ADVERTISEMENT

ಸೆನೆಗಲ್‌ ತಡೆ ದಾಟುವುದೇ ಇಂಗ್ಲೆಂಡ್‌

ಲಯ ಕಂಡುಕೊಳ್ಳುವ ವಿಶ್ವಾಸದಲ್ಲಿ ಹ್ಯಾರಿ ಕೇನ್‌

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2022, 14:22 IST
Last Updated 3 ಡಿಸೆಂಬರ್ 2022, 14:22 IST
ಇಂಗ್ಲೆಂಡ್‌ ತಂಡದ ಆಟಗಾರರು ಅಭ್ಯಾಸದಲ್ಲಿ ಪಾಲ್ಗೊಂಡರು –ಎಎಫ್‌ಪಿ ಚಿತ್ರ
ಇಂಗ್ಲೆಂಡ್‌ ತಂಡದ ಆಟಗಾರರು ಅಭ್ಯಾಸದಲ್ಲಿ ಪಾಲ್ಗೊಂಡರು –ಎಎಫ್‌ಪಿ ಚಿತ್ರ   

ದೋಹಾ (ರಾಯಿಟರ್ಸ್‌): ಸ್ಟಾರ್ ಆಟಗಾರ ಹ್ಯಾರಿ ಕೇನ್‌ ಅವರು ಫಾರ್ಮ್‌ ಕಂಡುಕೊಳ್ಳುವರು ಎಂಬ ವಿಶ್ವಾಸದಲ್ಲಿರುವ ಇಂಗ್ಲೆಂಡ್‌ ತಂಡ, ವಿಶ್ವಕಪ್‌ ಟೂರ್ನಿಯ ಪ್ರೀ ಕ್ವಾರ್ಟರ್‌ ಫೈನಲ್‌ನಲ್ಲಿ ಸೆನೆಗಲ್‌ ತಂಡದ ಸವಾಲು ಎದುರಿಸಲಿದೆ.

ಅಲ್‌ ಬೈತ್‌ ಕ್ರೀಡಾಂಗಣದಲ್ಲಿ ಭಾನುವಾರ ನಡೆಯಲಿರುವ ಪಂದ್ಯದಲ್ಲಿ ಇಂಗ್ಲೆಂಡ್‌ಗೆ ಗೆಲುವು ಪಡೆಯುವುದು ಸುಲಭವಲ್ಲ. ಏಕೆಂದರೆ ಈ ಹಿಂದೆ ಹಲವು ಅಚ್ಚರಿಯ ಫಲಿತಾಂಶಗಳನ್ನು ನೀಡಿರುವ ಸೆನೆಗಲ್‌, ದಿಟ್ಟ ಆಟವಾಡುವ ತಾಕತ್ತು ಹೊಂದಿದೆ.

ಇಂಗ್ಲೆಂಡ್‌ ತಂಡ ಆಫ್ರಿಕಾ ಖಂಡದ ದೇಶಗಳ ವಿರುದ್ಧ ಆಡಿರುವ 21 ಪಂದ್ಯಗಳಲ್ಲಿ ಒಮ್ಮೆಯೂ ಸೋತಿಲ್ಲ. ಆದರೆ ಸೆನೆಗಲ್‌ ವಿರುದ್ಧ ಇದೇ ಮೊದಲ ಬಾರಿ ಆಡಲಿರುವುದರಿಂದ ಪಂದ್ಯ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.

ADVERTISEMENT

ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಇಂಗ್ಲೆಂಡ್‌ ಪರ 51 ಗೋಲುಗಳನ್ನು ಗಳಿಸಿರುವ ಕೇನ್‌ ಅವರು ಲೀಗ್‌ ಹಂತದಲ್ಲಿ ಕಾಲ್ಚಳಕ ತೋರುವಲ್ಲಿ ವಿಫಲರಾಗಿದ್ದರು. ಈ ಪಂದ್ಯದಲ್ಲಿ ಗೋಲು ಗಳಿಸಬೇಕು ಎಂಬ ಒತ್ತಡ ಅವರ ಮೇಲಿದೆ.

ಕೇನ್‌ ಚೆಂಡನ್ನು ಗುರಿ ಸೇರಿಸಲು ವಿಫಲರಾಗಿದ್ದರೂ, ಇತರ ಆಟಗಾರರು ತಂಡಕ್ಕೆ ಅಗತ್ಯವಿದ್ದಾಗ ಗೋಲು ಗಳಿಸಿರುವುದು ಕೋಚ್‌ ಗ್ಯಾರೆತ್‌ ಸೌತ್‌ಗೇಟ್‌ ಅವರಿಗೆ ಸಮಾಧಾನ ಉಂಟುಮಾಡಿದೆ. ಮಾರ್ಕಸ್‌ ‍ರ‍್ಯಾಶ್‌ಫೋರ್ಡ್‌, ಫಿಲ್‌ ಫಾಡೆನ್‌, ರಹೀಂ ಸ್ಟರ್ಲಿಂಗ್‌ ಮತ್ತು ಬುಕಾಯೊ ಸಾಕಾ ಅವರು ಗೋಲು ಗಳಿಸಿ ಈಗಾಗಲೇ ತಮ್ಮ ಸಾಮರ್ಥ್ಯ ತೋರಿದ್ದಾರೆ.

‘ಸೆನೆಗಲ್‌ ವಿರುದ್ಧದ ಪಂದ್ಯ ಕಠಿಣ ಎನಿಸಲಿದೆ. ಯೂರೋಪಿನ ಪ್ರಮುಖ ಕ್ಲಬ್‌ಗಳನ್ನು ಪ್ರತಿನಿಧಿಸುವ ಆಟಗಾರರು ಆ ತಂಡದಲ್ಲಿದ್ದಾರೆ’ ಎಂದು ಸೌತ್‌ಗೇಟ್‌ ಹೇಳಿದ್ದಾರೆ.

ಸ್ಟಾರ್‌ ಆಟಗಾರ ಸ್ಯಾಡಿಯೊ ಮಾನೆ ಅವರ ಅನುಪಸ್ಥಿತಿಯಲ್ಲಿ ಸೆನೆಗಲ್‌ ತಂಡ, ನಾಯಕ ಕಲೀದು ಕೊಲಿಬಾಲಿ ಮತ್ತು ವಿಂಗರ್‌ ಇಸ್ಮಾಯಿಲಾ ಸರ್‌ ಅವರನ್ನು ನೆಚ್ಚಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.