ADVERTISEMENT

ಐಎಸ್‌ಎಲ್‌ | ಜಾವಿ ಗೋಲು: ಬಿಎಫ್‌ಸಿಗೆ ಜಯ

ಆರನೇ ಸ್ಥಾನಕ್ಕೇರಿದ ಚೆಟ್ರಿ ಪಡೆ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2024, 4:21 IST
Last Updated 3 ಮಾರ್ಚ್ 2024, 4:21 IST
   

ಬೆಂಗಳೂರು: ಪಂದ್ಯ ಮುಕ್ತಾಯಕ್ಕೆ ಕೆಲವೇ ಕ್ಷಣಗಳಿದ್ದಾಗ ಜಾವಿ ಹರ್ನಾಂಡಿಸ್‌ ಗಳಿಸಿದ ಗೋಲಿನಿಂದಾಗಿ ಬೆಂಗಳೂರು ಎಫ್‌ಸಿ ತಂಡ ಶ್ರೀಕಂಠೀರವ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಐಎಸ್‌ಎಲ್‌ ಪಂದ್ಯದಲ್ಲಿ ಕೇರಳ ಬ್ಲಾಸ್ಟರ್ಸ್‌ ತಂಡದ ಮೇಲೆ 1–0 ಗೋಲಿನ ಗೆಲುವು ಪಡೆಯಿತು.

ಗೆಲುವಿನಿಂದ ಅಮೂಲ್ಯ ಮೂರು ಪಾಯಿಂಟ್ಸ್ ಪಡೆದ ಜೆರಾಲ್ಡ್‌ ಝಾರ್ಗೊಝಾ ತರಬೇತಿಯ ಬ್ಲೂಸ್‌ ತಂಡ 18 ಪಂದ್ಯಗಳಿಂದ 21 ಪಾಯಿಂಟ್ಸ್ ಸಂಗ್ರಹಿಸಿ ಆರನೇ ಸ್ಥಾನಕ್ಕೆ ಜಿಗಿಯಿತು.

ಬೆಂಗಳೂರು ತಂಡ ಈ ಪಂದ್ಯಕ್ಕೆ ಅಲೆಕ್ಸ್ ಜೊವಾನೊವಿಕ್ ಮತ್ತು ಸುರೇಶ್ ವಾಂಗ್ಜಾಮ್ ಅವರನ್ನು ಮರಳಿ ಸೇರಿಸಿಕೊಂಡಿತು. ಕೇರಳ ಪರ ದೈಸುಕೆ ಸಕೈ ಮತ್ತು ದಿಮಿಟ್ರಿಯೋಸ್‌ ದೈಮಾಂತಕೊಸ್ ಮುಂಚೂಣಿಯಲ್ಲಿ ಕಾಣಿಸಿಕೊಂಡರು.

ADVERTISEMENT

ಎರಡೂ ತಂಡಗಳು ನಿಯಂತ್ರಣ ಸಾಧಿಸಲು ಆರಂಭದಿಂದಲೇ ಪೈಪೋಟಿಗಿಳಿದವು. ಸ್ಪೇನ್‌ನ ಜಾವಿ ಪಾಸ್‌ನಲ್ಲಿ ಸುನಿಲ್ ಚೆಟ್ರಿ ಯತ್ನವನ್ನು ಬ್ಲಾಸ್ಟರ್ಸ್ ಗೋಲಿನ ಬಳಿ ಕರಣಜಿತ್‌ ಸಿಂಗ್ ತಡೆದರು. ಮತ್ತೊಂದು ಅವಕಾಶದಲ್ಲಿ ವಾಂಗ್ಜಾಮ್‌ ನೀಡಿದ ಕ್ರಾಸ್‌ನಲ್ಲಿ ಚೆಟ್ರಿ ಅವರ ‘ಹೆಡ್ಡರ್‌’ ಗೋಲಿನ ಕೆಲವೇ ಇಂಚು ಮೇಲಿಂದ ಹೊರಹೋಯಿತು.

ವಿರಾಮದ ನಂತರವೂ ಬಿಎಫ್‌ಸಿ ತಂಡ ಕೆಲವು ಯತ್ನಗಳಲ್ಲಿ ಗೋಲು ಗಳಿಸಲು ವಿಫವಾಯಿತು. ವಾಂಗ್ಜಾಮ್‌ ಅವರ ಕ್ರಾಸ್‌ನಲ್ಲಿ ಜಾವಿ ಅವರ ಗೋಲಿನ ಪ್ರಯತ್ನವನ್ನು ಮಾಂಟೆನಿಗ್ರೊದ ಸೆಂಟರ್‌ ಹಾಫ್‌ ಆಟಗಾರ ಮಿಲೊಸ್‌ ಡ್ರಿನ್ಸಿಕ್‌ ವಿಫಲಗೊಳಿಸಿದರು.

ಬ್ಲಾಸ್ಟರ್ಸ್ ತಂಡಕ್ಕೆ, ಪಂದ್ಯ ಮುಕ್ತಾಯಕ್ಕೆ ಕೆಲವು ನಿಮಿಷ ಮೊದಲು ದೊರೆತ ಉತ್ತಮ ಅವಕಾಶದಲ್ಲಿ ಸಬ್‌ಸ್ಟಿಟ್ಯೂಟ್‌ ರಾಹುಲ್ ಕೆ.ಪಿ. ಕ್ರಾಸ್‌ ಮೂಲಕ ಗೋಲು ಗಳಿಸಲು ಯತ್ನಿಸಿದರೂ, ಗುರುಪ್ರೀತ್‌ ಅದನ್ನು ಆಚೆ ದೂಡಿದರು.

ಆದರೆ 89ನೇ ನಿಮಿಷ, ಯುವ ಆಟಗಾರ ಶಿವಾಲ್ಡೊ ಅವರ ಕ್ರಾಸ್‌ನಲ್ಲಿ ಗೋಲಿನ ಬಳಿಯೇ ಕಾದಿದ್ದ ಜಾವಿ, ಮೊದಲ ಯತ್ನದಲ್ಲೇ ಗುರಿತಲುಪಿಸಿ, ಕ್ರೀಡಾಂಗಣದಲ್ಲಿದ್ದ ಸಾವಿರಾರು ಪ್ರೇಕ್ಷಕರಲ್ಲಿ ರೋಮಾಂಚನ ಮೂಡಿಸಿದರು.

ಬ್ಲೂಸ್ ತಂಡ ತನ್ನ ಮುಂದಿನ ಪಂದ್ಯವನ್ನು ಮಾರ್ಚ್‌ 14ರಂದು ಗೋವಾ ಎಫ್‌ಸಿ ವಿರುದ್ಧ ಗೋವಾದಲ್ಲಿ ಆಡಲಿದೆ.

ಪ್ಲೇ ಆಫ್‌ಗೆ ಮುಂಬೈ

ನವದೆಹಲಿ (ಪಿಟಿಐ): ಮುಂಬೈ ಸಿಟಿ ತಂಡ 3–2 ಗೋಲುಗಳಿಂದ ಪಂಜಾಬ್‌ ಎಫ್‌ಸಿ ತಂಡದ ಮೇಲೆ ಪ್ರಯಾಸದ ಜಯ ಪಡೆದು ಶನಿವಾರ ಐಎಸ್‌ಎಲ್‌ ಪ್ಲೇ ಆಫ್‌ಗೆ ಅರ್ಹತೆ ಪಡೆಯಿತು.

ಜವಾಹರಲಾಲ್‌ ನೆಹರೂ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯವನ್ನು ಗೆಲ್ಲುವ ಮೂಲಕ ಮುಂಬೈ ಸಿಟಿ ತಂಡ 35 ಪಾಯಿಂಟ್ಸ್‌ ಸಂಗ್ರಹಿಸಿತು.  ಅಗ್ರಸ್ಥಾನದಲ್ಲಿರುವ ಒಡಿಶಾ ಎಫ್‌ಸಿ ಇಷ್ಟೇ ಪಾಯಿಂಟ್ಸ್‌ ಕಲೆಹಾಕಿದ್ದರೂ ಗೋಲು ಸರಾಸರಿಯಲ್ಲಿ (+15) ಅಗ್ರಸ್ಥಾನ ಕಾಪಾಡಿಕೊಂಡಿತು.

ಮದಿಹ್‌ ತಲಾಲ್ (37ನೇ ನಿಮಿಷ), ವಿಲ್ಮರ್‌ ಜೋರ್ಡಾನ್ ಗಿಲ್ (39ನೇ ನಿಮಿಷ) ಅವರು ವಿರಾಮದ ವೇಳೆಗೆ ಪಂಜಾಬ್‌ಗೆ 2–1 ಮುನ್ನಡೆ ಒದಗಿಸಿದ್ದರು. ಲಾಲಿಯಾನ್‌ಜುವಾಲಾ ಚಾಂಗ್ಟೆ 16ನೇ ನಿಮಿಷ ಮುಂಬೈ ಪರ ಮೊದಲ ಗೋಲು ಗಳಿಸಿದ್ದರು.

ಆದರೆ ಉತ್ತರಾರ್ಧದಲ್ಲಿ ಇಕರ್ ಗುರೊಟ್‌ಕ್ಸೆನಾ (53 ಮತ್ತು 64ನೇ ನಿಮಿಷ) ಗಳಿಸಿದ ಎರಡು ಗೋಲುಗಳ ಮೂಲಕ ಮುಂಬೈ ತಂಡ ಋತುವಿನ 10ನೇ ಜಯ ದಾಖಲಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.