ಬೆಂಗಳೂರು: ಮಿರ್ಜಾಲೊಲ್ ಕಾಸಿಮೊವ್ ಅವರು 88ನೇ ನಿಮಿಷ ಗಳಿಸಿದ ಅಮೋಘ ಗೋಲಿನಿಂದ ಮೊಹಮ್ಮಡನ್ ಸ್ಪೋರ್ಟಿಂಗ್ ಕ್ಲಬ್ ತಂಡ ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್ ಪಂದ್ಯದಲ್ಲಿ ಬೆಂಗಳೂರು ಎಫ್‌ಸಿ ತಂಡವನ್ನು ಶನಿವಾರ 1–0 ಯಿಂದ ಸೋಲಿಸಿತು.
ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಆತಿಥೇಯ ತಂಡವೇ ಹೆಚ್ಚುಹೊತ್ತು (ಶೇ 65.8) ಚೆಂಡನ್ನು ನಿಯಂತ್ರಣದಲ್ಲಿರಿಸಿಕೊಂಡಿತ್ತು. ಆದರೆ ಗೋಲ್‌ಕೀಪರ್ ಪದಮ್ ಚೆಟ್ರಿ ನೇತೃತ್ವದ ಮೊಹಮ್ಮಡನ್ಸ್ ತಂಡ, ‘ಬ್ಲೂಸ್’ ತಂಡದ ಗೋಲು ಯತ್ನಗಳನ್ನೆಲ್ಲಾ ಯಶಸ್ವಿಯಾಗಿ ತಡೆಯಿತು.
ಇದು ಬೆಂಗಳೂರು ತಂಡಕ್ಕೆ ಸತತ ಎರಡನೇ ಹಾಗೂ ಒಟ್ಟಾರೆ 15 ಪಂದ್ಯಗಳಲ್ಲಿ ನಾಲ್ಕನೇ ಸೋಲು. ಅದು 27 ಪಾಯಿಂಟ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿ ಮುಂದುವರಿದಿದೆ. ಮೊಹಮ್ಮಡನ್ಸ್ ತಂಡ 10 ಪಾಯಿಂಟ್‌ಗಳೊಂದಿಗೆ 12ನೇ ಸ್ಥಾನದಲ್ಲಿದೆ.
ಬಿಎಫ್‌ಸಿ ತಂಡಕ್ಕೆ ಆರಂಭದಲ್ಲೇ ಅವಕಾಶಗಳು ದೊರೆತವು. ಮೂರನೇ ನಿಮಿಷವೇ ರಾಹುಲ್ ಭೆಕೆ ಅವರ ಹೆಡ್ ಮಾಡಿ ಕಳುಹಿಸಿದ ಚೆಂಡನ್ನು ಪಡೆದ ಆಲ್ಬರ್ಟೊ ನೊಗುಯೆರಾ ಬಾಕ್ಸ್‌ನ ಮಧ್ಯದಿಂದ ಗೋಲಿನತ್ತ ಒದ್ದರೂ ಅದನ್ನು ರಕ್ಷಣೆ ಆಟಗಾರರು ತಡೆದರು. 38ನೇ ನಿಮಿಷ ಕಾರ್ನರ್‌ನಿಂದ ನೊಗುಯೆರಾ ಅವರಿಂದ ಬಂದ ಚೆಂಡನ್ನು ಆಯಕಟ್ಟಿನ ಜಾಗದಲ್ಲಿದ್ದ ಚಿಂಗ್ಲಸೇನಾ ಗೋಲಿನತ್ತ ಹೆಡ್ ಮಾಡಿದರೂ ಅದು ಬದಿಯಿಂದ ಆಚೆಹೋಯಿತು.
ವಿರಾಮದ ನಂತರ ಮೊಹಮ್ಮಡನ್ಸ್‌ಗೆ ಅವಕಾಶಗಳು ದೊರೆತವು. 49ನೇ ನಿಮಿಷ ಅಲೆಕ್ಸಿಸ್ ಗೋಮೆಝ್ ಪ್ರಬಲವಾಗಿ ಒದ್ದ ಚೆಂಡು ಗೋಲುಗಂಬಕ್ಕೆ ಬಡಿಯಿತು. 56ನೇ ನಿಮಿಷ ಜೊಡಿಂಗ್ಲಿಯಾನ ರಾಲ್ಟೆ ಯತ್ನವನ್ನು ಗುರುಪ್ರೀತ್ ಸಂಧು ಸಕಾಲಕ್ಕೆ ತಡೆದರು. ಬೆಂಗಳೂರು ಎಫ್‌ಸಿ ನಂತರ ಕೆಲವು ಅವಕಾಶ ಪಡೆದರೂ ಅವು ವಿಫಲವಾದವು.
ಪಂದ್ಯ ಮುಕ್ತಾಯಕ್ಕೆ ಎರಡು ನಿಮಿಷಗಳಿರುವಾಗ ಕಾಸಿಮೊವ್, ಬಾಕ್ಸ್‌ನ ಅಂಚಿ ನಿಂದ ಫ್ರಾಂಕಾ ಅವರು ಕಳಿಸಿದ ಫ್ರೀಕಿಕ್‌ನಲ್ಲಿ ಚೆಂಡನ್ನು ಕ್ಷಣಾರ್ಧದಲ್ಲಿ ಗುರಿತಲುಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.