ADVERTISEMENT

ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್‌: ಚೆಟ್ರಿ ಪಡೆಗೆ ಒಲಿಯದ ಗೆಲುವು

ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್‌: ಎಟಿಕೆಎಂಬಿ ಜಯಭೇರಿ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2022, 18:31 IST
Last Updated 3 ಡಿಸೆಂಬರ್ 2022, 18:31 IST
ಗೋಲು ಗಳಿಸಿದ ಡಿಮಿಟ್ರಿ ಪೆಟ್ರಾಟೋಸ್‌ ಅವರನ್ನು ಸಹ ಆಟಗಾರ ಅಭಿನಂದಿಸಿದರು– ಎಟಿಕೆಎಂಬಿ ಟ್ವಿಟರ್ ಚಿತ್ರ
ಗೋಲು ಗಳಿಸಿದ ಡಿಮಿಟ್ರಿ ಪೆಟ್ರಾಟೋಸ್‌ ಅವರನ್ನು ಸಹ ಆಟಗಾರ ಅಭಿನಂದಿಸಿದರು– ಎಟಿಕೆಎಂಬಿ ಟ್ವಿಟರ್ ಚಿತ್ರ   

ಬೆಂಗಳೂರು: ತವರಿನ ಪ್ರೇಕ್ಷಕರ ಅಪಾರ ಬೆಂಬಲದೊಂದಿಗೆ ಕಣಕ್ಕಿಳಿದ ಬೆಂಗಳೂರು ಎಫ್‌ಸಿಗೆ ಗೆಲುವು ಒಲಿಯಲಿಲ್ಲ. ಕಂಠೀರವ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಇಂಡಿಯನ್‌ ಸೂಪರ್‌ ಲೀಗ್ ಫುಟ್‌ಬಾಲ್ ಟೂರ್ನಿಯ ಪಂದ್ಯದಲ್ಲಿ ಎಟಿಕೆ ಮೋಹನ್ ಬಾಗನ್‌ (ಎಟಿಕೆಎಂಬಿ) 1–0ಯಿಂದ ಸುನಿಲ್ ಚೆಟ್ರಿ ನಾಯಕತ್ವದ ತಂಡಕ್ಕೆ ಸೋಲುಣಿಸಿತು.

ಪಂದ್ಯದ 66ನೇ ನಿಮಿಷದಲ್ಲಿ ಡಿಮಿಟ್ರಿ ಪೆಟ್ರಾಟೋಸ್‌ ಗಳಿಸಿದ ಗೋಲು ಎಟಿಕೆಎಂಬಿ ತಂಡದ ಗೆಲುವಿಗೆ ಕಾರಣವಾಯಿತು. ಹ್ಯೂಗೊ ಬೌಮೊಸ್‌ ನೀಡಿದ ಪಾಸ್‌ನಲ್ಲಿ ಡಿಮಿಟ್ರಿ ಗೋಲ್‌ಪೋಸ್ಟ್‌ನತ್ತ ‘ಕರ್ವಿಂಗ್‌ ಶಾಟ್‌’ ಮೂಲಕ ಚೆಂಡು ಒದ್ದರು. ಬಿಎಫ್‌ಸಿ ಗೋಲ್‌ಕೀಪರ್ ಗುರುಪ್ರೀತ್ ಸಿಂಗ್ ಸಂಧು ಅವರು ಎಡಭಾಗಕ್ಕೆ ಡೈವ್ ಮಾಡಿದರೆ, ಚೆಂಡು ಬಲಭಾಗದ ಮೂಲಕ ಗುರಿ ಸೇರಿತು.

ಇದಕ್ಕೂ ಮೊದಲು ಆರಂಭದಿಂದಲೇ ಉಭಯ ತಂಡಗಳ ಮಧ್ಯೆ ಜಿದ್ದಾಜಿದ್ದಿನ ಪೈಪೋಟಿ ಕಂಡುಬಂತು. ಹಲವು ಅವಕಾಶಗಳು ಎರಡೂ ತಂಡಗಳಿಗೆ ಲಭಿಸಿದವು. ಪರಸ್ಪರ ಪಾಸ್‌ಗಳನ್ನು ರವಾನಿಸುವಲ್ಲಿ ಎಟಿಕೆಎಂಬಿ ಆಟಗಾರರಲ್ಲಿ ಹೆಚ್ಚು ಹೊಂದಾಣಿಕೆ ಕಂಡುಬಂತು. ಆದರೆ ಈ ವಿಷಯದಲ್ಲಿ ಬೆಂಗಳೂರು ಎಫ್‌ಸಿ (ಬಿಎಫ್‌ಸಿ) ಆಟ ಪರಿಣಾಮಕಾರಿ ಎನಿಸಲಿಲ್ಲ.

ADVERTISEMENT

ಐದನೇ ನಿಮಿಷದಲ್ಲೇ ಬಿಎಫ್‌ಸಿಯ ಜಾವಿ ಹೆರ್ನಾಂಡಿಸ್‌ ಅವರಿಗೆ ಗೋಲು ಗಳಿಸುವ ಸುವರ್ಣ ಅವಕಾಶವಿತ್ತು. ಆದರೆ ಎದುರಾಳಿ ಗೋಲ್‌ಕೀಪರ್ ವಿಶಾಲ್‌ ಕೈತ್‌ ಕೋಟೆ ದಾಟಲಾಗಲಿಲ್ಲ. ನಾಯಕ ಚೆಟ್ರಿ, ರಾಯ್‌ಕೃಷ್ಣ ಕೂಡ ಗೋಲು ಗಳಿಸುವ ಅವಕಾಶಗಳನ್ನು ತಪ್ಪಿಸಿಕೊಂಡಿದ್ದು ತಂಡಕ್ಕೆ ಮುಳುವಾಯಿತು.

ಈ ಸೋಲಿನೊಂದಿಗೆ ಬೆಂಗಳೂರು (7) ಪಾಯಿಂಟ್ಸ್ ಪಟ್ಟಿಯಲ್ಲಿ ಒಂಬತ್ತನೇ ಸ್ಥಾನಕ್ಕಿಳಿಯಿತು.ಈ ಪಂದ್ಯದಲ್ಲಿ ಎಟಿಕೆಎಂಬಿಯ ಬ್ರೆಂಡನ್ ಹ್ಯಾಮಿಲ್‌, ಲೆನ್ನಿ ರಾಡ್ರಿಗಸ್‌ ಮತ್ತು ಸುಭಾಶಿಸ್‌ ಬೋಸ್‌ ಹಳದಿ ಕಾರ್ಡ್ ದರ್ಶನ ಮಾಡಿದರು.

ಎರಡನೇ ಸ್ಥಾನಕ್ಕೆ ಹೈದರಾಬಾದ್‌: ಚೆನ್ನೈನಲ್ಲಿ ನಡೆದ ಮತ್ತೊಂದು ಪಂದ್ಯದಲ್ಲಿ ಹೈದರಾಬಾದ್‌ ಎಫ್‌ಸಿ ತಂಡವು 3–1ರಿಂದ ಆತಿಥೇಯ ಚೆನ್ನೈಯಿನ್ ಎಫ್‌ಸಿಗೆ ಸೋಲುಣಿಸಿತು. ಇದರೊಂದಿಗೆ ಪಾಯಿಂಟ್ಸ್ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿತು. ಸದ್ಯ ತಂಡದ ಬಳಿ 19 ಪಾಯಿಂಟ್‌ಗಳಿವೆ

ಹೈದರಾಬಾದ್ ತಂಡಕ್ಕಾಗಿ ಹಲೀಚರಣ್‌ ನಾರ್ಜರಿ (65ನೇ ನಿಮಿಷ), ಚಿಂಗ್ಲೆನ್ಸನಾ ಸಿಂಗ್‌ (74ನೇ ನಿ.) ಮತ್ತು ಸಬ್‌ಸ್ಟಿಟ್ಯೂಟ್ ಆಟಗಾರ ಬೋರ್ಜಾ ಹೆರೆರಾ (85ನೇ ನಿ.) ಗೋಲು ದಾಖಲಿಸಿದರು. ಚೆನ್ನೈ ಪ‍ರ ಪೀಟರ್‌ ಸ್ಲಿಸ್ಕೊವಿಚ್‌ (78ನೇ ನಿ.) ಗೋಲು ಹೊಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.