ADVERTISEMENT

ಇತಿಹಾಸ ನಿರ್ಮಿಸಿದ ಜಪಾನ್‌

ಆರಂಭಿಕ ಪಂದ್ಯದಲ್ಲಿ ಕೊಲಂಬಿಯಾಗೆ ಆಘಾತ: ಮಿಂಚಿದ ಯುಯಾ ಒಸಾಕ

ಏಜೆನ್ಸೀಸ್
Published 19 ಜೂನ್ 2018, 20:35 IST
Last Updated 19 ಜೂನ್ 2018, 20:35 IST
ಕೊಲಂಬಿಯಾ ತಂಡದ ಎದುರು ಗೋಲು ದಾಖಲಿಸಿದ ಜಪಾನ್‌ನ ಯುಯಾ ಒಸಾಕೊ (ಮಧ್ಯ) ಸಹ ಆಟಗಾರರ ಜೊತೆ ಸಂಭ್ರಮಿಸಿದರು. -ಎಪಿ/ಪಿಟಿಐ ಚಿತ್ರ
ಕೊಲಂಬಿಯಾ ತಂಡದ ಎದುರು ಗೋಲು ದಾಖಲಿಸಿದ ಜಪಾನ್‌ನ ಯುಯಾ ಒಸಾಕೊ (ಮಧ್ಯ) ಸಹ ಆಟಗಾರರ ಜೊತೆ ಸಂಭ್ರಮಿಸಿದರು. -ಎಪಿ/ಪಿಟಿಐ ಚಿತ್ರ   

ಸರಾನ್ಸ್ಕ್‌: ಜಪಾನ್‌ ತಂಡ ದವರು ಮಂಗಳವಾರ ಸರಾನ್ಸ್ಕ್‌ ಕ್ರೀಡಾಂಗಣದಲ್ಲಿ ಹೊಸ ಭಾಷ್ಯ ಬರೆದರು.

21ನೇ ಫಿಫಾ ವಿಶ್ವಕಪ್ ಫುಟ್‌ಬಾಲ್‌ ಟೂರ್ನಿಯ ಪಂದ್ಯದಲ್ಲಿ ಜಪಾನ್‌ 2–1 ಗೋಲುಗಳಿಂದ ಬಲಿಷ್ಠ ಕೊಲಂಬಿಯಾ ತಂಡಕ್ಕೆ ಆಘಾತ ನೀಡಿತು.

ಇದರೊಂದಿಗೆ ವಿಶ್ವಕಪ್‌ನಲ್ಲಿ ದಕ್ಷಿಣ ಅಮೆರಿಕದ ತಂಡವೊಂದರ ಎದುರು ಗೆದ್ದ ಏಷ್ಯಾದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಜೊತೆಗೆ ‘ಎಚ್‌’ ಗುಂಪಿನ ಪಾಯಿಂಟ್ಸ್‌ ಪಟ್ಟಿಯಲ್ಲಿ ಅಗ್ರಸ್ಥಾನ ತನ್ನದಾಗಿಸಿಕೊಂಡಿತು.

ADVERTISEMENT

2014ರಲ್ಲಿ ಬ್ರೆಜಿಲ್‌ನಲ್ಲಿ ನಡೆದಿದ್ದ ಟೂರ್ನಿಯ ಪಂದ್ಯದಲ್ಲಿ ಕೊಲಂಬಿಯಾ 4–1 ಗೋಲುಗಳಿಂದ ಜಪಾನ್‌ ಎದುರು ಗೆದ್ದಿತ್ತು. ಹಿಂದಿನ ಈ ಸೋಲಿಗೆ ಮುಯ್ಯಿ ತೀರಿಸಿಕೊಳ್ಳುವ ಗುರಿಯೊಂದಿಗೆ ಕಣಕ್ಕಿಳಿದಿದ್ದ ಜಪಾನ್‌ ತಂಡದ ಆಟಗಾರರು ಶುರುವಿನಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾದರು.

ಮೂರನೇ ನಿಮಿಷದಲ್ಲಿ ಕೊಲಂ ಬಿಯಾ ತಂಡದ ಡಿಫೆಂಡರ್‌ ಕಾರ್ಲೊಸ್‌ ಸ್ಯಾಂಚೆಸ್‌, ಜಪಾನ್‌ನ ಆಟಗಾರ ಬಾರಿಸಿದ ಚೆಂಡನ್ನು ಬಲಗೈಯಿಂದ ತಡೆದರು. ಫಿಫಾ ನಿಯಮ ಉಲ್ಲಂಘಿ ಸಿದ್ದರಿಂದ ಸ್ಯಾಂಚೆಸ್‌ಗೆ ಪಂದ್ಯದ ರೆಫರಿ ‘ಕೆಂಪು ಕಾರ್ಡ್‌’ ತೋರಿಸಿ ಅಂಗಳದಿಂದ ಹೊರಗೆ ಕಳುಹಿಸಿದರು. ಹೀಗಾಗಿ ಕೊಲಂಬಿಯಾ ತಂಡ 10 ಮಂದಿಯೊಂದಿಗೆ ಆಡಬೇಕಾದ ಅನಿವಾರ್ಯತೆ ಎದುರಿಸಿತು.

ಆರನೇ ನಿಮಿಷದಲ್ಲಿ ಮಕೊಟಾ ಹಸೆಬೆ ಸಾರಥ್ಯದ ಜಪಾನ್‌ ತಂಡಕ್ಕೆ ಪೆನಾಲ್ಟಿ ಕಾರ್ನರ್‌ ಸಿಕ್ಕಿತು. ಈ ಅವಕಾಶ ದಲ್ಲಿ ಮಿಡ್‌ಫೀಲ್ಡರ್‌ ಶಿಂಜಿ ಕಗಾವಾ ಚೆಂಡನ್ನು ಗುರಿ ತಲುಪಿಸಿ ಕ್ರೀಡಾಂಗಣದಲ್ಲಿ ಸೇರಿದ್ದ ಅಭಿಮಾನಿಗಳ ಚಪ್ಪಾಳೆ ಗಿಟ್ಟಿಸಿದರು.

ನಂತರ ರಾಡಮೆಲ್‌ ಫಾಲ್ಕಾವೊ ನೇತೃತ್ವದ ಕೊಲಂಬಿಯಾ ಮಿಂಚಿನ ಆಟ ಆಡಿತು. 39ನೇ ನಿಮಿಷದಲ್ಲಿ ಮಿಡ್‌ ಫೀಲ್ಡರ್‌ ವುವಾನ್‌ ಕ್ವಿಂಟೆರೊ, ಕಾಲ್ಚಳಕ ತೋರಿದರು. ‘ಫ್ರೀ ಕಿಕ್‌’ ಅವಕಾಶದಲ್ಲಿ ಅವರು ಬಾರಿಸಿದ ಚೆಂಡು, ಕಣ್ಣೆವೆ ಮುಚ್ಚಿ ತೆರೆಯುವುದರೊಳಗೆ ಗುರಿ ಸೇರಿತು. ಹೀಗಾಗಿ ಉಭಯ ತಂಡಗಳು 1–1ರ ಸಮಬಲದೊಂದಿಗೆ ವಿರಾಮಕ್ಕೆ ಹೋದವು.

ಅಕಿರಾ ನಿಶಿನೊ ಗರಡಿಯಲ್ಲಿ ಪಳಗಿರುವ ಜಪಾನ್‌ ತಂಡದವರು ದ್ವಿತೀಯಾರ್ಧದಲ್ಲಿ ಕೊಲಂಬಿಯಾ ತಂಡಕ್ಕೆ ಪ್ರಬಲ ಪೈಪೋಟಿ ನೀಡಿದರು. ಹೀಗಾಗಿ 72ನೇ ನಿಮಿಷದವರೆಗೂ ಸಮಬಲದ ಹೋರಾಟ ಕಂಡುಬಂತು.

73ನೇ ನಿಮಿಷದಲ್ಲಿ ಯುಯಾ ಒಸಾಕ ಗೋಲು ದಾಖಲಿಸಿ ಜಪಾನ್‌ ತಂಡದ ಗೆಲುವಿನ ಕನಸಿಗೆ ಬಲ ತುಂಬಿದರು. ನಂತರ ಫಾಲ್ಕಾವೊ ಬಳಗ ಸಮಬಲ ಸಾಧಿಸಲು ಸಾಕಷ್ಟು ಪ್ರಯತ್ನಿಸಿತು. ಆದರೆ ಎದುರಾಳಿ ತಂಡದ ರಕ್ಷಣಾ ಕೋಟೆ ಭೇದಿಸಿ ಗೋಲು ಗಳಿಸಲು ಕೊಲಂಬಿಯಾ ಆಟಗಾರರಿಗೆ ಆಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.