ADVERTISEMENT

ಐಎಸ್‌ಎಲ್‌ ಫುಟ್‌ಬಾಲ್‌: ಬಿಎಫ್‌ಸಿಗೆ ಒಲಿಯದ ಜಯ

ದ್ವಿತೀಯಾರ್ಧದಲ್ಲಿ ಗೋಲು ಗಳಿಸಿದ ಕೇರಳ ಬ್ಲಾಸ್ಟರ್ಸ್‌ ತಂಡದ ಲಾಲ್‌ತತಂಗ, ರಾಹುಲ್

ಪಿಟಿಐ
Published 20 ಜನವರಿ 2021, 16:45 IST
Last Updated 20 ಜನವರಿ 2021, 16:45 IST
ಮೊದಲ ಗೋಲಿನ ಸಂಭ್ರಮದಲ್ಲಿ ಬಿಎಫ್‌ಸಿ ಆಟಗಾರರು –ಐಎಸ್‌ಎಲ್‌ ಮೀಡಿಯಾ ಚಿತ್ರ
ಮೊದಲ ಗೋಲಿನ ಸಂಭ್ರಮದಲ್ಲಿ ಬಿಎಫ್‌ಸಿ ಆಟಗಾರರು –ಐಎಸ್‌ಎಲ್‌ ಮೀಡಿಯಾ ಚಿತ್ರ   

ಬ್ಯಾಂಬೊಲಿಮ್: ಜಯದ ಸಿಹಿ ಸವಿಯುವ ಬೆಂಗಳೂರು ಫುಟ್‌ಬಾಲ್ ಕ್ಲಬ್ (ಬಿಎಫ್‌ಸಿ) ಕನಸು ಮತ್ತೆ ಭಗ್ನವಾಯಿತು. ಕೇರಳ ಬ್ಲಾಸ್ಟರ್ಸ್ ವಿರುದ್ಧ ಬುಧವಾರ ರಾತ್ರಿ ಇಲ್ಲಿನ ಜಿಎಂಸಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ ಮೊದಲಾರ್ಧದಲ್ಲಿ ಮುನ್ನಡೆ ಸಾಧಿಸಿದರೂ ದ್ವಿತೀಯಾರ್ಧದಲ್ಲಿ ಎರಡು ಗೋಲು ಬಿಟ್ಟುಕೊಟ್ಟ ಬಿಎಫ್‌ಸಿ ಇಂಡಿಯನ್‌ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯಲ್ಲಿ ಮತ್ತೊಮ್ಮೆ ನಿರಾಸೆ ಅನುಭವಿಸಿತು. ಕೇರಳ 2–1ರ ಜಯ ಸಾಧಿಸಿತು. ಈ ಮೂಲಕ ಸತತ ಆರನೇ ಪಂದ್ಯದಲ್ಲೂ ಬಿಎಫ್‌ಸಿಗೆ ಜಯ ಮರೀಚಿಕೆಯಾಯಿತು.

ದಕ್ಷಿಣದ ಡರ್ಬಿಯಾಗಿದ್ದ ಪಂದ್ಯದ ಆರಂಭದಿಂದ ಕೊನೆಯ ವರೆಗೂ ರೋಚಕ ಹೋರಾಟ ಕಂಡುಬಂತು. ಮೊದಲನೇ ನಿಮಿಷದಲ್ಲೇ ಬಿಎಫ್‌ಸಿ ಆಕ್ರಮಣಕಾರಿ ಆಟಕ್ಕೆ ಮುಂದಾಯಿತು. ಚೆಂಡಿನ ಮೇಲೆ ನಿಯಂತ್ರಣ ಸಾಧಿಸಿದ ಎರಿಕ್ ಪಾರ್ಟಲು ಮುನ್ನುಗ್ಗಿದರೂ ಗೋಲು ದಾಖಲಿಸಲು ಆಗಲಿಲ್ಲ. ಕೇರಳ ಬ್ಲಾಸ್ಟರ್ಸ್ ಕೂಡ ಪ್ರಬಲ ಪೈಪೋಟಿಗಿಳಿಯಿತು. ಸಂಘಟಿತ ಆಟದ ಮೂಲಕ ಚೆಂಡನ್ನು ನಿರಾಯಾಸವಾಗಿ ಪಾಸ್ ಮಾಡಿ ಬೆಂಗಳೂರು ಆಟಗಾರರನ್ನು ಕಾಡಿತು. 13ನೇ ನಿಮಿಷದಲ್ಲಿ ಬಿಎಫ್‌ಸಿಯ ಸುರೇಶ್ ವಾಂಗ್ಜಂ ಉತ್ತಮ ದಾಳಿ ನಡೆಸಿದರು. ಆದರೆ ಅವರು ಒದ್ದ ಚೆಂಡು ಗೋಲುಪೆಟ್ಟಿಗೆಯಿಂದ ಹೊರಚಿಮ್ಮಿತು. 18ನೇ ನಿಮಿಷದಲ್ಲಿ ಕೇರಳ ತಂಡದ ಗ್ಯಾರಿ ಹೂಪರ್ ಅವರಿಗೂ ಇದೇ ರೀತಿ ನಿರಾಸೆ ಕಾಡಿತು.

ಆದರೆ 24ನೇ ನಿಮಿಷದಲ್ಲಿ ಕ್ಲೀಟನ್ ಸಿಲ್ವಾ ಮ್ಯಾಜಿಕ್ ಮಾಡಿದರು. ಬಲಭಾಗದ ಮೂಲೆಯಿಂದ ಬಂದ ‘ಥ್ರೋ ಇನ್‌’ ನೇರವಾಗಿ ಕ್ಲೀಟನ್ ಬಳಿ ಸೇರಿತು. ಅವರು ಗಾಳಿಯಲ್ಲಿ ತೇಲಿ ಮೋಹಕವಾಗಿ ಚೆಂಡನ್ನು ಗೋಲುಪೆಟ್ಟಿಗೆಯ ಮೂಲೆಗೆ ಅಟ್ಟಿದರು. ಕೀಪರ್‌ ಜಿಗಿದು ಹಿಡಿಯಲು ಪ್ರಯತ್ನಿಸಿದರೂ ಕ್ಲೀಟ‌ನ್ ಅವರ ನಿಖರ ದಾಳಿ ಗುರಿ ತಪ್ಪಲಿಲ್ಲ. ಮುನ್ನಡೆಯ ನಂತರ ಬೆಂಗಳೂರು ತಂಡ ಎದುರಾಳಿ ಪಾಳಯದ ಡಿಫೆಂಡರ್‌ಗಳಿಗೆ ತಲೆನೋವು ಉಂಟುಮಾಡಿದರು. ಮೊದಲಾರ್ಧದ ಕೊನೆಯಲ್ಲಿ ಗೋಲು ಗಳಿಸಲು ಬಿಎಫ್‌ಸಿಯ ನಾಯಕ ಸುನಿಲ್ ಚೆಟ್ರಿಗೆ ಉತ್ತಮ ಅವಕಾಶ ಒದಗಿತ್ತು. ಆದರೆ ಕೇರಳದ ಆಲ್ಬಿನೊ ಗೊಮೆಜ್‌ ಸಮಯೋಚಿತ ಆಟದ ಮೂಲಕ ಚೆಂಡನ್ನು ಹೊರಗಟ್ಟಿದರು.

ADVERTISEMENT

ದ್ವಿತೀಯಾರ್ಧದಲ್ಲಿ ಪಂದ್ಯ ಇನ್ನಷ್ಟು ರೋಚಕವಾಯಿತು. ಉಭಯ ತಂಡಗಳು ‍ಆಕ್ರಮಣವನ್ನು ಹೆಚ್ಚಿಸಿದವು. ಮಿಡ್‌ಫೀಲ್ಡ್ ವಿಭಾಗದಲ್ಲೂ ದಾಳಿ ಮತ್ತು ಪ್ರತಿದಾಳಿ ಜೋರಾದ ಕಾರಣ ಅಂಗಣದಲ್ಲಿ ಕ್ಷಣಕ್ಷಣವೂ ಮಿಂಚಿನ ಸಂಚಾರವಾಯಿತು. 73ನೇ ನಿಮಿಷದಲ್ಲಿ ಕೇರಳ ಬ್ಲಾಸ್ಟರ್ಸ್ ತಿರುಗೇಟು ನೀಡಿತು. ಬಲಭಾಗದಿಂದ ಬಂದ ಕ್ರಾಸ್‌ನಲ್ಲಿ ಚೆಂಡನ್ನು ನಿಯಂತ್ರಿಸಿದ ಗ್ಯಾರಿ ಹೂಪರ್ ಜೋರಾಗಿ ಗೋಲುಪೆಟ್ಟಿಗೆಯತ್ತ ಒದ್ದರು. ಚೆಂಡು ಗೋಲ್‌ಕೀಪರ್ ಗುರುಪ್ರೀತ್ ಸಿಂಗ್ ಸಂಧು ಮುಖಕ್ಕೆ ಬಡಿದು ಚಿಮ್ಮಿತು. ಸಂಧು ಗಾಯಗೊಂಡು ನೆಲಕ್ಕೆ ಬಿದ್ದರು. ಈ ಸಂದರ್ಭದಲ್ಲಿ ಲಾಲ್‌ತತಂಗ ಕ್ವಾಲ್ರಿಂಗ್ ಚೆಂಡನ್ನು ಗುರಿ ಮುಟ್ಟಿಸಿದರು.

90ನೇ ನಿಮಿಷದಲ್ಲಿ ಗ್ಯಾರಿ ಹೂಪರ್ ನೀಡಿದ ಪಾಸ್‌ನಲ್ಲಿ ಏಕಾಂಗಿಯಾಗಿ ಚೆಂಡನ್ನು ಡ್ರಿಬಲ್ ಮಾಡುತ್ತ ರಾಹುಲ್ ಕೆ.‍ಪಿ ಮುನ್ನುಗ್ಗಿದರು. ಬೆಂಗಳೂರು ತಂಡದ ಡಿಫೆಂಡರ್‌ಗಳು ಬೆಕ್ಕಸ ಬೆರಗಾಗಿ ನೋಡುತ್ತಿದ್ದಂತೆ ಗೋಲುಪೆಟ್ಟಿಗೆಯ ಸಮೀಪ ತಲುಪಿದ ರಾಹುಲ್, ಗುರುಪ್ರೀತ್‌ ಸಿಂಗ್ ಅವರಿಗೆ ಚಳ್ಳೆಹಣ್ಣು ತಿನ್ನಿಸಿ ಚೆಂಡನ್ನು ಗುರಿಮುಟ್ಟಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.