ADVERTISEMENT

ಫ್ರಾನ್ಸ್‌ ಐತಿಹಾಸಿಕ ಸಾಧನೆ: ರಾಮನಾಥ ಕೋವಿಂದ್‌, ಮೋದಿ ಅಭಿನಂದನೆ

​ಪ್ರಜಾವಾಣಿ ವಾರ್ತೆ
Published 16 ಜುಲೈ 2018, 4:38 IST
Last Updated 16 ಜುಲೈ 2018, 4:38 IST
ವಿಶ್ವಕಪ್‌ ಗೆದ್ದ ಫ್ರಾನ್ಸ್ ಆಟಗಾರನ ಸಂಭ್ರಮ ಚಿತ್ರ: ರಾಯಿಟರ್ಸ್‌
ವಿಶ್ವಕಪ್‌ ಗೆದ್ದ ಫ್ರಾನ್ಸ್ ಆಟಗಾರನ ಸಂಭ್ರಮ ಚಿತ್ರ: ರಾಯಿಟರ್ಸ್‌   

ನವದೆಹಲಿ:ಕ್ರೊವೇಷ್ಯಾ ವಿರುದ್ಧದ ಪೈನಲ್‌ ಪಂದ್ಯದಲ್ಲಿ ಗೆಲುವು ಸಾಧಿಸಿ ಫಿಫಾ ವಿಶ್ವಕಪ್‌ಗೆ ಮುತ್ತಿಟ್ಟ ಫ್ರಾನ್ಸ್‌ ತಂಡದ ಯುವಪಡೆಗೆ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ಶುಭಕೋರಿದ್ದಾರೆ.

ಲುಜ್‌ನಿಕಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಫೈನಲ್‌ನಲ್ಲಿ ಫ್ರಾನ್ಸ್‌ ತಂಡವು 4–2 ಗೋಲುಗಳಿಂದ ಕ್ರೊವೇಷ್ಯಾ ತಂಡವನ್ನು ಮಣಿಸಿತು. ಈ ಮೂಲಕ ಫ್ರಾನ್ಸ್ ಎರಡನೇ ಬಾರಿ ಪ್ರಶಸ್ತಿ ಮುಡಿಗೇರಿಸಿಕೊಂಡಿತು.

ಫ್ರಾನ್ಸ್ ಆಟಗಾರರ ಆಟಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವ ರಾಮನಾಥ ಕೋವಿಂದ್ ಅವರು, ಉತ್ತಮ ಆಟ ಪ್ರದರ್ಶಿಸಿದ ಕೊವೇಷ್ಯಾ ತಂಡಕ್ಕೂ ಅಭಿನಂದಿಸಿದ್ದಾರೆ.

ADVERTISEMENT

‘ಫಿಫಾ ವಿಶ್ವಕಪ್‌ ಗೆದ್ದ ಫ್ರಾನ್ಸ್‌ ತಂಡದ ಆಟಗಾರರಿಗೆ ಅಭಿನಂದನೆಗಳು! ಕೊವೇಷ್ಯಾ ತಂಡಕ್ಕೆ ವಿಶೇಷ ಅಭಿನಂದನೆಗಳು’ ಎಂದು ರಾಮನಾಥ ಕೋವಿಂದ್‌ ಅವರು ಟ್ವಿಟ್‌ ಮಾಡಿದ್ದಾರೆ.

ಪಂದ್ಯಾವಳಿಯ ಉದ್ದಕ್ಕೂ ತಮ್ಮ ಅದ್ಭುತ ಪ್ರದರ್ಶನ ತೋರಿದ ಫ್ರಾನ್ಸ್ ತಂಡಕ್ಕೆ ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ.

‘ಅತ್ಯುತ್ತಮ ಪಂದ್ಯ’ ಫಿಫಾ ವಿಶ್ವಕಪ್‌ ಗೆದ್ದ ಫ್ರಾನ್ಸ್‌ತಂಡಕ್ಕೆ ಅಭಿನಂದನೆಗಳು. ಅವರು ಪಂದ್ಯದುದ್ದಕ್ಕೂ ಅದ್ಭುತ ಪ್ರದರ್ಶನ ನೀಡಿದರು. ಇದೇ ಸಂದರ್ಭದಲ್ಲಿ ಉತ್ಸಾಹಪೂರ್ಣ ಆಟವಾಡಿದ ಕ್ರೊವೇಷ್ಯಾ ತಂಡವನ್ನೂ ಅಭಿನಂದಿಸುತ್ತೇನೆ. ವಿಶ್ವಕಪ್‌ನಲ್ಲಿ ಅವರ ಸಾಧನೆ ಐತಿಹಾಸಿಕವಾಗಿದೆ ಎಂದು ನರೇಂದ್ರ ಮೋದಿ ಟ್ವೀಟ್‌ ಮಾಡಿದ್ದಾರೆ.

ತಿಂಗಳ ಕಾಲ ನಡೆದ ಪಂದ್ಯಾವಳಿಗಳನ್ನು ಯಶಸ್ವಿಯಾಗಿ ಆಯೋಜಿಸಿದ್ದಕ್ಕಾಗಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಮೋದಿ ಶ್ಲಾಘಿಸಿದ್ದಾರೆ.

ಫಿಫಾ ವಿಶ್ವಕಪ್‌ 2018ರ ಕೂಟದ ಯಶಸ್ವಿ ಸಂಘಟನೆಗೆ ನಾನು ರಷ್ಯಾ ಅಧ್ಯಕ್ಷ ವ್ಲಾಟಿಮಿರ್‌ ಪುಟಿನ್‌ ಮತ್ತು ಜನರನ್ನು ಅಭಿನಂದಿಸುತ್ತೇನೆ. ಪಂದ್ಯಾವಳಿ ಸ್ಮರಣೀಯವಾಗಿದೆ ಮತ್ತು ಸಾಕಷ್ಟು ಸಂಖ್ಯೆಯಲ್ಲಿ ಜನ ವೀಕ್ಷಿಸಿದ್ದಾರೆ ಎಂದು ನರೇಂದ್ರ ಮೋದಿ ಮತ್ತೊಂದು ಟ್ವಿಟ್‌ ಮಾಡಿದ್ದಾರೆ.

* ಇದನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.