–ಪ್ರಜಾವಾಣಿ ಚಿತ್ರ: ಎಸ್.ಕೆ. ದಿನೇಶ್
ಬೆಂಗಳೂರು: ಎನ್. ರಾಕೇಶ್ ಸಿಂಗ್ (25ನೇ ನಿ., 41ನೇ ನಿ. ಹಾಗೂ 63ನೇ ನಿ.) ಅವರ ಹ್ಯಾಟ್ರಿಕ್ ಗೋಲಿನ ನೆರವಿನಿಂದ ಕಿಕ್‌ಸ್ಟಾರ್ಟ್ ಫುಟ್‌ಬಾಲ್ ಕ್ಲಬ್ ತಂಡವು ಕೆಎಸ್‌ಎಫ್‌ಎ ಸೂಪರ್ ಡಿವಿಷನ್ ಲೀಗ್ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ 3–1ರಿಂದ ಎಫ್‌ಸಿ ಅಗ್ನಿಪುತ್ರ ತಂಡವನ್ನು ಸುಲಭವಾಗಿ ಮಣಿಸಿತು.
ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ರಾಕೇಶ್ ಸಿಂಗ್ ಅವರು ಪಂದ್ಯದುದ್ದಕ್ಕೂ ಪಾರಮ್ಯ ಮೆರೆದರು. ಅಗ್ನಿಪುತ್ರ ತಂಡದ ಪರ ಅಝಫರ್ ನೂರಾನಿ (59ನೇ ನಿ.) ಏಕೈಕ ಗೋಲು ಹೊಡೆದರು.
ಇನ್ನೊಂದು ಪಂದ್ಯದಲ್ಲಿ ಮಂಗಲೆನ್‌ಥಂಗ್ ಸಿಂಗಸಿತ್ (72ನೇ ನಿ.) ಹಾಗೂ ಥಂಗಜಲೆನ್ ಹವೊಕಿಪ್ (85ನೇ ನಿ.) ಅವರ ಆಟದ ಸಹಾಯದಿಂದ ಪರಿಕ್ರಮ ಎಫ್‌ಸಿ ತಂಡವು 2–0ಯಿಂದ ಎಫ್‌ಸಿ ರಿಯಲ್ ಬೆಂಗಳೂರು ತಂಡವನ್ನು ಸೋಲಿಸಿತು.
ಮತ್ತೊಂದು ಪಂದ್ಯದಲ್ಲಿ ಸಂಘಟಿತ ಆಟವಾಡಿದ ಯುನೈಟೆಡ್ ಸ್ಟಾರ್ಸ್ ಎಫ್‌ಸಿ ಆಟಗಾರರು 4–2ರಿಂದ ಬೆಂಗಳೂರು ಸಿಟಿ ಎಫ್‌ಸಿ ತಂಡದ ಎದುರು ರೋಚಕ ಜಯ ಸಾಧಿಸಿದರು. ಯುನೈಟೆಡ್ ಸ್ಟಾರ್ಸ್ ತಂಡದ ವಿನಯ್ ಆರ್. (45+2ನೇ ನಿ. ಹಾಗೂ 85ನೇ ನಿ.) ಅವಳಿ ಗೋಲು ಹೊಡೆದರೆ, ಕವಿ ಅರಸನ್ ಕೆ.(73ನೇ ನಿ.) ಹಾಗೂ ಮುರಳಿ ಶ್ರೀನಿವಾಸ‌್ (81ನೇ ನಿ.) ಉತ್ತಮ ಬೆಂಬಲ ನೀಡಿದರು. ಸಿಟಿ ಎಫ್‌ಸಿ ತಂಡದ ಅಜಯ್ ಶಂಕರ್ (19ನೇ ನಿ.) ಹಾಗೂ ಮೊಹಮ್ಮದ್ ಹಬೀಲ್ (79ನೇ ನಿ.) ಅವರು ತಲಾ ಒಂದು ಬಾರಿ ಚೆಂಡನ್ನು ಗೋಲು ಪೆಟ್ಟಿಗೆಗೆ ಸೇರಿಸಿದರು.
ಅದರೊಂದಿಗೆ ಲೀಗ್‌ನ 11 ಸುತ್ತುಗಳು ಮುಕ್ತಾಯಗೊಂಡಿದ್ದು, 12ನೇ ಸುತ್ತಿನ ಪಂದ್ಯಗಳು ಬುಧವಾರದಿಂದ ಆರಂಭಗೊಳ್ಳಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.