುಚೇತನ ಗಳಿಸಲು ಪ್ರಯತ್ನಿಸಲಿವೆ.
ಸತತ ಮೂರು ಪಂದ್ಯಗಳಲ್ಲಿ ಸೋತಿದ್ದ ಗೋವಾ ಹಿಂದಿನ ಪಂದ್ಯದಲ್ಲಿ ಈಸ್ಟ್ ಬೆಂಗಾಲ್ ವಿರುದ್ಧ 4–3ರಿಂದ ಜಯ ಗಳಿಸಿ ಲಯಕ್ಕೆ ಮರಳಿತ್ತು. ಬೆಂಗಳೂರು ಎಫ್‌ಸಿ ಹಿಂದಿನ ಎರಡು ಪಂದ್ಯಗಳನ್ನು ಸೋತು ನಿರಾಶೆಯಲ್ಲಿದೆ. ಸುನಿಲ್ ಚೆಟ್ರಿ ಈ ವರೆಗೆ 99 ಪಂದ್ಯಗಳನ್ನು ಆಡಿದ್ದು ಶನಿವಾರದ ಪಂದ್ಯದಲ್ಲಿ ಕಣಕ್ಕೆ ಇಳಿದರೆ ಐಎಸ್‌ಎಲ್‌ನಲ್ಲಿ 100 ಪಂದ್ಯಗಳನ್ನು ಆಡಿದ ಮೊದಲ ಆಟಗಾರ ಎನಿಸಿಕೊಳ್ಳಲಿದ್ದಾರೆ.
ಎಟಿಕೆಎಂಬಿಗೆ ’ಹ್ಯಾಟ್ರಿಕ್‘ ಸೋಲಿನ ಆತಂಕ
ಬಲಿಷ್ಠ ಎಟಿಕೆ ಮೋಹನ್ ಬಾಗನ್ ತಂಡವೂ ಈ ಬಾರಿ ನಿರೀಕ್ಷಿತ ಸಾಮರ್ಥ್ಯ ಪ್ರದರ್ಶಿಸಲಿಲ್ಲ. ಸತತ ಎರಡು ಪಂದ್ಯಗಳಲ್ಲಿ ನಿರಾಸೆ ಕಂಡಿರುವ ತಂಡ ಈಗ ಹ್ಯಾಟ್ರಿಕ್ ಸೋಲಿನ ಆತಂಕದಲ್ಲಿದ್ದು ಶನಿವಾರದ ಮೊದಲ ಪಂದ್ಯದಲ್ಲಿ ಚೆನ್ನೈಯಿನ್ ಎಫ್‌ಸಿಯನ್ನು ಎದುರಿಸಲಿದೆ.
ಕೇರಳ ಬ್ಲಾಸ್ಟರ್ಸ್ ಮತ್ತು ಎಸ್‌ಸಿ ಈಸ್ಟ್ ಬೆಂಗಾಲ್ ವಿರುದ್ಧ ಗೆದ್ದು ಶುಭಾರಂಭ ಮಾಡಿದ್ದ ಎಟಿಕೆಎಂಬಿ ನಂತರ ಮುಂಬೈ ಸಿಟಿ ಎಫ್‌ಸಿ ಮತ್ತು ಜೆಮ್ಶೆಡ್‌ಪುರ ಎಫ್‌ಸಿಗೆ ಮಣಿದಿತ್ತು. ರಾಷ್ಟ್ರೀಯ ತಂಡದಲ್ಲಿ ಆಡಿದ ಅನುಭವ ಇರುವ ಪ್ರೀತಮ್ ಕೊತಾಲ್ ಮತ್ತು ಸುಭಾಷಿಷ್ ಬೋಸ್ ಅವರು ನಿರೀಕ್ಷೆಗೆ ತಕ್ಕಂತೆ ಆಡಲಿಲ್ಲ. ತಂಡದ ಪ್ರಮುಖ ಆಟಗಾರರಾದ ತಿರಿ ಮತ್ತು ಸಂದೇಶ್ ಜಿಂಗಾನ್ ಅವರ ಅನುಪಸ್ಥಿತಿಯ ಈ ಬಾರಿ ಎದ್ದು ಕಾಣುತ್ತಿದೆ. ತಿರಿ ಗಾಯಗೊಂಡಿದ್ದು ಸಂದೇಶ್ ಅವರು ಕ್ರೊವೇಷ್ಯಾದ ಕ್ಲಬ್ ಸಿಬೆನಿಕ್‌ನಲ್ಲಿ ಆಡಲು ತೆರಳಿದ್ದಾರೆ.
ಚೆನ್ನೈಯಿನ್ ಎಫ್‌ಸಿಯ ಡಿಫೆಂಡರ್‌ಗಳು ಈ ಬಾರಿ ಅತ್ಯುತ್ತಮ ಸಾಮರ್ಥ್ಯ ಪ್ರದರ್ಶಿಸಿದ್ದು ಕಡಿಮೆ ಗೋಲು ಬಿಟ್ಟುಕೊಟ್ಟ ತಂಡಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಎಟಿಕೆಯ ಆಕ್ರಮಣವನ್ನು ತಂಡ ಹೇಗೆ ತಡೆಯಲಿದೆ ಎಂಬುದು ಕುತೂಹಲದ ವಿಷಯ.
ಬಿಎಫ್‌ಸಿಯ ಹಾದಿ
ಪಂದ್ಯ 5
ಜಯ 1
ಡ್ರಾ 1
ಸೋಲು 3
ಗೋಲು 7*
ಕೊಟ್ಟ ಗೋಲು 10
(*ಉಡುಗೊರೆ ಗೋಲು ಸೇರಿ)
ಬಿಎಫ್‌ಸಿ ಪರ ಗೋಲು ಗಳಿಸಿದವರು
ಆಟಗಾರ;ಪಂದ್ಯ;ಗೋಲು
ಕ್ಲೀಟನ್ ಸಿಲ್ವಾ;5;2
ಪ್ರಿನ್ಸ್ ವಿನಿ;4;1
ಜಯೇಶ್ ರಾಣೆ;4;1
ಅಲನ್ ಕೋಸ್ಟ;5;1
ಆಶಿಕ್ ಕೆ;5;1
ಇಂದಿನ ಪಂದ್ಯಗಳು
ಎಟಿಕೆ ಮೋಹನ್ ಬಾಗನ್–ಚೆನ್ನೈಯಿನ್ ಎಫ್‌ಸಿ
ಆರಂಭ: ರಾತ್ರಿ 7.30
ಬೆಂಗಳೂರು ಎಫ್‌ಸಿ–ಎಫ್‌ಸಿ ಗೋವಾ
ಆರಂಭ: ರಾತ್ರಿ 9.30
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.