ADVERTISEMENT

Kylian Mbappe | ಕಿಲಿಯನ್‌ ಎಂಬಾಪೆ... ‘ಅಪರಾಧ ಸಂತಾನಗಳ ಅಂಗಳ‘ದ ಕ‍ಪ್ಪು ಹೂ

1998ರಲ್ಲಿ ಫ್ರಾನ್ ಮೊದಲ ಬಾರಿಗೆ ಫಿಫಾ ವಿಶ್ವಕಪ್‌ ಗೆದ್ದಾಗ, ಎಂಬಾಪೆ ಆಗಿನ್ನೂ ಅಮ್ಮನ ಉದರದಲ್ಲಿ ಮೂರು ತಿಂಗಳ ಕೂಸು

ಅಬ್ದುಲ್ ರಹಿಮಾನ್
Published 20 ಡಿಸೆಂಬರ್ 2022, 8:19 IST
Last Updated 20 ಡಿಸೆಂಬರ್ 2022, 8:19 IST
ಕಿಲಿಯನ್‌ ಎಂಬಾಪೆ
ಕಿಲಿಯನ್‌ ಎಂಬಾಪೆ   

ಅಬ್ಬಾ..ಇಂಥ ಮ್ಯಾಚು ನೋಡಿಯೇ ಇಲ್ಲ.. ಫೈನಲ್‌ ಅಂದರೆ ಹೀಗಿರಬೇಕು.. ಮ್ಯಾಚ್ ಅಂದರೆ ಇದು ನೋಡಿ...

– ಇದು ಫಿಫಾ ಫುಟ್‌ಬಾಲ್‌ ವಿಶ್ವಕಪ್‌ನ ಫೈನಲ್ ವೀಕ್ಷಿಸಿದವರ ಬಾಯಲ್ಲಿ ಬರುತ್ತಿರುವ ಥರಹೇವಾರಿ ಉದ್ಘಾರ. ಜಗತ್ತಿನಾದ್ಯಂತ ಟಿವಿ ಮುಂದೆ ಇದ್ದ, ಮೊಬೈಲ್ ಹಿಡಿದು ಕುಳಿತಿದ್ದ ಫುಟ್‌ಬಾಲ್‌ ಪ್ರೇಮಿಗಳು, ಉಸಿರು ಬಿಗಿ ಹಿಡಿದುಕೊಂಡು, ‌ಕಣ್ಣುಗಳನ್ನು ಕದಲಿಸದಂತೆ, ಇಡೀ ಪಂದ್ಯವನ್ನು ನೋಡವಂತೆ ಮಾಡಿದ್ದು ಫ್ರಾನ್ಸ್‌ನ ಯುವ ಆಟಗಾರ ಕಿಲಿಯನ್‌ ಎಂಬಾಪೆ.

ಇನ್ನೇನು ಗೆದ್ದೇ ಬಿಟ್ಟೆವು ಎಂದುಕೊಳ್ಳುತ್ತಿದ್ದ ಬಲಿಷ್ಠ ಅರ್ಜೆಂಟೀನಾಗೆ ನೀರು ಕುಡಿಸಿದ್ದು ಇದೇ ಎಂಬಾಪೆ. 90 ಸೆಕೆಂಡುಗಳ ಅಂತರದಲ್ಲಿ ಎರಡೆರಡು ಗೋಲು ಗಳಿಸಿ, ಅರ್ಜೆಂಟೀನಾದಂಥ ಅರ್ಜೆಂಟೀನಾಗೆ ಮರ್ಮಾಘಾತವನ್ನು ನೀಡಿದ್ದ. ಆಟ ಮುಗಿಯಲು ಇನ್ನೆನು 10 ನಿಮಿಷ ಇರಬೇಕು ಎನ್ನುವಷ್ಟರಲ್ಲಿ, ಎಂಬಾಪೆ ಮಾಡಿದ ಮ್ಯಾಜಿಕ್‌, ಅರ್ಜೆಂಟೀನಾದ ಗೆಲುವಿನ ಸಮಯನ್ನು ಇನ್ನಷ್ಟು ವಿಸ್ತರಿಸುವಂತೆ ಮಾಡಿತ್ತು. ಇತನ ಸಾಹಸದಿಂದಾಗಿಯೇ ಪೆನಾಲ್ಟಿ ಶೂಟೌಟ್‌ ಮೂಲಕ ಪಂದ್ಯದ ಫಲಿತಾಂಶ ನಿರ್ಧರಿಸಬೇಕಾಗಿ ಬಂತು.

ADVERTISEMENT

ಲಯೊನೆಲ್ ಮೆಸ್ಸಿ, ಎಮಿಲಿಯಾನೊ ಮಾರ್ಟಿಂಜ್‌ ಮುಂತಾದ ಘಟಾನುಘಟಿ ಆಟಗಾರರಿದ್ದ ತಂಡದ ವಿರುದ್ಧ ಸಹನಾಮೂರ್ತಿಯಂತೆ ಆಡಿ, ಹ್ಯಾಟ್ರಿಕ್‌ ಗೋಲು ಗಳಿಸಿದ ಎಂಬಾಪೆ, ಟ್ರೋಫಿ ಗೆಲ್ಲದಿದ್ದರೂ ಫುಟ್‌ಬಾಲ್‌ ಆರಾಧಕರ ಮನಸ್ಸು ಗೆದ್ದುಬಿಟ್ಟ. ಈತನ ಪರಾಕ್ರಮದ ಮುಂದೆ ಮೆಸ್ಸಿಯ ಕಾಲ್ಚಳಕವೂ ಮಂಕಾಗಿ ಹೋಯ್ತು. ಟಿವಿ ಪರದೆ ಮುಂದೆ ಕುಳಿತಿದ್ದ ಕೋಟ್ಯಾಂತರ ಅಭಿಮಾನಿಗಳು ಹಾಗೂ ಕ್ರೀಡಾಂಗಣದಲ್ಲಿ ಸೇರಿದ್ದ ಒಂದು ಲಕ್ಷದಷ್ಟು ಮಂದಿಯ ಮುಂದೆ ಎಂಬಾಪೆ ಹಿರೋ ಆಗಿದ್ದ.

ಅಂದಹಾಗೆ ಎಂಬಾಪೆಗೆ ಈಗ ಜಸ್ಟ್‌ 23.

ಅದಾಗಲೇ ಎರಡೆರಡು ಫಿಫಾ ವಿಶ್ವಕಪ್‌ ಫೈನಲ್‌ ಆಡಿ ಆಗಿದೆ. 2018ರ ವಿಶ್ವಕಪ್‌ನಲ್ಲಿ ಉದಯೋನ್ಮುಖ ಆಟಗಾರನಾಗಿ ಹೊರಹೊಮ್ಮಿದ್ದ ಎಂಬಾಪೆ, ಮುಂದೊಂದು ದಿನ ಡಿಗೋ ಮರಡೋನಾ, ಪಿಲೇ ಮುಂತಾದ ಘಟಾನುಘಟಿಗಳ ಸಾಲಲ್ಲಿ ತನ್ನ ಹೆಸರೂ ದಾಖಲಿಸುತ್ತೇನೆ ಎನ್ನುವ ಉಮೇದಿನಲ್ಲಿ ಆಟವಾಡುತ್ತಿದ್ದಾನೆ. ಕಡಿದ ಕಲ್ಲಿನಂತೆ ಇರುವ ಆತನ ಮೈಕಟ್ಟು, ಪಾದರಸದಂತೆ ಚಲಿಸುವ ಆತನ ಕಾಲುಗಳು, ಕಾವೇರಿದ ಪಂದ್ಯದಲ್ಲೂ ಸಹನಾಶೀಲನಾಗಿ ನಿಂತು ತಂಡವನ್ನು ಬಿಟ್ಟು ಕೊಡದೆ ಇರುವ ಅವನ ಛಾತಿ, ಎಲ್ಲವೂ ಆತನ ಭವಿಷ್ಯವನ್ನು ಸಾರಿ ಸಾರಿ ಹೇಳುತ್ತಿವೆ.

1998ರಲ್ಲಿ ಫ್ರಾನ್ ಮೊದಲ ಬಾರಿಗೆ ಫಿಫಾ ವಿಶ್ವಕಪ್‌ ಗೆದ್ದಾಗ, ಎಂಬಾಪೆ ಆಗಿನ್ನೂ ಅಮ್ಮನ ಉದರದಲ್ಲಿ ಮೂರು ತಿಂಗಳ ಕೂಸು. ಪ್ಯಾರಿಸ್‌ನಲ್ಲಿ ಹುಟ್ಟಿದ್ದ ಎಂಬಾಪೆಯ ತಂದೆ, ವೈಲ್ಡ್‌ಫ್ರೈಡ್‌ ಎಂಬಾಪೆ, ಕ್ಯಾಮರೂನ್‌ನವರು. ತಾಯಿ ಫಾಯಿಝಾ ಲಾಮರಿ ಎಂಬಾಪೆ, ಅಲ್ಜಿರಿಯಾ ಮೂಲದವರು.

ಸದ್ಯ ಚಿನ್ನದ ಬೂಟು ಪಡೆದಿರುವ ಎಂಬಾಪೆ ಹುಟ್ಟಿದ್ದು ಕಾರ್ಮಿಕ ಕುಟುಂಬದಲ್ಲಿ.ಗಲಭೆ, ಕಲಹ, ದ್ವೇಷ, ಹಗೆತನಕ್ಕೆ ಮತ್ತೊಂದು ಹೆಸರು ಎನ್ನುವಂತಿದ್ದ, ಕಪ್ಪು ಜನಾಂಗದ ಬಡ ಕಾರ್ಮಿಕರು ಮಾತ್ರ ವಾಸವಿದ್ದ ಪ್ಯಾರಿಸ್‌ನ ಬಾಂಡಿ ಪ್ರದೇಶದಲ್ಲಿ ಬೆಳೆದ ಎಂಬಾಪೆ, ತನ್ನ ಆರನೇ ವಯಸ್ಗಿನಲ್ಲಿ ಫುಟ್‌ಬಾಲ್‌ ಆಡಲು ಶುರುಮಾಡಿದ್ದ. ಆತ ನಿತ್ಯ ಅಭ್ಯಾಸ ಮಾಡುತ್ತಿದ್ದ ಮನೆ ಬಳಿಯ ಮೈದಾನಕ್ಕೆ ‘ಅಪರಾಧ ಸಂತಾನೋತ್ಪತ್ತಿಯ ಮೈದಾನ‘ ಎನ್ನುವ ಅಡ್ಡ ಹೆಸರಿತ್ತು.ಆ ಮೈದಾನದ ‘ಕಪ್ಪು‘ ಹೂವೊಂದು ಈಗ ವಿಶ್ವ ಫುಟ್‌ಬಾಲ್‌ ಪ್ರೇಮಿಗಳ ಕಣ್ಮಣಿಯಾಗಿದೆ.

ಬಾಲ್ಯದ ಕೋಚ್‌ ಎ.ಎಸ್‌ ಬಾಂಡಿ ಅವರ ಬಳಿಕ ತರಬೇತಿ ಪಡೆದು, ಫ್ರೆಂಚ್‌ ಫುಟ್‌ಬಾಲ್‌ ಫೆಡರೇಶನ್‌ ನಡೆಸುವ ಕ್ಲಾರಿಫೌಂಟೈನ್‌ ಆಕಾಡೆಮಿ ಸೇರಿದ ಎಂಬಾಪೆ ಮತ್ತೆ ತಿರುಗಿ ನೋಡಿದ್ದೇ ಇಲ್ಲ. ಕಾಲಿನಲ್ಲಿ ಎಂಬಾಪೆ ಮಾಡುತ್ತಿದ್ದ ಮ್ಯಾಜಿಕ್‌ಗಳನ್ನು ಆಶ್ಚರ್ಯ ಚಕಿತರಾಗಿ ವೀಕ್ಷಿಸುತ್ತಿದ್ದ ಫುಟ್‌ಬಾಲ್‌ ಮಲ್ಲರು, ಆತನನ್ನು ತಮ್ಮ ಕ್ಲಬ್‌ಗೆ ಕರೆತರಲು ಉತ್ಸುಕರಾಗಿದ್ದರು. ರಿಯಲ್‌ ಮ್ಯಡ್ರಿಡ್‌, ಚೆಲ್‌ಸಿಯಾ, ಲಿವರ್‌ಪೂಲ್‌, ಮ್ಯಾಂಚೆಸ್ಟರ್‌ ಸಿಟಿ ಹಾಗೂ ಬೈರನ್‌ ಮ್ಯೂನಿಚ್‌ ಮುಂತಾದ ಶ್ರೀಮಂತ ಕ್ಲಬ್‌ಗಳು ಎಂಬಾಪೆ ಜತೆ ಒಪ್ಪಂದಕ್ಕೆ ಮುಂದಾಗಿದ್ದವು ಎಂದರೆ ಆತ ಮಾಡುತ್ತಿದ್ದ ಮೋಡಿ ಎಂಥದ್ದಾಗಿರಬೇಕು?

ಎಂಬಾಪೆ ಯಾವ ಪರಿ ಫುಟ್‌ಬಾಲ್‌ ಆಡುತ್ತಿದ್ದ ಎನ್ನುವುದಕ್ಕೆ ಆತನ ಕೋಚ್‌ ಎ.ಎಸ್‌ ಬಾಂಡಿ ಹೇಳಿರುವ ಈ ಮಾತುಗಳೇ ಸಾಕ್ಷಿ. ‘ಎಂಬಾಪೆ ಆರನೇ ವಯಸ್ಸಿನಲ್ಲಿರುವಾಗಲೇ ನಾನು ಅವನಿಗೆ ತರಬೇತಿ ಆರಂಭಿಸಿದ್ದೆ. ನಾನು ತರಬೇತಿ ನೀಡುತ್ತಿದ್ದವರ ಪೈಕಿ, ಎಂಬಾಪೆ ಎಲ್ಲರಿಗಿಂತಲೂ ಭಿನ್ನವಾಗಿದ್ದ. ಬೇರೆ ವಿದ್ಯಾರ್ಥಿಗಳು ಮಾಡುವುದಕ್ಕಿಂತ ಹೆಚ್ಚಿನದನ್ನು ಆತ ಮಾಡುತ್ತಿದ್ದ. ಬಾಂಡಿಯಲ್ಲಿ 15 ವರ್ಷದ ನನ್ನ ಕೋಚಿಂಗ್‌ ಅವಧಿಯಲ್ಲಿ ಎಂಬಾಪೆಯಂತ ಪ್ರತಿಭೆಯನ್ನು ನಾನು ಕಂಡಿಲ್ಲ. ಅದಕ್ಕೆ ನಾವು ಆತನನ್ನು ಅತ್ಯತ್ತಮ ಎಂದು ಕರೆಯುತ್ತೇವೆ‘.

ಮೊನಾಕೊದ ‘ಬಿ‘ ಟೀಂನ ಸದಸ್ಯನಾಗಿ ಫುಟ್‌ಬಾಲ್‌ ವೃತ್ತಿ ಆರಂಭಿಸಿದ್ದ ಎಂಬಾಪೆ, ಕೇವಲ ಮೂರೇ ವಾರದಲ್ಲಿ ಮುಖ್ಯ ತಂಡದ ಸದಸ್ಯನಾಗಿ ಮೈದಾನಕ್ಕೆ ಇಳಿದಿದ್ದ. 16 ವಯಸ್ಸಿನ ಎಂಬಾಪೆ, ಆ ತಂಡದಲ್ಲಿ ಆಡಿದ ಅತ್ಯಂತ ಕಿರಿಯ ಆಟಗಾರ ಎನ್ನುವ ಹಿರಿಮೆಗೆ ಪಾತ್ರವಾಗಿದ್ದ. ಆತಮೊನಾಕೊ ಕ್ಲಬ್‌ ಪರವಾಗಿ ಗಳಿಸಿರುವ ಮೊದಲ ಗೋಲು, ಅತ್ಯಂತ ಕಿರಿಯ ಆಟಗಾರನಿಂದ ದಾಖಲಾದ ಗೋಲು ಎಂದು ದಾಖಲೆ ಬರೆದಿದೆ.

ಫ್ರೆಂಚ್‌ ಡೊಮೆಸ್ಟಿಕ್‌ ಕಪ್‌ನಲ್ಲಿ ಹ್ಯಾಟ್ರಿಕ್‌ ಗೋಲು, ಲೀಗ್‌ 1 ನಲ್ಲಿ ಹ್ಯಾಟ್ರಿಕ್‌ ಗೋಲು, ಯುಇಎಫ್‌ಎ ಚಾಂಪಿಯನ್‌ ಲೀಗ್‌ನಲ್ಲಿ ಗೋಲು ದಾಖಲಿಸಿದ ಅತ್ಯಂತ ಕಿರಿಯ ಫ್ರೆಂಚ್ ಆಟಗಾರ, ಡಿವಿಶನ್ 1ನಲ್ಲಿ 10 ಗೋಲು ದಾಖಲಿಸಿದ ಅತೀ ಕಿರಿಯ ಆಟಗಾರ, 2016–17ರ ಋತುವಿನಲ್ಲಿ 26 ಗೋಲು ಬಾರಿಸಿ ದಾಖಲೆ, ಚಾಂಪಿಯನ್‌ ಲೀಗ್‌ನಲ್ಲಿ 10 ಗೋಲು ಬಾರಿಸಿದ ಅತೀ ಕಿರಿಯ ಆಟಗಾರ, ಲೀಗ್‌ ಪ್ರಶಸ್ತಿ ಗೆದ್ದ ಅತೀ ಕಿರಿಯ ಆಟಗಾರ, ವಿಶ್ವಕಪ್‌ನಲ್ಲಿ ಗೋಲು ದಾಖಲಿಸಿದ ಅತೀ ಕಿರಿಯ ಫ್ರೆಂಚ್ ಆಟಗಾರ..‌ ಹೀಗೆ ದಾಖಲೆಗಳನ್ನು ಸೃಷ್ಠಿಸುತ್ತಾ ಬಂದಿದ್ದ ಎಂಬಾಪೆಗೆ ಆಗಿನ್ನೂ 19 ವರ್ಷ ತುಂಬಿರಲಿಲ್ಲ ಎಂದರೆ ನಂಬಲೇಬೇಕು. ಇದೀಗ ಐದೂವರೆ ದಶಕಗಳ ಬಳಿಕ ವಿಶ್ವಕಪ್‌ ಫೈನಲ್‌ನಲ್ಲಿ ಹ್ಯಾಟ್ರಿಕ್‌ ಗೋಲು ಸಿಡಿಸಿ ಮತ್ತೊಂದು ಮೈಲಿಗಲ್ಲು ಸೃಷ್ಠಿಸಿದ್ದಾನೆ.

19ನೇ ವರ್ಷಕ್ಕೆ ಫುಟ್‌ಬಾಲ್‌ ಜಗತ್ತನ್ನೇ ಗೆದ್ದ ಎಂಬಾಪೆ, 2018ರ ವಿಶ್ವಕಪ್‌ನಲ್ಲಿ ಪೆರು ವಿರುದ್ಧದ ಪಂದ್ಯದಲ್ಲಿ ಗೋಲು ಗಳಿಸುವ ಮೂಲಕ, ವಿಶ್ವಕಪ್‌ನಲ್ಲಿ ಗೋಲು ದಾಖಲಿಸಿದ ಎರಡನೇ ಅತಿ ಕಿರಿಯ ಎನ್ನುವ ದಾಖಲೆ ಬರೆದ. ಆ ವಿಶ್ವಕಪ್‌ ಜಯಿಸಿದ ಫ್ರಾನ್ಸ್‌ ತಂಡದ ಸದಸ್ಯನಾಗಿದ್ದ ಎಂಬಾಪೆ, ಪಂದ್ಯಕೂಟದಲ್ಲಿ ಆಟವಾಡಿದ ಕಿರಿಯ ಆಟಗರ ಎನ್ನುವ ಹಿರಿಮೆಗೆ ಪಾತ್ರವಾಗಿದ್ದ.

2019ರಲ್ಲಿ ಪಿಎಸ್‌ಜಿ ಕ್ಲಬ್‌ ಪರ ಆಡಿದ್ದ ಎಂಬಾಪೆ, ಪಂದ್ಯಕೂಟದಲ್ಲಿ 33 ಗೋಲು ಗಳಿಸಿ ಗೋಲ್ಡನ್‌ ಬೂಟ್‌ ಪಡೆದಿದ್ದ. ಒಂದೇ ಪಂದ್ಯದಲ್ಲಿ 4 ಗೋಲು ಬಾರಿಸಿ ದಾಖಲೆ ಬರೆದಿದ್ದ. ಆತನ ಮ್ಯಾಜಿಕ್‌ನಿಂದಾಗಿ ಪಿಎಸ್‌ಜಿ ಚಾಂಪಿಯನ್‌ ಆಗಿ ಹೊರಹೊಮ್ಮಿತ್ತು. 2020–21ರ ಋತುವಿನಲ್ಲಿ ‍ಪಿಎಸ್‌ಜಿ ಪರ 100ನೇ ಗೋಲು ದಾಖಲಿಸಿದ್ದ. ಇದೂ ಕೂಡ ದಾಖಲೆಯೇ. ಚಾಂಪಿಯನ್ಸ್‌ ಲೀಗ್‌ನಲ್ಲಿ 20 ಗೋಲು ದಾಖಲಿಸಿದ ಕಿರಿಯ ಆಟಗಾರ ಎನ್ನುವ ದಾಖಲೆ ಕೂಡ ಎಂಬಾಪೆಯದ್ದೇ. ಬಾರ್ಸಿಲೋನಾದಂತ ದೈತ್ಯ ಕ್ಲಬ್‌ ವಿರುದ್ಧ ಕೂಡ ಹ್ಯಾಟ್ರಿಕ್‌ ಗೋಲು ದಾಖಲಿಸಿದ್ದು, ಚಾಂಪಿಯನ್ಸ್‌ ಲೀಗ್‌ನಲ್ಲಿ ಸತತ ಮೂರು ಗೋಲ್ಡನ್‌ ಬೂಟ್‌ ಗೆದ್ದಿದ್ದು, ಎಂಬಾಪೆಯ ಫುಟ್‌ಬಾಲ್‌ ಕೌಶಲ್ಯಕ್ಕೆ ಹಿಡಿದಿರುವ ಕನ್ನಡಿ.

ಎಂಬಾಪೆ ಮೈದಾನದಲ್ಲಿ ಇದ್ದರೆ ದಾಖಲೆಗಳು ನಿರ್ಮಾಣವಾಗುತ್ತವೆ. ಪಂದ್ಯಕ್ಕೊಂದು ಹೊಸ ತಿರುವು ಸಿಗುತ್ತದೆ. ಆತನ ಪಾದಗಳಲ್ಲಿ ಅಡಗಿರುವ ಮಾಂತ್ರಿಕ ಶಕ್ತಿ, ಮುಂದೊಂದು ದಿನ ಆತನನ್ನು ಫುಟ್ಬಾಲ್‌ ದಿಗ್ಗಜರ ಸಾಲಿಗೆ ಸೇರಿಸುವುದರಲ್ಲಿ ಯಾವ ಅನುಮಾನವೂ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.