ADVERTISEMENT

ಮೆಸ್ಸಿಗೆ ಬ್ಯಾಲನ್‌ ಡಿ ಒರ್‌ ಗೌರವ

ದಾಖಲೆ ಆರನೇ ಬಾರಿ ಪ್ರಶಸ್ತಿಗೆ ಮುತ್ತಿಕ್ಕಿದ ಅರ್ಜೆಂಟೀನಾ ತಾರೆ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2019, 16:15 IST
Last Updated 3 ಡಿಸೆಂಬರ್ 2019, 16:15 IST
ಪ್ರಶಸ್ತಿ ವಿಜೇತ ಲಯೊನೆಲ್‌ ಮೆಸ್ಸಿ ಸಂಭ್ರಮ–ಎಎಫ್‌ಪಿ ಚಿತ್ರ
ಪ್ರಶಸ್ತಿ ವಿಜೇತ ಲಯೊನೆಲ್‌ ಮೆಸ್ಸಿ ಸಂಭ್ರಮ–ಎಎಫ್‌ಪಿ ಚಿತ್ರ   

ಪ್ಯಾರಿಸ್‌:ಅರ್ಜೆಂಟೀನಾ ಫುಟ್‌ಬಾಲ್‌ ಆಟಗಾರ ಲಯೊನೆಲ್‌ ಮೆಸ್ಸಿ ಅವರು ವರ್ಜಿಲ್‌ ವ್ಯಾನ್‌ ಡಿಕ್‌ ಹಾಗೂ ಕ್ರಿಸ್ಟಿಯಾನೊ ರೊನಾಲ್ಡೊ ಅವರನ್ನು ಹಿಂದಿಕ್ಕಿ ದಾಖಲೆಯ ಆರನೇ ಬಾರಿ ಬ್ಯಾಲನ್‌ ಡಿ ಒರ್‌ ಪ್ರಶಸ್ತಿಗೆ ಮುತ್ತಿಕ್ಕಿದರು. ವಿಶ್ವಕಪ್‌ ವಿಜೇತ ಅಮೆರಿಕದ ಮೇಗನ್‌ ರಾಪಿನೊಯ್‌ ಅವರಿಗೆ ಮಹಿಳಾ ವಿಭಾಗದ ಪ್ರಶಸ್ತಿ ಒಲಿದಿದೆ.

2015ರ ಬಳಿಕ ಮೆಸ್ಸಿ ಗೆದ್ದ ಮೊದಲ ಬ್ಯಾಲನ್‌ ಡಿ ಒರ್‌ ಪ್ರಶಸ್ತಿ ಇದು. ರೊನಾಲ್ಡೊ ಐದು ಬಾರಿ ಈ ಪ್ರಶಸ್ತಿಯಒಡೆಯರಾಗಿದ್ದಾರೆ.

‘ಹತ್ತು ವರ್ಷಗಳ ಹಿಂದೆ ಪ್ಯಾರಿಸ್‌ನಲ್ಲಿ ಮೊದಲ ಬಾರಿ ಪ್ರಶಸ್ತಿ ಸ್ವೀಕರಿಸಿದ್ದೆ. ಆಗ ನನಗೆ 22 ವರ್ಷ ವಯಸ್ಸು. ಇಷ್ಟು ಸಾಧನೆ ಮಾಡುತ್ತೇನೆಂದು ಅಂದುಕೊಂಡಿರಲಿಲ್ಲ’ ಎಂದು ಪ್ರಶಸ್ತಿ ಸ್ವೀಕರಿಸಿದ ಬಾರ್ಸಿಲೋನಾ ಆಟಗಾರ ಮೆಸ್ಸಿ ನುಡಿದರು. ಹೋದ ಬಾರಿ ಪ್ರಶಸ್ತಿ ವಿಜೇತ ಲೂಕಾ ಮಾಡ್ರಿಚ್‌, ಮೆಸ್ಸಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.

ADVERTISEMENT

ವಿಶ್ವ ಶ್ರೇಷ್ಠ ಆಟಗಾರನಿಗೆ ಫ್ರಾನ್ಸ್ ಫುಟ್‌ಬಾಲ್‌ ಮ್ಯಾಗಜೀನ್‌ ಈ ಪ್ರಶಸ್ತಿ ನೀಡುತ್ತದೆ. ವಿಶ್ವದಾದ್ಯಂತ ಪತ್ರಕರ್ತರ ಸಮಿತಿಯೊಂದು ಮತದಾನದ ಮೂಲಕ ಆಟಗಾರನನ್ನು ಆಯ್ಕೆ ಮಾಡುತ್ತದೆ. ಲಿವರ್‌ಪೂಲ್‌ ಕ್ಲಬ್‌ ಪರ ಆಡುವ ನೆದರ್ಲೆಂಡ್ಸ್ ರಾಷ್ಟ್ರೀಯ ತಂಡದ ವ್ಯಾನ್‌ ಡಿಕ್‌ ಈ ಬಾರಿ ಎರಡನೇ ಸ್ಥಾನ ಪಡೆದರೆ, ಪೋರ್ಚುಗಲ್‌ ರಾಷ್ಟ್ರೀಯ ತಂಡದ ಹಾಗೂ ರಿಯಲ್‌ ಮ್ಯಾಡ್ರಿಡ್‌ ಕ್ಲಬ್‌ ಆಡುವ ರೊನಾಲ್ಡೊ ಮೂರನೇ ಸ್ಥಾನಕ್ಕೆ ಇಳಿದರು.

2019ರ ಋತುವಿನಲ್ಲಿ ಮೆಸ್ಸಿ 54 ಪಂದ್ಯಗಳನ್ನು(ರಾಷ್ಟ್ರೀಯ ಮತ್ತು ಕ್ಲಬ್‌ ಸೇರಿ) ಆಡಿ 46 ಗೋಲು ದಾಲಿಸಿದ್ದಾರೆ. 17 ಗೋಲು ಗಳಿಸಲು ಸಹಾಯವಾಗಿದ್ದಾರೆ.

ಈ ವರ್ಷ ಜುಲೈನಲ್ಲಿ ಕೊನೆಗೊಂಡಮಹಿಳಾ ವಿಶ್ವಕಪ್‌ ಫುಟ್‌ಬಾಲ್‌ ಟೂರ್ನಿಯಲ್ಲಿ ಅಮೆರಿಕ ಪ್ರಶಸ್ತಿ ಎತ್ತಿಹಿಡಿದಿತ್ತು. ಮೇಗನ್‌ ತಂಡದ ನಾಯಕತ್ವ ವಹಿಸಿದ್ದರು.

ಮೂರಕ್ಕಿಂತ ಹೆಚ್ಚು ಬಾರಿ ಬ್ಯಾಲನ್‌ ಡಿ ಒರ್‌ ವಿಜೇತರು

ಆಟಗಾರ; ದೇಶ; ಎಷ್ಟು ಬಾರಿ; ವರ್ಷ

ಲಯೊನೆಲ್‌ ಮೆಸ್ಸಿ; ಅರ್ಜೆಂಟೀನಾ; 6; 2009, 2010, 2011, 2012, 2015, 2019

ಕ್ರಿಸ್ಟಿಯಾನೊ ರೊನಾಲ್ಡೊ; ಪೋರ್ಚುಗಲ್‌; 5; 2008, 2013, 2014, 2016, 2017

ಮೈಕೆಲ್‌ ಪ್ಲಾಟಿನಿ; ಫ್ರಾನ್ಸ್; 3; 1983, 1984,1985

ಜೋಹಾನ್‌ ಕ್ರುಯಪ್‌; ನೆದರ್ಲೆಂಡ್ಸ್; 3; 1971, 1973,1974

ಮಾರ್ಕೊ ವ್ಯಾನ್‌ ಬಸ್ಟೆನ್‌; ನೆದರ್ಲೆಂಡ್ಸ್; 3; 1988,1989,1992

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.