ADVERTISEMENT

ಬ್ಲಾಸ್ಟರ್ಸ್ ನಿರ್ದೇಶಕರಾಗಿ ಕರೊಲಿಸ್ ನೇಮಕ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2020, 20:30 IST
Last Updated 16 ಮಾರ್ಚ್ 2020, 20:30 IST
ಕರೊಲಿಸ್ ಸ್ಕಿನ್ಕಿಸ್
ಕರೊಲಿಸ್ ಸ್ಕಿನ್ಕಿಸ್   

ಬೆಂಗಳೂರು: ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ಫುಟ್‌ಬಾಲ್ ಟೂರ್ನಿಯಲ್ಲಿ ಭಾಗವಹಿಸುವ ತಂಡವಾದ ಕೇರಳ ಬ್ಲಾಸ್ಟರ್ಸ್‌ ಎಫ್‌ಸಿಯ ನಿರ್ದೇಶಕರಾಗಿ ಕರೊಲಿಸ್ ಸ್ಕಿನ್ಕಿಸ್‌ ಅವರನ್ನು ನೇಮಕ ಮಾಡಲಾಗಿದೆ. ಈ ವಿಷಯವನ್ನು ಐಎಸ್‌ಎಲ್‌ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.

ಲಿಥುವೇನಿಯಾದ ಪ್ರಥಮ ಡಿವಿಷನ್‌ನಲ್ಲಿ ಆಡುವ ಎಫ್‌ಕೆ ಸುಡುವಾ ತಂಡಕ್ಕೆ ಒಂದೂವರೆ ದಶಕದ ಕಾಲ ನಿರ್ದೇಶಕರಾಗಿದ್ದ ಕರೊಲಿಸ್, ಅಪಾರ ಅನುಭವ ಹೊಂದಿದ್ದಾರೆ. ತಂಡದ ಆಯ್ಕೆ, ಆಂತರಿಕ ನಾಯಕತ್ವ ನಿರ್ವಹಣೆ ಮುಂತಾದ ವಿಷಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಅವರು ತಂಡವು 2017ರಿಂದ ಸತತ ಮೂರು ವರ್ಷ ಲಿಥುವೇನಿಯಾ ಲೀಗ್‌ನಲ್ಲಿ ಅಗ್ರ ಸ್ಥಾನ ಪಡೆದು ಯೂಫಾ ಚಾಂಪಿಯನ್ಸ್ ಲೀಗ್‌ಗೆ ಅರ್ಹತೆ ಗಳಿಸುವಲ್ಲಿ ಮುಖ್ಯ ಪಾತ್ರ ವಹಿಸಿದ್ದರು.

‘ಕೇರಳಕ್ಕೆ ಬರಲು ಅವಕಾಶ ಸಿಕ್ಕಿರುವುದರಿಂದ ರೋಮಾಂಚಗೊಂಡಿದ್ದೇನೆ. ನನ್ನನ್ನು ಈ ಸ್ಥಾನಕ್ಕೆ ಪರಿಗಣಿಸಿದ್ದಕ್ಕೆ ತಂಡಕ್ಕೆ ಅಭಾರಿಯಾಗಿದ್ದೇನೆ. ಇಲ್ಲಿನವರ ಫುಟ್‌ಬಾಲ್ ಪ್ರೀತಿ ಕಂಡು ದಂಗಾಗಿದ್ದೇನೆ. ಒಟ್ಟಾಗಿ ತಂಡವನ್ನು ಮುನ್ನಡೆಸುವ ಜವಾಬ್ದಾರಿ ಆಡಳಿತದ ಮೇಲೂ ಬೆಂಬಲಿಗರ ಮೇಲೂ ಇದೆ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

‘ನಮ್ಮದು ಜಯಕ್ಕಾಗಿ ತುಡಿಯುವ ತಂಡ. ಕ್ರೀಡಾಂಗಣದಲ್ಲಿ ಸ್ಥಿರ ಪ್ರದರ್ಶನ ತೋರುವ ಉತ್ಸಾಹದಲ್ಲಿರುವ ತಂಡಕ್ಕೆ ಕರೊಲಿಸ್ ಅವರ ಅನುಭವ ನೆರವಾಗಲಿದೆ ಎಂಬ ವಿಶ್ವಾಸವಿದೆ’ ಎಂದು ತಂಡದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೀರೇನ್ ಡಿ’ಸಿಲ್ವಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.