ADVERTISEMENT

ನಂ.88 ಜೆರ್ಸಿ ನಿಷೇಧಿಸಿದ ಇಟಲಿ ಫುಟ್‌ಬಾಲ್ ಫೆಡರೇಷನ್: ಕಾರಣವೇನು?

ಎಪಿ
Published 28 ಜೂನ್ 2023, 5:10 IST
Last Updated 28 ಜೂನ್ 2023, 5:10 IST
ಚಿತ್ರಕೃಪೆ: @EleteTSC
   ಚಿತ್ರಕೃಪೆ: @EleteTSC

ರೋಮ್: ಆಟಗಾರರು ನಂ.88 ಸಂಖ್ಯೆಯ ಜೆರ್ಸಿಗಳನ್ನು ಧರಿಸುವುದನ್ನು ಇಟಲಿ ಫುಟ್‌ಬಾಲ್‌ ಫೆಡರೇಷನ್‌ ನಿಷೇಧಿಸಿದೆ.

ಯಹೂದಿ ವಿರೋಧಿ ನಿಲುವಿನ ವಿರುದ್ಧ ಇಟಲಿ ಸರ್ಕಾರ ಮತ್ತು ಇಟಲಿ ಫುಟ್‌ಬಾಲ್‌ ಫೆಡರೇಷನ್‌ ಒಮ್ಮತದಿಂದ ಉಪಕ್ರಮವನ್ನು ಕೈಗೊಂಡಿದ್ದು ಅದರ ಭಾಗವಾಗಿ ನಂ.88 ಸಂಖ್ಯೆಯ ಜೆರ್ಸಿಗೆ ನಿಷೇಧ ಹೇರಲಾಗಿದೆ.

ಸರ್ಕಾರ ಮತ್ತು ಫುಟ್‌ಬಾಲ್‌ ಫೆಡರೇಷನ್‌ ಕೈಗೊಂಡಿರುವ ಉಪಕ್ರಮವು ಇಂಟರ್‌ನ್ಯಾಷನಲ್ ಹೋಲೋಕಾಸ್ಟ್ ರಿಮೆಂಬರೆನ್ಸ್ ಅಲಯನ್ಸ್ (ಅಂತರರಾಷ್ಟ್ರೀಯ ಕಗ್ಗೊಲೆ ಸ್ಮರಣಾರ್ಥ ಒಕ್ಕೂಟ)ದ ನೀತಿಗೆ ಅನುಗುಣವಾಗಿದೆ.

ADVERTISEMENT

ವರ್ಣಬೇಧ ನೀತಿಯನ್ನು ನಿರ್ವಹಿಸುವ ರೀತಿಯಲ್ಲಿಯೇ, ಯಹೂದಿ ವಿರೋಧಿ ಘೋಷಣೆಗಳು ಅಥವಾ ಕೃತ್ಯಗಳು ಕಂಡು ಬಂದರೆ ಪಂದ್ಯಗಳನ್ನು ನಿಷೇಧಿಸುವುದಕ್ಕೂ ಈ ಉಪಕ್ರಮ ಅವಕಾಶ ಕಲ್ಪಿಸುತ್ತದೆ.

ಕ್ರೀಡಾಂಗಣಗಳಲ್ಲಿ ನಡೆಯುವ ಅಹಿತಕರ ಘಟನೆಗಳಿಗೆ ಈ ಉಪಕ್ರಮವು ತಕ್ಕ ಹಾಗೂ ಸಮರ್ಥ ಪ್ರತಿಕ್ರಿಯೆಯಾಗಲಿದೆ ಎಂದು ಇಟಲಿ ಆಂತರಿಕ ಸಚಿವ ಮ್ಯಾಟಿಯೊ ಪಿಯಾಂಟೆಡೊಸಿ ಹೇಳಿದ್ದಾರೆ.

ಇದಕ್ಕೆ ಧನಿಗೂಡಿಸಿದ ಫೆಡರೇಷನ್‌ ಅಧ್ಯಕ್ಷ ಗ್ಯಾಬ್ರೀಲೆ ಗ್ರಾವಿನಾ, 'ತಾರತಮ್ಯ ನಿಲುವಿನಿಂದ ಫುಟ್‌ಬಾಲ್‌ ಆಟದ ವಿಶ್ವಾಸಾರ್ಹತೆಗೆ ಹಾನಿಯಾಗುತ್ತಿದೆ. ಅದು ಇಟಲಿ ಸಮಾಜದಲ್ಲಿ ಪ್ರತಿಫಲಿಸುತ್ತಿದೆ' ಎಂದಿದ್ದಾರೆ.

ನಂ.88 ಎಂಬುದು ಜರ್ಮನಿಯ ಸರ್ವಾಧಿಕಾರಿಯಾಗಿದ್ದ ಅಡಾಲ್ಫ್‌ ಹಿಟ್ಲರ್‌ನ ಕೋಡ್ ನಂಬರ್‌ ಆಗಿದೆ.

Lazio ಸ್ಪೋರ್ಟ್ಸ್‌ ಕ್ಲಬ್‌ನ ಜೆರ್ಸಿಯ ಮೇಲೆ 'Hitlerson' ಹಾಗೂ ನಂ.88 ಎಂದು ಬರೆದಿದ್ದ ಅಭಿಮಾನಿಯೊಬ್ಬ ರೋಮನ್‌ ಕ್ಲಬ್‌ ಪಂದ್ಯ ವೀಕ್ಷಿಸಲು ಮಾರ್ಚ್‌ ತಿಂಗಳಿನಲ್ಲಿ ಕ್ರೀಡಾಂಗಣಕ್ಕೆ ಆಗಮಿಸಿದ್ದ. ಅದಾದ ನಂತರ ಆ ನಂಬರಿನ ಜೆರ್ಸಿ ಧರಿಸಿ ಆಗಮಿಸುವವರಿಗೆ ರೋಮನ್‌ ಕ್ಲಬ್‌ ಶಾಶ್ವತ ನಿಷೇಧ ಹೇರಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.