ADVERTISEMENT

ಫುಟ್‌ಬಾಲ್‌ ಕಾನ್ಫೆಡರೇಷನ್‌ ವಿರುದ್ಧ ಸಿಡಿಮಿಡಿ: ಮೆಸ್ಸಿಗೆ 3 ತಿಂಗಳ ನಿಷೇಧ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2019, 18:57 IST
Last Updated 3 ಆಗಸ್ಟ್ 2019, 18:57 IST
ಲಯೊನೆಲ್‌ ಮೆಸ್ಸಿ
ಲಯೊನೆಲ್‌ ಮೆಸ್ಸಿ   

ಅಸುನ್ಸಿಯಾನ್‌: ಆರ್ಜೇಂಟೀನಾದ ಖ್ಯಾತ ಆಟಗಾರ ಲಯೊನೆಲ್‌ ಮೆಸ್ಸಿ ಅವರನ್ನು ರಾಷ್ಟ್ರೀಯ ತಂಡಕ್ಕೆ ಆಡದಂತೆ ದಕ್ಷಿಣ ಅಮೆರಿಕ ಫುಟ್‌ಬಾಲ್‌ ಕಾನ್ಫೆಡರೇಷನ್‌ (ಕಾನ್‌ಮೆಬಾಲ್‌) ಮೂರು ತಿಂಗಳು ನಿಷೇಧ ಹೇರಿದೆ. ಈ ಸ್ಟಾರ್‌ ಆಟಗಾರ, ಕೊಪಾ ಅಮೆರಿಕಾ ಟೂರ್ನಿಯ ವೇಳೆ ‘ಕಾನ್‌ಮೆಬಾಲ್‌’ ವಿರುದ್ಧ ತೀಕ್ಷ್ಣ ಮಾತುಗಳಿಂದ ಹರಿಹಾಯ್ದಿರುವುದು ಈ ಕ್ರಮಕ್ಕೆ ಕಾರಣ.

ಮೆಸ್ಸಿ ಅವರಿಗೆ ₹ 34.50 ಲಕ್ಷ (50 ಸಾವಿರ ಡಾಲರ್‌) ದಂಡವನ್ನೂ ವಿಧಿಸಲಾಗಿದೆ. ಬ್ರೆಜಿಲ್‌ನಲ್ಲಿ ಕಳೆದ ತಿಂಗಳು ನಡೆದ ಟೂರ್ನಿಯ ವೇಳೆ, ಚಿಲಿ ವಿರುದ್ಧ ಮೂರನೇ ಸ್ಥಾನ ನಿರ್ಧಾರಕ್ಕೆ ನಡೆದ ಪಂದ್ಯದಲ್ಲಿ, 32 ವರ್ಷದ ಮೆಸ್ಸಿ ಅವರನ್ನು ಹೊರಕಳುಹಿಸಲಾಗಿತ್ತು. ನಂತರ ಅವರುಕಾನ್ಫೆಡರೇಷನ್‌ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದ್ದರು.

ಕೊಪಾ ಅಮೆರಿಕ ಟೂರ್ನಿಯ ಎರಡು ಘಟನೆಗಳು ಮೆಸ್ಸಿ ಅವರನ್ನು ಕೆರಳಿಸಿದ್ದವು. ಕಟ್ಟಾ ಎದುರಾಳಿ ಬ್ರೆಜಿಲ್‌ ವಿರುದ್ಧ ಸೆಮಿಫೈನಲ್‌ ಪಂದ್ಯದ ಸಂದರ್ಭದಲ್ಲಿ ಎರಡು ಬಾರಿ ‘ಪೆನಾಲ್ಟಿ’ಗಾಗಿ ಆರ್ಜೆಂಟೀನಾ ವಾದಿಸಿದ್ದರೂ, ಅದನ್ನು ನಿರಾಕರಿಸಲಾಗಿತ್ತು. ನಂತರ ಮೆಸ್ಸಿ, ‘ಬ್ರೆಜಿಲ್‌ ಇತ್ತೀಚಿನ ದಿನಗಳಲ್ಲಿ ಕಾನ್ಫೆಡರೇಷನ್‌ನಲ್ಲಿ ಚೆನ್ನಾಗಿ ನಿರ್ವಹಣೆ ಮಾಡುತ್ತಿದೆ’ ಎಂದು ವ್ಯಂಗ್ಯವಾಡಿದ್ದರು. ಆ ವಿವಾದಾತ್ಮಕ ಪಂದ್ಯ ಗೆದ್ದ ಬ್ರೆಜಿಲ್‌ ನಂತರ ಚಾಂಪಿಯನ್‌ ಕೂಡ ಆಗಿತ್ತು.

ADVERTISEMENT

ಮೂರನೇ ಸ್ಥಾನ ನಿರ್ಧಾರ ಪಂದ್ಯದಲ್ಲಿ ತಮ್ಮನ್ನು ಹೊರಕಳುಹಿಸಿದ್ದಕ್ಕೆ ಅವರಿಗೆ ಆಕ್ರೋಶ ತಡೆಯಲಾಗಲಿಲ್ಲ. ಆರ್ಜೆಂಟೀನಾ 2–1 ರಿಂದ ಆ ಪಂದ್ಯ ಗೆದ್ದುಕೊಂಡಿತ್ತು.

‘ಪ್ರೇಕ್ಷಕರು ಫುಟ್‌ಬಾಲ್‌ ಅಸ್ವಾದಿಸುವುಕ್ಕೆ ಭ್ರಷ್ಟಾಚಾರದ ಜೊತೆಗೆ ರೆಫ್ರಿಗಳು ತಡೆಯೊಡ್ಡುತ್ತಿದ್ದಾರೆ’ ಎಂದು ಮೆಸ್ಸಿ ಟೀಕಿಸಿದ್ದರು.

ಚಿಲಿ ಕ್ಯಾಪ್ಟನ್‌ ಗ್ಯಾರಿ ಮೆಡೆಲ್‌ ಜೊತೆ ತಳ್ಳಾಟದಲ್ಲಿ ಅವರನ್ನು ಹೊರಕಳುಹಿಸಲಾಗಿತ್ತು. ಆದರೆ ಟೆಲಿವಿಷನ್‌ ಪರಿಶೀಲನೆ ನಡೆಸಿದಾಗ ಅವರ ತಪ್ಪು ದೊಡ್ಡ ಪ್ರಮಾಣದ್ದಾಗಿರಲಿಲ್ಲ. ‘ಮೆಸ್ಸಿ ಅವರನ್ನು ಏಕೆ ಶಿಕ್ಷಿಸಲಾಗಿದೆ ಎಂಬುದನ್ನು ಕಾನ್‌ಮೆಬಾಲ್‌ ಸ್ಪಷ್ಟಪಡಿಸಿಲ್ಲ. ಆದರೆ ಅವು ಶಿಸ್ತುಸಂಹಿತೆಗೆ ಸಂಬಂಧಿಸಿದವು ಎಂದು ನಮೂದಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.