ADVERTISEMENT

ಐಎಸ್‌ಎಲ್‌ ಫುಟ್‌ಬಾಲ್: ಒಗ್ಬೆಚೆ ಹ್ಯಾಟ್ರಿಕ್‌; ಎಚ್‌ಎಫ್‌ಸಿಗೆ ಜಯ

ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್ ಟೂರ್ನಿ: ನಾರ್ತ್‌ ಈಸ್ಟ್ ಎದುರಾಳಿ

ಪಿಟಿಐ
Published 24 ಜನವರಿ 2022, 19:30 IST
Last Updated 24 ಜನವರಿ 2022, 19:30 IST
ಸಹ ಆಟಗಾರರ ಜೊತೆ ಸಂಭ್ರಮಿಸಿದ ಬಾರ್ತೊಲೊಮೆ ಒಗ್ಬೆಚೆ
ಸಹ ಆಟಗಾರರ ಜೊತೆ ಸಂಭ್ರಮಿಸಿದ ಬಾರ್ತೊಲೊಮೆ ಒಗ್ಬೆಚೆ   

ವಾಸ್ಕೊ: ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್‌ ಟೂರ್ನಿಯ ಎಂಟನೇ ಆವೃತ್ತಿಯಲ್ಲಿ ಅಮೋಘ ಸಾಧನೆ ಮಾಡುತ್ತಿರುವ ಬಾರ್ತೊಲೊಮೆ ಒಗ್ಬೆಚೆ ಸೋಮವಾರ ಮತ್ತೊಮ್ಮೆ ಮಿಂಚಿದರು. ಹ್ಯಾಟ್ರಿಕ್ ಸಾಧನೆ ಮಾಡಿದ ಅವರು ಹೈದರಾಬಾದ್ ಎಫ್‌ಸಿ ತಂಡಕ್ಕೆ ಭರ್ಜರಿ ಜಯ ತಂದುಕೊಟ್ಟರು.

ತಿಲಕ್ ಮೈದಾನ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಹೈದರಾಬಾದ್‌ 4–0ಯಿಂದ ಎಸ್‌ಸಿ ಈಸ್ಟ್ ಬೆಂಗಾಲ್ ವಿರುದ್ಧ ಜಯ ಗಳಿಸಿತು. 22ನೇ ನಿಮಿಷದಲ್ಲಿ ಮೊದಲ ಗೋಲು ಗಳಿಸಿ ಮುನ್ನಡೆ ತಂದುಕೊಟ್ಟ ಬಾರ್ತೊಲೊಮೆ 44 ಮತ್ತು 74ನೇ ನಿಮಿಷಗಳಲ್ಲೂ ಚೆಂಡನ್ನು ಗುರಿ ಮುಟ್ಟಿಸಿದರು. 45ನೇ ನಿಮಿಷದಲ್ಲಿ ಅನಿಕೇತ್ ಜಾಧವ್‌ ಗೋಲು ಗಳಿಸಿದರು.

ಈ ಗೆಲುವಿನೊಂದಿಗೆ ಹೈದರಾಬಾದ್‌ ಎಫ್‌ಸಿ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು. ತಂಡ 12 ಪಂದ್ಯಗಳಲ್ಲಿ 5 ಜಯದೊಂದಿಗೆ 20 ಪಾಯಿಂಟ್ ಗಳಿಸಿದೆ.

ADVERTISEMENT

ಮುಂಬೈ ಸಿಟಿಗೆ ನಾರ್ತ್ ಈಸ್ಟ್ ಯುನೈಟೆಡ್‌ ಎದುರಾಳಿ: ಫತೋರ್ಡದಲ್ಲಿ ಮಂಗಳವಾರ ನಡೆಯಲಿರುವ ಪಂದ್ಯದಲ್ಲಿ ಮುಂಬೈ ಸಿಟಿ ಎಫ್‌ಸಿ ಮತ್ತು ನಾರ್ತ್ ಈಸ್ಟ್ ಯುನೈಟೆಡ್‌ ಪಂದ್ಯಗಳು ಮೂಖಾಮುಖಿಯಾಗಲಿವೆ. ಸತತ ಐದು ಪಂದ್ಯಗಳಲ್ಲಿ ಗೆಲುವು ಕಾಣದ ಮುಂಬೈ ಸಿಟಿ ಎಫ್‌ಸಿ ತಂಡ ಜಯದ ವಿಶ್ವಾಸದಲ್ಲಿದೆ.

ಸದ್ಯ 11 ಪಂದ್ಯಗಳಿಂದ 17 ಪಾಯಿಂಟ್ಸ್ ಕಲೆಹಾಕಿರುವ ಮುಂಬೈ ಈ ಋತುವಿನಲ್ಲಿ ಮೊದಲ ಬಾರಿ ಅಗ್ರ ನಾಲ್ಕರ ಪಟ್ಟಿಯಿಂದ ಹೊರಬಿದ್ದಿದೆ. ಸದ್ಯ ತಂಡವು ಐದನೇ ಸ್ಥಾನದಲ್ಲಿದೆ.

ನಾರ್ತ್‌ಈಸ್ಟ್ ಯುನೈಟೆಡ್ ತಂಡವು 13 ಪಂದ್ಯಗಳಿಂದ ಕೇವಲ ಒಂಬತ್ತು ಪಾಯಿಂಟ್ಸ್ ಗಳಿಸಿದ್ದು, ಸದ್ಯ ಕೊನೆಯ ಸ್ಥಾನದಲ್ಲಿದೆ. ಮುಂಬೈ ತಂಡವು ನಾರ್ತ್‌ಈಸ್ಟ್ ಎದುರು ಆಡಿದ ಕಳೆದ ಆರು ಪಂದ್ಯಗಳಲ್ಲಿ ಗೆದ್ದಿಲ್ಲ. ಅವುಗಳ ಪೈಕಿ ನಾಲ್ಕರಲ್ಲಿ ಸೋಲು ಕಂಡಿದೆ.

ಪಂದ್ಯ ಆರಂಭ: ರಾತ್ರಿ 7.30

ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.