ADVERTISEMENT

Messi Event Chaos: ಕಾರ್ಯಕ್ರಮದ ಮುಖ್ಯ ಆಯೋಜಕ 14 ದಿನ ಪೊಲೀಸ್ ಕಸ್ಟಡಿಗೆ

ಪಿಟಿಐ
Published 14 ಡಿಸೆಂಬರ್ 2025, 10:19 IST
Last Updated 14 ಡಿಸೆಂಬರ್ 2025, 10:19 IST
   

​ಕೋಲ್ಕತ್ತ: ಫುಟ್‌ಬಾಲ್ ದಿಗ್ಗಜ, ಅರ್ಜೆಂಟೀನಾದ ಲಯೊನೆಲ್ ಮೆಸ್ಸಿ ತಮ್ಮ ಕಾರ್ಯಕ್ರಮವನ್ನು ಮೊಟಕುಗೊಳಿಸಿ, ಹಠಾತ್ತನೇ ನಿರ್ಗಮಿಸಿದ್ದರಿಂದ ನಿರಾಸೆಗೊಂಡ ಅವರ ಅಭಿಮಾನಿಗಳು ಸಾಲ್ಟ್‌ ಲೇಕ್ ಕ್ರೀಡಾಂಗಣದಲ್ಲಿ ದಾಂದಲೆ ನಡೆಸಿದ್ದರು. ಪ್ರಕರಣ ಸಂಬಂಧ ಬಂಧನಕ್ಕೊಳಗಾಗಿರುವ, ಕಾರ್ಯಕ್ರಮದ ಮುಖ್ಯ ಆಯೋಜಕ ಶತಾದ್ರು ದತ್ತ ಅವರನ್ನು ಭಾನುವಾರ ಇಲ್ಲಿನ ನ್ಯಾಯಾಲಯ 14 ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮೆಸ್ಸಿ ಮತ್ತು ಅವರ ತಂಡವನ್ನು ಹೈದರಾಬಾದ್‌ಗೆ ಬೀಳ್ಕೊಡಲು ಕೋಲ್ಕತ್ತ ವಿಮಾನ ನಿಲ್ದಾಣಕ್ಕೆ ತೆರಳಿದ್ದ ದತ್ತ ಅವರನ್ನು ಬಿಧಾನ್‌ನಗರ ಪೊಲೀಸರು ಶನಿವಾರ ಬಂಧಿಸಿದ್ದರು.

ನನ್ನ ಕಕ್ಷಿದಾರರ ವಿರುದ್ಧ ಸುಳ್ಳು ಆರೋಪ ಹೊರಿಸಲಾಗುತ್ತಿದೆ ಎಂದು ದತ್ತ ಅವರ ಪರ ಹಾಜರಾದ ವಕೀಲರು ನ್ಯಾಯಾಲಯಕ್ಕೆ ಅರುಹಿದರು. ಅಲ್ಲದೇ ಪೊಲೀಸ್ ತನಿಖೆಯಿಂದ ಮುಂದಿನ 14 ದಿನಗಳಲ್ಲಿ ಈ ಬಗ್ಗೆ ಸ್ಪಷ್ಟತೆ ಸಿಗಲಿದೆ ಎಂದೂ ಅವರು ಹೇಳಿದ್ದಾರೆ.

ADVERTISEMENT

ದತ್ತ ಅವರನ್ನು ನ್ಯಾಯಾಲಯಕ್ಕೆ ಕರೆದೊಯ್ಯುವ ವೇಳೆ ಬಿಜೆಪಿಯ ಬೆಂಬಲಿಗರು ನ್ಯಾಯಾಲಯದ ಹೊರಗೆ ಪ್ರತಿಭಟನೆ ನಡೆಸಿದ್ದಾರೆ.

ಘಟನೆಯ ಹಿನ್ನೆಲೆ

ನಿರೀಕ್ಷೆಗಿಂತಲೂ ಮುಂಚಿತವಾಗಿಯೇ ಮೆಸ್ಸಿ ಕ್ರೀಡಾಂಗಣದಿಂದ ನಿರ್ಗಮಿಸಿದ್ದರಿಂದ ರೊಚ್ಚಿಗೆದ್ದ ಅಭಿಮಾನಿಗಳು ಪ್ರೇಕ್ಷಕರ ಗ್ಯಾಲರಿಯಲ್ಲಿನ ಕುರ್ಚಿಗಳನ್ನು ಧ್ವಂಸಗೊಳಿಸಿ, ಮೈದಾನದತ್ತ ಎಸೆದಿದ್ದಾರೆ. ನೂರಾರು ಜನರು ತಡೆಗೋಡೆಗಳನ್ನು ದಾಟಿ ಕ್ರೀಡಾಂಗಣಕ್ಕೆ ನುಗ್ಗಿ, ಪಿಚ್‌ಗೆ ಹಾನಿ ಮಾಡಿದ್ದಾರೆ. ಸಮೀಪದಲ್ಲಿಯೇ ಅಳವಡಿಸಿದ್ದ ಬ್ಯಾನರ್‌ಗಳು ಹಾಗೂ ಟೆಂಟ್‌ಗಳನ್ನು ಧ್ವಂಸಗೊಳಿಸಿದ್ದಾರೆ.

ಮೆಸ್ಸಿ ಅವರು ಕ್ರೀಡಾಂಗಣದಿಂದ ನಿರ್ಗಮಿಸಿದ ಬೆನ್ನಲ್ಲೇ, ದತ್ತ ಸೇರಿದಂತೆ ಇತರ ಆಯೋಜಕರು ಕೂಡ ಸ್ಥಳದಲ್ಲಿ ಕಾಣಲಿಲ್ಲ. ಇದು ಪರಿಸ್ಥಿತಿ ಮತ್ತಷ್ಟು ಹದಗೆಡಲು ಕಾರಣವಾಯಿತು ಎಂದು ಕೆಲ ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.