ADVERTISEMENT

ಆ್ಯಡಂ ಮಿಂಚು; ಮುಂಬೈ ಸಿಟಿಗೆ ಜಯ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2020, 16:34 IST
Last Updated 1 ಡಿಸೆಂಬರ್ 2020, 16:34 IST
ಮುಂಬೈ ಸಿಟಿ ತಂಡದ ಗೋಲ್‌ಕೀಪರ್ ಅಮರೀಂದರ್ ಸಿಂಗ್  ಆಟ  –ಪಿಟಿಐ ಚಿತ್ರ
ಮುಂಬೈ ಸಿಟಿ ತಂಡದ ಗೋಲ್‌ಕೀಪರ್ ಅಮರೀಂದರ್ ಸಿಂಗ್  ಆಟ  –ಪಿಟಿಐ ಚಿತ್ರ   

ಬ್ಯಾಂಬೊಲಿಮ್: ಆ್ಯಡಂ ಲಿ ಫಾಂಡ್ರೆ ಅಮೋಘ ಅಟದ ನೆರವಿನಿಂದ ಮುಂಬೈ ಸಿಟಿ ತಂಡವು ಮಂಗಳವಾರ ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್ ಟೂರ್ನಿಯ ಪಂದ್ಯದಲ್ಲಿ ಜಯಿಸಿತು.

ಆ್ಯಡಂ ಬಾರಿಸಿದ ಎರಡು ಗೋಲುಗಳ ಬಲದಿಂದ ಮುಂಬೈ ತಂಡವು 3–0 ಗೋಲುಗಳಿಂದ ಈಸ್ಟ್‌ ಬೆಂಗಾಲ್ ವಿರುದ್ಧ ಜಯಿಸಿತು.

ಆ್ಯಡಂ 20ನೇ ನಿಮಿಷದಲ್ಲಿ ಗೋಲು ಬಾರಿಸಿದರು. 48ನೇ ನಿಮಿಷದಲ್ಲಿ ಲಭಿಸಿದ ಪೆನಾಲ್ಟಿ ಕಾರ್ನರ್‌ನಲ್ಲಿಯೂ ಆ್ಯಡಂ ಗೋಲು ಹೊಡೆದರು. ಇಂಗ್ಲೆಂಡ್‌ನ 33 ವರ್ಷದ ಆ್ಯಂಡ್ರೆ ಮಿಂಚಿನ ವೇಗದಲ್ಲಿ ಚೆಂಡನ್ನು ಗುರಿ ಮುಟ್ಟಿಸಿದರು. ಇದರಿಂದಾಗಿ ತಂಡವು ಜಯದ ದಾರಿ ಹಿಡಿಯಿತು.

ADVERTISEMENT

58ನೇ ನಿಮಿಷದಲ್ಲಿ ಹರ್ನನ್ ಸಂತಾನಾ ಗೋಲು ಬಾರಿಸಿ ಮುಂಬೈ ತಂಡ ಜಯದ ಅವಕಾಶವನ್ನು ಮತ್ತಷ್ಟು ಹೆಚ್ಚಿಸಿದರು. ತಂಡದ ಗೋಲ್‌ಕೀಪರ್ ಅಮರೀಂದರ್ ಸಿಂಗ್ ಅವರ ಚುರುಕಾದ ಆಟವು ಬೆಂಗಾಲ್ ತಂಡಕ್ಕೆ ಸಿಂಹಸ್ವಪ್ನವಾಯಿತು.

ಈಸ್ಟ್ ಬೆಂಗಾಲ್ ತಂಡದ ಗೋಲು ಗಳಿಸುವ ಎಲ್ಲ ಪ್ರಯತ್ನಗಳಿಗೂ ಮುಂಬೈ ರಕ್ಷಣಾಪಡೆಯು ಅಡ್ಡಿಯಾಯಿತು. ಮುಂಬೈಗೆ ಇದು ಎರಡನೇ ಜಯ. ಒಂದು ಪಂದ್ಯವನ್ನು ಸೋತಿದೆ. ಆದರೆ, ಆರು ಪಾಯಿಂಟ್ಸ್‌ನೊಂದಿಗೆ ಅಗ್ರಸ್ಥಾನದಲ್ಲಿದೆ.

ಆದರೆ ಈಸ್ಟ್ ಬೆಂಗಾಲ್ ತಂಡವು ಸತತ ಎರಡನೇ ಪಂದ್ಯದಲ್ಲಿಯೂ ಸೋತು ಕೊನೆಯ ಸ್ಥಾನದಲ್ಲಿದೆ. ಈ ಪಂದ್ಯದಲ್ಲಿ ಲಭಿಸಿದ ಒಂದು ಕಾರ್ನರ್‌ನಲ್ಲಿ ಗೋಲು ಹೊಡೆಯುವ ಪ್ರಯತ್ನ ಕೂದಲೆಳೆ ಅಂತರದಲ್ಲಿ ತಪ್ಪಿತು. ‌ಮುಂಬೈ ತಂಡಕ್ಕೆ ಐದು ಕಾರ್ನರ್‌ಗಳು ಲಭಿಸಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.