ADVERTISEMENT

ಲಯೊನೆಲ್‌ ಮೆಸ್ಸಿಗೆ 700ನೇ ಗೋಲಿನ ಸಂಭ್ರಮ

ಏಜೆನ್ಸೀಸ್
Published 1 ಜುಲೈ 2020, 9:07 IST
Last Updated 1 ಜುಲೈ 2020, 9:07 IST
ಗೋಲು ಗಳಿಸುವ ಯತ್ನದಲ್ಲಿ ಲಯೊನೆಲ್‌ ಮೆಸ್ಸಿ (ಮಧ್ಯ)– ಎಪಿ–ಪಿಟಿಐ ಚಿತ್ರ
ಗೋಲು ಗಳಿಸುವ ಯತ್ನದಲ್ಲಿ ಲಯೊನೆಲ್‌ ಮೆಸ್ಸಿ (ಮಧ್ಯ)– ಎಪಿ–ಪಿಟಿಐ ಚಿತ್ರ   

ಬಾರ್ಸಿಲೋನಾ: ಲಯೊನೆಲ್‌ ಮೆಸ್ಸಿ ಮಂಗಳವಾರ ತಮ್ಮ ವೃತ್ತಿಬದುಕಿನ ಮತ್ತೊಂದು ಮೈಲುಗಲ್ಲು ಸ್ಥಾಪಿಸಿದರು. ಒಟ್ಟಾರೆ 700ನೇ ಗೋಲಿನ ಸಂಭ್ರಮವನ್ನು ಆಚರಿಸಿದರು. ಸ್ಪ್ಯಾನಿಷ್‌ ಲೀಗ್‌ ಫುಟ್‌ಬಾಲ್‌ ಟೂರ್ನಿಯಲ್ಲಿ ಬಾರ್ಸಿಲೋನಾ ಪರ ಅಟ್ಲೆಟಿಕೊ ಮ್ಯಾಡ್ರಿಡ್‌ ವಿರುದ್ಧ ಕಾಲ್ಚಳಕ ತೋರಿದರು. ಆದರೆ ಪಂದ್ಯ 2–2 ಗೋಲಿನಲ್ಲಿ ಡ್ರಾ ಆಗಿದ್ದು, ಬಾರ್ಸಿಲೋನಾ ತಂಡದ ಪ್ರಶಸ್ತಿ ಗೆಲುವಿನ ಕನಸಿಗೆ ಹಿನ್ನಡೆಯಾಗಿದೆ.

ಬಾರ್ಸಿಲೋನಾ ತಂಡ 11ನೇ ನಿಮಿಷದಲ್ಲಿ ‘ಉಡುಗೊರೆ’ ಗೋಲಿನ ಮೂಲಕ ಖಾತೆ ತೆರೆಯಿತು. ಅಟ್ಲೆಟಿಕೊ ಸ್ಟ್ರೈಕರ್‌ ಡಿಗೊ ಕೋಸ್ಟಾ ತಮ್ಮದೇ ಗೋಲುಪೆಟ್ಟಿಗೆಯೊಳಗೆ ಚೆಂಡು ಸೇರಿಸುವ ಮೂಲಕ ‘ಪ್ರಮಾದ’ ಎಸಗಿದರು. 19ನೇ ನಿಮಿಷದಲ್ಲಿ ಈ ತಪ್ಪು ಸರಿಪ‍ಡಿಸುವಂತೆ ಆಡಿದ ಸಾಲ್‌ ನಿಗ್ವೆಜ್‌ ಅವರು ಅಟ್ಲೆಟಿಕೊ ಪರ ಪೆನಾಲ್ಟಿ ಅವಕಾಶದಲ್ಲಿ ಗೋಲು ಹೊಡೆದರು.

56ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಅವಕಾಶದಲ್ಲಿ ಮೆಸ್ಸಿ ಮೋಡಿ ಮಾಡಿದರು. ಎದುರಾಳಿ ಗೋಲ್‌ಕೀಪರ್‌ ಜಾನ್‌ ಒಬ್ಲಾಕ್‌ ಅವರನ್ನು ವಂಚಿಸಿದ ಅವರು ಚೆಂಡನ್ನು ಗೋಲು ಪೆಟ್ಟಿಗೆಗೆ ಸೇರಿಸುವಲ್ಲಿ ತಪ್ಪು ಮಾಡಲಿಲ್ಲ. ಬಾರ್ಸಿಲೋನಾಗೆ 2–1ರ ಮುನ್ನಡೆ ಸಿಕ್ಕಿತು. ಇದು ಮೆಸ್ಸಿ ಅವರ 630ನೇ ಕ್ಲಬ್‌ ಗೋಲು ಆಗಿತ್ತು. ಅರ್ಜೆಂಟೀನಾ ರಾಷ್ಟ್ರೀಯ ತಂಡದ ಪರ ಅವರು 70 ಗೋಲು ದಾಖಲಿಸಿದ್ದಾರೆ. ಈ ಋತುವಿನ ಲೀಗ್‌ನಲ್ಲಿ ಅವರ 22ನೇ ಗೋಲು.

ADVERTISEMENT

ಆದರೆ 62ನೇ ನಿಮಿಷದಲ್ಲಿ ಸಾಲ್‌ ನಿಗ್ವೆಜ್‌ ಮತ್ತೊಮ್ಮೆ ಕಾಲ್ಚಳಕ ತೋರಿ (ಪೆನಾಲ್ಟಿ) ತಮ್ಮ ತಂಡವನ್ನು ಸೋಲಿನಿಂದ ಪಾರು ಮಾಡಿದರು.

ಲೀಗ್‌ನಲ್ಲಿ ಇನ್ನು ನಾಲ್ಕು ಸುತ್ತುಗಳು ಬಾಕಿಯಿದ್ದು ಬಾರ್ಸಿಲೋನಾ ಸದ್ಯ ಪಾಯಿಂಟ್ಸ್‌ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಅಗ್ರಸ್ಥಾನದಲ್ಲಿರುವ ರಿಯಲ್‌ ಮ್ಯಾಡ್ರಿಡ್‌ಗಿಂತ ಒಂದು ಪಾಯಿಂಟ್‌ ಹಿಂದೆ ಇದೆ. ರಿಯಲ್‌ ಮ್ಯಾಡ್ರಿಡ್‌ ತಂಡ ಗುರುವಾರ ಗೆಟಫೆ ತಂಡವನ್ನು ಎದುರಿಸಲಿದ್ದು, ಗೆದ್ದು ಪಾಯಿಂಟ್ಸ್‌ ಹೆಚ್ಚಿಸಿಕೊಳ್ಳುವ ವಿಶ್ವಾಸದಲ್ಲಿದೆ. ಇನ್ನೂ ಆ ತಂಡ ಐದು ಪಂದ್ಯಗಳನ್ನು ಆಡಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.