ADVERTISEMENT

ಜಪಾನ್‌ಗೆ ಅಚ್ಚರಿ ಫಲಿತಾಂಶದ ನಿರೀಕ್ಷೆ

16ರ ಘಟ್ಟದ ಪಂದ್ಯದಲ್ಲಿ ಕ್ರೊವೇಷ್ಯಾ ಎದುರಾಳಿ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2022, 13:21 IST
Last Updated 4 ಡಿಸೆಂಬರ್ 2022, 13:21 IST
ಜಪಾನ್‌ ಆಟಗಾರರು ಅಭ್ಯಾಸ ನಡೆಸಿದರು –ಎಎಫ್‌ಪಿ ಚಿತ್ರ
ಜಪಾನ್‌ ಆಟಗಾರರು ಅಭ್ಯಾಸ ನಡೆಸಿದರು –ಎಎಫ್‌ಪಿ ಚಿತ್ರ   

ದೋಹಾ: ಯೂರೋಪ್‌ನ ಫುಟ್‌ಬಾಲ್‌ ಶಕ್ತಿ ಎನಿಸಿರುವ ಜರ್ಮನಿ ಮತ್ತು ಸ್ಪೇನ್‌ ತಂಡಗಳಿಗೆ ಸೋಲುಣಿಸಿರುವ ಜಪಾನ್‌ ತಂಡ, ವಿಶ್ವಕಪ್‌ ಟೂರ್ನಿಯ ಪ್ರೀ ಕ್ವಾರ್ಟರ್‌ ಫೈನಲ್‌ನಲ್ಲಿ ಸೋಮವಾರ ಕ್ರೊವೇಷ್ಯಾ ಸವಾಲನ್ನು ಎದುರಿಸಲಿದೆ.

ಆಟದ ಬಹುತೇಕ ಅವಧಿಯಲ್ಲೂ ಎದುರಾಳಿಗಳಿಗೆ ಪಂದ್ಯದ ಮೇಲೆ ನಿಯಂತ್ರಣ ಸಾಧಿಸಲು ಅವಕಾಶ ನೀಡಿ, ಏಕಾಏಕಿ ಚೆಂಡಿನೊಂದಿಗೆ ಮುನ್ನುಗ್ಗಿ ಗೋಲು ಗಳಿಸುವ ತಂತ್ರವನ್ನು ಜಪಾನ್‌ ಅನುಸರಿಸುತ್ತಿದೆ. ಸ್ಪೇನ್‌ ಮತ್ತು ಜರ್ಮನಿ ವಿರುದ್ಧ ಇದೇ ತಂತ್ರಗಾರಿಕೆಯಿಂದ ಯಶಸ್ಸು ಗಳಿಸಿದೆ.

ಅಲ್‌ ಜನೂಬ್‌ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯದಲ್ಲಿ ಜಪಾನ್‌ ಕೋಚ್‌ ಹಜಿಮೆ ಮೊರಿಯಸು ಏನಾದರೂ ಹೊಸ ತಂತ್ರದ ಮೊರೆ ಹೋಗುವರೇ ಎಂಬುದನ್ನು ನೋಡಬೇಕು. ನಾಯಕ ಲುಕಾ ಮಾಡ್ರಿಚ್, ಇವಾನ್‌ ಪೆರಿಸಿಚ್‌ ಮತ್ತು ದೆಜಾನ್‌ ಲೊವ್ರೆ ಅವರನ್ನೊಳಗೊಂಡ ಕ್ರೊವೇಷ್ಯಾ ಬಲಿಷ್ಠವಾಗಿದೆ.

ADVERTISEMENT

ಸೆಂಟರ್‌ಬ್ಯಾಕ್‌ ಆಟಗಾರ ಕೊವು ಇತಕುರ ಅವರ ಅನುಪಸ್ಥಿತಿಯಲ್ಲಿ ಜಪಾನ್‌ ಕಣಕ್ಕಿಳಿಯಲಿದೆ. ಎರಡು ಹಳದಿ ಕಾರ್ಡ್‌ಗಳನ್ನು ಪಡೆದಿರುವ ಅವರು ಒಂದು ಪಂದ್ಯದ ಅಮಾನತಿಗೆ ಒಳಗಾಗಿದ್ದಾರೆ. ಅವರ ಬದಲು ಹಿರೊಕಿ ಸಕಾಯ್‌ ಅಥವಾ ತಕೆಹಿರೊ ತೊಮಿಯಸು ಆಡುವ ಸಾಧ್ಯತೆಯಿದೆ.

ವಿಶ್ವಕಪ್‌ ಟೂರ್ನಿಯಲ್ಲಿ ಇದೇ ಮೊದಲ ಬಾರಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿ ಐತಿಹಾಸಿಕ ಸಾಧನೆ ಮಾಡುವ ಅವಕಾಶ ಜಪಾನ್‌ಗೆ ದೊರೆತಿದೆ. ಜಪಾನ್‌ ತಂಡ 2002, 2010 ಮತ್ತು 2018ರ ಟೂರ್ನಿಗಳಲ್ಲಿ 16ರ ಘಟ್ಟದ ತಡೆ ದಾಟುವಲ್ಲಿ ವಿಫಲವಾಗಿತ್ತು.

ಕ್ರೊವೇಷ್ಯಾ ತಂಡ ವಿಶ್ವಕಪ್‌ನ 16ರ ಘಟ್ಟದಲ್ಲಿ ಒಮ್ಮೆಯೂ ಸೋತಿಲ್ಲ. 1998ರ ಟೂರ್ನಿಯಲ್ಲಿ ರೊಮೇನಿಯಾ ವಿರುದ್ಧ 1–0 ಗೋಲುಗಳಿಂದ ಗೆದ್ದಿದ್ದರೆ, ಕಳೆದ ಟೂರ್ನಿಯಲ್ಲಿ ಪೆನಾಲ್ಟಿ ಶೂಟೌಟ್‌ನಲ್ಲಿ ಡೆನ್ಮಾರ್ಕ್‌ ತಂಡವನ್ನು ಮಣಿಸಿತ್ತು.

ಮುಖಾಮುಖಿ: ವಿಶ್ವಕಪ್‌ ಟೂರ್ನಿಯಲ್ಲಿ ಎರಡು ಪಂದ್ಯಗಳು ಸೇರಿದಂತೆ ಉಭಯ ತಂಡಗಳು 1997ರ ಬಳಿಕ ಇದುವರೆಗೆ ಮೂರು ಸಲ ಪರಸ್ಪರ ಪೈಪೋಟಿ ನಡೆಸಿವೆ.

ಮೊದಲ ಬಾರಿ ಸ್ನೇಹಪರ ಪಂದ್ಯದಲ್ಲಿ ಎದುರಾಗಿದ್ದಾಗ ಜಪಾನ್‌ 4–3 ಗೋಲುಗಳಿಂದ ಗೆದ್ದಿತ್ತು. ಆದರೆ 1998ರ ವಿಶ್ವಕಪ್‌ ಟೂರ್ನಿಯ ಲೀಗ್‌ ಹಂತದಲ್ಲಿ ಕ್ರೊವೇಷ್ಯಾ 1–0 ಗೋಲಿನಿಂದ ಜಯಿಸಿತ್ತು. 2006ರ ಟೂರ್ನಿಯ ಗುಂಪು ಹಂತದ ಪಂದ್ಯ ಗೋಲುರಹಿತ ಡ್ರಾದಲ್ಲಿ ಕೊನೆಗೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.