ADVERTISEMENT

ವಿವಾದಗಳ ನಡುವೆಯೇ ವಿಶ್ವಕಪ್‌ ಟೂರ್ನಿಗೆ ಕ್ಷಣಗಣನೆ: ಕತಾರ್‌ಗೆ ಪ್ರಮುಖ ತಂಡಗಳು

ಏಜೆನ್ಸೀಸ್
Published 15 ನವೆಂಬರ್ 2022, 20:46 IST
Last Updated 15 ನವೆಂಬರ್ 2022, 20:46 IST
ಅರ್ಜೆಂಟೀನಾ ತಂಡದ ಲಯೊನೆಲ್‌ ಮೆಸ್ಸಿ (ಮಧ್ಯ) ಅವರು ಅಬುಧಾಬಿಯಲ್ಲಿ ಸಹ ಆಟಗಾರರ ಜತೆ ಅಭ್ಯಾಸ ನಡೆಸಿದರು –ಎಎಫ್‌ಪಿ ಚಿತ್ರ
ಅರ್ಜೆಂಟೀನಾ ತಂಡದ ಲಯೊನೆಲ್‌ ಮೆಸ್ಸಿ (ಮಧ್ಯ) ಅವರು ಅಬುಧಾಬಿಯಲ್ಲಿ ಸಹ ಆಟಗಾರರ ಜತೆ ಅಭ್ಯಾಸ ನಡೆಸಿದರು –ಎಎಫ್‌ಪಿ ಚಿತ್ರ   

ದೋಹಾ: ಫಿಫಾ ವಿಶ್ವಕಪ್‌ ಟೂರ್ನಿಯ ಆರಂಭಕ್ಕೆ ಕೆಲವೇ ದಿನಗಳು ಬಾಕಿಯಿದ್ದು, ಫುಟ್‌ಬಾಲ್‌ ಪ್ರೇಮಿಗಳ ಚಿತ್ತ ಪುಟ್ಟ ಅರಬ್ ರಾಷ್ಟ್ರ ಕತಾರ್‌ನತ್ತ ನೆಟ್ಟಿದೆ.

ನ.20 ರಂದು ಆರಂಭವಾಗುವ ಟೂರ್ನಿಯಲ್ಲಿ ಪಾಲ್ಗೊಳ್ಳಲು ಒಂದೊಂದೇ ತಂಡಗಳು ದೋಹಾಕ್ಕೆ ಬಂದಿಳಿಯುತ್ತಿವೆ. ಪ್ರಮುಖ ತಂಡಗಳಾದ ಇಂಗ್ಲೆಂಡ್‌ ಮತ್ತು ನೆದ ರ್ಲೆಂಡ್ಸ್‌ನ ಆಟಗಾರರು ಮಂಗಳವಾರ ಕತಾರ್‌ಗೆ ಪ್ರಯಾಣ ಬೆಳೆಸಿದ್ದಾರೆ.

ವಲಸೆ ಕಾರ್ಮಿಕರು ಮತ್ತು ಎಲ್‌ಜಿಬಿಟಿ ಸಮುದಾಯದವರ ಬಗ್ಗೆ ಕತಾರ್‌ ತಳೆದಿರುವ ಧೋರಣೆಗೆ ಟೂರ್ನಿಯಲ್ಲಿ ಪಾಲ್ಗೊಳ್ಳುವ ಕೆಲವು ತಂಡಗಳು ಈಗಾಗಲೇ ಆಕ್ಷೇಪ ವ್ಯಕ್ತಪಡಿಸಿವೆ. ಮಹಿಳೆಯರ ಹಕ್ಕುಗಳನ್ನು ಮೊಟಕುಗೊಳಿಸಲಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ.

ADVERTISEMENT

ಆದರೆ ಟೂರ್ನಿ ಆರಂಭವಾಗುವುದರೊಂದಿಗೆ ವಿವಾದಗಳು ತಣ್ಣಗಾಗಬಹುದು ಎಂಬ ವಿಶ್ವಾಸದಲ್ಲಿ ಸಂಘಟಕರು ಇದ್ದಾರೆ. ಜಪಾನ್‌, ಆಸ್ಟ್ರೇಲಿಯಾ ಮತ್ತು ಸ್ವಿಟ್ಜರ್ಲೆಂಡ್‌ ತಂಡಗಳು ಈಗಾಗಲೇ ದೋಹಾಕ್ಕೆ ಬಂದಿವೆ. ಕೆಲವು ತಂಡಗಳು ಕತಾರ್‌ನ ನೆರೆಯ ದೇಶ ಗಳಾದ ಬಹರೇನ್, ಯುಎಇಗೆ ಬಂದಿಳಿದಿವೆ. ಅರ್ಜೆಂಟೀನಾ ತಂಡದ ಆಟಗಾರರು ಅಬುಧಾಬಿಯಲ್ಲಿದ್ದು, ಅಭ್ಯಾಸ ನಡೆಸಿದ್ದಾರೆ. ಸ್ಟಾರ್ ಆಟಗಾರ ಲಯೊನೆಲ್‌ ಮೆಸ್ಸಿ ಅವರು ಸೋಮವಾರ ತಂಡವನ್ನು ಸೇರಿಕೊಂಡಿದ್ದಾರೆ.

‘ನಮ್ಮ ತಂಡ ಸಮತೋಲನದಿಂದ ಕೂಡಿದೆ. ವಿಶ್ವಕಪ್‌ನಂತಹ ಪ್ರಮುಖ ಟೂರ್ನಿಯಲ್ಲಿ ಎಚ್ಚರಿಕೆಯ ಆಟ ಅಗತ್ಯ. ಹಂತ ಹಂತವಾಗಿ ಮೇಲಕ್ಕೇರುವುದು ನಮ್ಮ ಗುರಿ’ ಎಂದು ಮೆಸ್ಸಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಫಿಫಾ ಅಭಿಯಾನ: ‘ವಿಶ್ವವನ್ನು ಫುಟ್‌ಬಾಲ್‌ ಒಗ್ಗೂಡಿಸುತ್ತದೆ’ ಎಂಬ ಹೆಸರಿನ ಅಭಿಯಾನವನ್ನು ಫಿಫಾ ಆರಂಭಿಸಿದ್ದು, ಖ್ಯಾತ ಆಟಗಾರರಾದ ನೇಮರ್‌, ಕರೀಂ ಬೆಂಜೆಮಾ ಮತ್ತು ಎಡ್ವರ್ಡ್‌ ಮೆಂಡಿ ಇರುವ ವಿಡಿಯೊವನ್ನು ಬಿಡುಗಡೆಗೊಳಿಸಿದೆ.

ಬೆಲ್ಜಿಯಂ ತಂಡದಲ್ಲಿ ಭಾರತದ ವಿನಯ್‌
ನವದೆಹಲಿ (ಪಿಟಿಐ): ಭಾರತದ ವಿನಯ್‌ ಮೆನನ್‌ ಈ ಬಾರಿಯ ಫಿಫಾ ವಿಶ್ವಕಪ್ ಫುಟ್‌ಬಾಲ್‌ ಟೂರ್ನಿಯಲ್ಲಿ ಬೆಲ್ಜಿಯಂ ತಂಡದ ಭಾಗವಾಗಿದ್ದಾರೆ.

ಕೇರಳದ ವಿನಯ್‌, ಆಟಗಾರರ ದೈಹಿಕ ಮತ್ತು ಮಾನಸಿಕ ಆರೋಗ್ಯ ನೋಡಿಕೊಳ್ಳುವ ‘ವೆಲ್‌ನೆಸ್‌ ಕೋಚ್‌’ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

‘ವಿಶ್ವಕಪ್‌ನಲ್ಲಿ ಭಾಗವಹಿಸುವ ಮೂಲಕ ನನ್ನದೇ ರೀತಿಯಲ್ಲಿ ಭಾರತಕ್ಕೆ ಹೆಮ್ಮೆ ತರುವ ಕೆಲಸ ಮಾಡುತ್ತಿದ್ದು, ಖುಷಿಯಾಗುತ್ತಿದೆ‘ ಎಂದು ವಿನಯ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.