ADVERTISEMENT

ಐಎಸ್‌ಎಲ್‌ನ ಎಲ್ಲ ಪಂದ್ಯಗಳಿಗೆ ಗೋವಾ ಆತಿಥ್ಯ

ಪಿಟಿಐ
Published 16 ಆಗಸ್ಟ್ 2020, 13:55 IST
Last Updated 16 ಆಗಸ್ಟ್ 2020, 13:55 IST
ಗೋವಾದ ಫತೋಡಾ ಕ್ರೀಡಾಂಗಣದಲ್ಲಿ ನಡೆದ ಐಎಸ್‌ಎಲ್ ಪಂದ್ಯವೊಂದರ ನೋಟ –ಪಿಟಿಐ ಚಿತ್ರ
ಗೋವಾದ ಫತೋಡಾ ಕ್ರೀಡಾಂಗಣದಲ್ಲಿ ನಡೆದ ಐಎಸ್‌ಎಲ್ ಪಂದ್ಯವೊಂದರ ನೋಟ –ಪಿಟಿಐ ಚಿತ್ರ   

ನವದೆಹಲಿ: ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ಫುಟ್‌ಬಾಲ್ ಟೂರ್ನಿಯ ಏಳನೇ ಆವೃತ್ತಿಯ ಎಲ್ಲ ಪಂದ್ಯಗಳನ್ನೂ ಗೋವಾದಲ್ಲಿ ನಡೆಸಲು ಉದ್ದೇಶಿಸಿದ್ದು ಮೂರು ಕ್ರೀಡಾಂಗಣಗಳು ಹಣಾಹಣಿಗೆ ಸಜ್ಜಾಗಲಿವೆ ಎಂದು ಆಯೋಜಕರು ಭಾನುವಾರ ತಿಳಿಸಿದ್ದಾರೆ. ಟೂರ್ನಿ ನವೆಂಬರ್‌ನಲ್ಲಿ ನಡೆಯುವ ಸಾಧ್ಯತೆ ಇದ್ದು ಕೋವಿಡ್‌–19ಕ್ಕೆ ಸಂಬಂಧಿಸಿದ ಮಾರ್ಗದರ್ಶಿ ಸೂತ್ರಗಳನ್ನು ಕಡ್ಡಾಯವಾಗಿ ಪಾಲಿಸಲಾಗುವುದು ಎಂದು ತಿಳಿಸಲಾಗಿದೆ.

ಆಟಗಾರರು ಮತ್ತು ಅಧಿಕಾರಿಗಳ ಪ್ರಯಾಣವನ್ನು ಆದಷ್ಟು ಕಡಿಮೆ ಮಾಡುವ ಸಲುವಾಗಿ ಒಂದೇ ರಾಜ್ಯದಲ್ಲಿ ಟೂರ್ನಿಯನ್ನು ಆಯೋಜಿಸಲು ನಿರ್ಧರಿಸಲಾಗಿದೆ. ಕೇರಳ ಫಟ್‌ಬಾಲ್ ಸಂಸ್ಥೆಯೂ ಐಎಸ್‌ಎಲ್‌ಗೆ ಆತಿಥ್ಯ ವಹಿಸಲು ಆಸಕ್ತಿ ವಹಿಸಿತ್ತು. ಆದರೆ ಕೊನೆಗೆ ಗೋವಾಗೆ ಅವಕಾಶ ನೀಡಲು ಆಯೋಜಕ ಸಂಸ್ಥೆ ಫುಟ್‌ಬಾಲ್ ಸ್ಪೋರ್ಟ್ಸ್ ಡೆವಲಪ್‌ಮೆಂಟ್ ಲಿಮಿಟೆಡ್ (ಎಫ್‌ಎಸ್‌ಡಿಎಲ್) ನಿರ್ಧರಿಸಿತು.

ಫತೋಡಾದ ಜವಾಹರ್‌ಲಾಲ್ ನೆಹರು ಕ್ರೀಡಾಂಗಣ, ವಾಸ್ಕೋ ಡ ಗಾಮಾದ ತಿಲಕ್ ನಗರ ಕ್ರೀಡಾಂಗಣ ಮತ್ತು ಬ್ಯಾಂಬೊಲಿನ್‌ನ ಜಿಎಂಸಿ ಅಥ್ಲೆಟಿಕ್ ಕ್ರೀಡಾಂಗಣದಲ್ಲಿ ಪಂದ್ಯಗಳು ನಡೆಯಲಿವೆ.

ADVERTISEMENT

‘ಕಳೆದ ಬಾರಿಯ ಫೈನಲ್ ಪಂದ್ಯ ಗೋವಾದಲ್ಲಿ ನಡೆದಿತ್ತು. ಅಲ್ಲೇ ಏಳನೇ ಆವೃತ್ತಿಯನ್ನು ಆರಂಭಿಸಲು ಮತ್ತು ಎಲ್ಲ ಪಂದ್ಯಗಳನ್ನು ಆಯೋಜಿಸಲು ನಿರ್ಧರಿಸಲಾಗಿದೆ. ಐಎಸ್‌ಎಲ್‌ಗೆ ಕೊನೆಗೂ ಸ್ಥಳ ನಿಗದಿ ಮಾಡಿರುವುದು ಖುಷಿ ತಂದಿದೆ. ಸುಂದರ ರಾಜ್ಯವಾದ ಗೋವಾದಲ್ಲಿ ಫುಟ್‌ಬಾಲ್‌ ಬಗ್ಗೆ ಪ್ರೀತಿ ಇಟ್ಟುಕೊಂಡಿರುವ ಅಭಿಮಾನಿಗಳು ಧಾರಾಳ ಇದ್ದಾರೆ. ಅಂಥ ರಾಜ್ಯವು ರೋಚಕ ಟೂರ್ನಿಗೆ ಆತಿಥ್ಯ ವಹಿಸಲಿದೆ ಎಂಬುದನ್ನು ತಿಳಿಸಲು ಸಂತಸವಾಗುತ್ತಿದೆ’ ಎಂದು ಎಫ್‌ಎಸ್‌ಡಿಎಲ್ ಸ್ಥಾಪಕಿ ಮತ್ತು ಅಧ್ಯಕ್ಷೆ ನೀತಾ ಅಂಬಾನಿ ತಿಳಿಸಿದರು.

ಐ–ಲೀಗ್‌ನ ಎಲ್ಲ ಪಂದ್ಯಗಳನ್ನು ಈ ಬಾರಿ ಕೋಲ್ಕತ್ತದಲ್ಲಿ ಆಯೋಜಿಸಲು ಅಖಿಲ ಭಾರತ ಫುಟ್‌ಬಾಲ್ ಸಂಸ್ಥೆ ಶನಿವಾರ ನಿರ್ಧರಿಸಿತ್ತು. ಇದರ ಬೆನ್ನಲ್ಲೇ ಐಎಸ್‌ಎಲ್‌ ಟೂರ್ನಿಗೆ ಸಂಬಂಧಿಸಿದ ನಿರ್ಧಾರ ಕೈಗೊಳ್ಳಲಾಗಿದೆ. ಜವಾಹರಲಾಲ್ ನೆಹರು ಕ್ರೀಡಾಂಗಣ ಕಳೆದ ಬಾರಿ ಲೀಗ್‌ ಹಂತದ ಚಾಂಪಿಯನ್ ಆಗಿದ್ದ ಎಫ್‌ಸಿ ಗೋವಾ ತಂಡದ ತವರು. ಈ ಕ್ರೀಡಾಂಗಣದಲ್ಲಿ ಫಿಫಾ ವಿಶ್ವಕಪ್ ಮತ್ತು ಎಎಫ್‌ಸಿ ಏಷ್ಯಾ ಕಪ್ ಟೂರ್ನಿಗಳ ಅರ್ಹತಾ ಸುತ್ತಿನ ಪಂದ್ಯಗಳು ನಡೆದಿದ್ದವು. ತಿಲಕ್‌ ನಗರ ಕ್ರೀಡಾಂಗಣವು ಐ–ಲೀಗ್ ಮತ್ತು ಗೋವಾದ ವೃತ್ತಿಪರ ಲೀಗ್‌ನ ಪಂದ್ಯಗಳಿಗೆ ಆತಿಥ್ಯ ವಹಿಸಿತ್ತು. ಇದು ಇಂಡಿಯನ್ ಆ್ಯರೋಸ್ ತಂಡದ ತವರು ಅಂಗಣವಾಗಿದೆ. ಜಿಎಂಸಿ ಅ‌ಥ್ಲೆಟಿಕ್ ಕ್ರೀಡಾಂಗಣವು ಗೋವಾದ ಮೊದಲ ಬಹೂಪಯೋಗಿ ಅಂಗಣವಾಗಿದೆ. 2014ರ ಲೂಸೊಫೋನಿಯಾ ಕ್ರೀಡಾಕೂಟ ಇಲ್ಲಿ ನಡೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.