ADVERTISEMENT

ಐಎಸ್‌ಎಲ್‌: ದಕ್ಷಿಣ ಡರ್ಬಿಯಲ್ಲಿ ಬಿಎಫ್‌ಸಿ–ಸಿಎಫ್‌ಸಿ ಹಣಾಹಣಿ

ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್ ಟೂರ್ನಿ: ಚೆನ್ನೈಯಿನ್ ಎಫ್‌ಸಿಗೆ ಎಲ್ಲ ಪಂದ್ಯಗಳಲ್ಲಿ ಗೆಲುವು ಅನಿವಾರ್ಯ

ಪಿಟಿಐ
Published 4 ಫೆಬ್ರುವರಿ 2021, 13:15 IST
Last Updated 4 ಫೆಬ್ರುವರಿ 2021, 13:15 IST
ಕ್ಲೀಟನ್ ಸಿಲ್ವಾ (ಎಡ) ಮತ್ತು ಸುನಿಲ್ ಚೆಟ್ರಿ ಅವರು ಬಿಎಫ್‌ಸಿಗೆ ನಿರೀಕ್ಷೆ ತುಂಬಿದ್ದಾರೆ –ಐಎಸ್‌ಎಲ್ ಮೀಡಿಯಾ ಚಿತ್ರ
ಕ್ಲೀಟನ್ ಸಿಲ್ವಾ (ಎಡ) ಮತ್ತು ಸುನಿಲ್ ಚೆಟ್ರಿ ಅವರು ಬಿಎಫ್‌ಸಿಗೆ ನಿರೀಕ್ಷೆ ತುಂಬಿದ್ದಾರೆ –ಐಎಸ್‌ಎಲ್ ಮೀಡಿಯಾ ಚಿತ್ರ   

ಫತೋರ್ಡ, ಗೋವಾ: ಎಂಟು ಪಂದ್ಯಗಳ ನಂತರ ಜಯದ ಹಾದಿಗೆ ಮರಳಿರುವ ಬೆಂಗಳೂರು ಫುಟ್‌ಬಾಲ್ ಕ್ಲಬ್ (ಬಿಎಫ್‌ಸಿ) ಮತ್ತೊಂದು ಕಠಿಣ ಸವಾಲಿಗೆ ಸಜ್ಜಾಗಿದ್ದು ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್‌ ಟೂರ್ನಿಯ ಶುಕ್ರವಾರದ ಪಂದ್ಯದಲ್ಲಿ ಚೆನ್ನೈಯಿನ್ ಎಫ್‌ಸಿ ವಿರುದ್ಧ ಸೆಣಸಲಿದೆ. ಏಳು–ಬೀಳುಗಳ ಹಾದಿಯಲ್ಲಿ ಸಾಗುತ್ತಿರುವ ಚೆನ್ನೈಯಿನ್ ಎಫ್‌ಸಿ ಎದುರಿನ ಈ ‘ದಕ್ಷಿಣ ಡರ್ಬಿ’ ಎರಡೂ ತಂಡಗಳು ಪ್ರಬಲ ಪೈಪೋಟಿ ನೀಡುವ ಸಾಧ್ಯತೆ ಇದ್ದು ಪಂದ್ಯ ರೋಚಕವಾಗುವ ನಿರೀಕ್ಷೆಯಲ್ಲಿ ವೀಕ್ಷಕರಿದ್ದಾರೆ.

ಆರಂಭದ ಆರು ಪಂದ್ಯಗಳಲ್ಲಿ ಮೂರು ಜಯದ ನಂತರದ ಎಂಟು ಪಂದ್ಯಗಳಲ್ಲಿ ಬಿಎಫ್‌ಸಿ ಭಾರಿ ಟೀಕೆಗೆ ಒಳಗಾಗಿತ್ತು. ಆ ಎಂಟು ಪಂದ್ಯಗಳಲ್ಲಿ ಸತತ ನಾಲ್ಕು ಸೋಲು ಸೇರಿದಂತೆ ಐದು ಪಂದ್ಯಗಳಲ್ಲಿ ತಂಡ ಸೋಲಿನ ಸುಳಿಯಲ್ಲಿ ಬಿದ್ದಿತ್ತು. ಒಟ್ಟು 11 ಪಂದ್ಯಗಳಲ್ಲಿ ಗೋಲುಗಳನ್ನು ಬಿಟ್ಟುಕೊಟ್ಟಿತ್ತು. ಕಳೆದ ಪಂದ್ಯದಲ್ಲಿ ಎಸ್‌ಸಿ ಈಸ್ಟ್ ಬೆಂಗಾಲ್ ವಿರುದ್ಧ 2–0ಯಿಂದ ಜಯ ಗಳಿಸಿದ ತಂಡ ‘ಕ್ಲೀನ್ ಶೀಟ್’ ಗೌರವಕ್ಕೂ ಪಾತ್ರವಾಗಿ ನಿಟ್ಟುಸಿರು ಬಿಟ್ಟಿತ್ತು. ಆ ಪಂದ್ಯ ಈ ಬಾರಿಯ ತಂಡದ 15 ಪಂದ್ಯಗಳಲ್ಲಿ ಅತ್ಯುತ್ತಮವಾದದ್ದು ಎಂಬ ಪ್ರಶಂಸೆ ವ್ಯಕ್ತವಾಗಿತ್ತು.

ಹೀಗಾಗಿ ವಿಶ್ವಾಸದಲ್ಲಿರುವ ತಂಡಕ್ಕೆ ಪೆಟ್ಟು ನೀಡಿ ಗೆಲುವಿನ ಹಾದಿಗೆ ಮರಳಲು ಚೆನ್ನೈಯಿನ್ ಎಫ್‌ಸಿ ಪ್ರಯತ್ನಿಸಲಿದೆ. ಮೊದಲ ಲೆಗ್‌ನಲ್ಲಿ ಉಭಯ ತಂಡಗಳು ಮುಖಾಮುಖಿಯಾದಾಗ ಬೆಂಗಳೂರು 1–0ಯಿಂದ ಗೆಲುವು ಸಾಧಿಸಿತ್ತು. ಚೆನ್ನೈಯಿನ್‌ ಎಫ್‌ಸಿ ಈ ಬಾರಿ ಸೆಟ್‌–ಪೀಸ್‌ ಗೋಲುಗಳ ಮೂಲಕ ಗಮನ ಸೆಳೆದಿದೆ. ಆದರೆ ರಕ್ಷಣಾ ವಿಭಾಗದ ದೌರ್ಬಲ್ಯಗಳನ್ನು ಮೀರಿನಿಲ್ಲಲು ತಂಡಕ್ಕೆ ಇನ್ನೂ ಸಾಧ್ಯವಾಗಲಿಲ್ಲ. ತಂಡ ಒಟ್ಟು 16 ಗೋಲುಗಳನ್ನು ಬಿಟ್ಟುಕೊಟ್ಟಿದ್ದು ಈ ಪೈಕಿ ಎಂಟನ್ನು ರಕ್ಷಣಾ ವಿಭಾಗಕ್ಕೆ ಚಳ್ಳೆಹಣ್ಣು ತಿನ್ನಿಸಿ ಎದುರಾಳಿ ತಂಡಗಳು ಗಳಿಸಿವೆ.

ADVERTISEMENT

ಫಾರ್ವರ್ಡರ್‌ಗಳು ಕೂಡ ನಿರೀಕ್ಷೆಗೆ ತಕ್ಕಂತೆ ಮಿಂಚಲಿಲ್ಲ. ಈ ವರೆಗಿನ ಎಂಟು ಪಂದ್ಯಗಳಲ್ಲಿ ತಂಡ ಗೋಲು ಗಳಿಸಲಿಲ್ಲ. ಅವಕಾಶಗಳನ್ನು ಸೃಷ್ಟಿಸಿಕೊಳ್ಳಲು ಯಶಸ್ವಿಯಾಗುತ್ತಿದ್ದರೂ ಚೆಂಡನ್ನು ಗುರಿ ಮುಟ್ಟಿಸಲಾಗುತ್ತಿಲ್ಲ ಎಂಬುದು ತಂಡದ ಆತಂಕಕ್ಕೆ ಕಾರಣವಾಗಿದೆ. ಈ ಅಂಶವನ್ನು ಗಂಭೀರವಾಗಿ ಪರಿಗಣಿಸಿ ಬೆಂಗಳೂರು ತಂಡದ ವಿರುದ್ಧ ಕಣಕ್ಕೆ ಇಳಿಯಬೇಕಾಗಿದೆ ಎಂದು ಕೋಚ್ ಸಾಬಾ ಲಾಜ್ಲೊ ಆಟಗಾರರಿಗೆ ಸಲಹೆ ನೀಡಿದ್ದಾರೆ.

ರಾಹುಲ್ ಭೇಕೆ, ಲಿಯಾನ್ ಆಗಸ್ಟಿನ್ ಮತ್ತು ಜುವಾನ್ ಗೊಂಜಾಲೆಸ್ ಅವರು ಚೆನ್ನೈಯಿನ್ ಎದುರಿನ ಪಂದ್ಯಕ್ಕೆ ಬಿಎಫ್‌ಸಿಗೆ ಲಭ್ಯ ಇರುವುದಿಲ್ಲ. ಎದುರಾಳಿ ತಂಡದ ವಿದೇಶಿ ಆಟಗಾರರೆಲ್ಲರೂ ಈ ಪಂದ್ಯಕ್ಕೆ ಲಭ್ಯ ಇರುವುದು ಬಿಎಫ್‌ಸಿ ಕೋಚ್ ನೌಶಾದ್ ಮೂಸಾ ಅವರನ್ನು ಆತಂಕಕ್ಕೆ ಈಡುಮಾಡಿದೆ. ‘ಸೆಂಟ್ರಲ್ ಡಿಫೆಂಡರ್‌ಗಳು ಆಡದೇ ಇದ್ದ ಕಾರಣ ಚೆನ್ನೈಯಿನ್ ಎಫ್‌ಸಿಗೆ ಈ ವರೆಗೆ ನಿರೀಕ್ಷೆಗೆ ತಕ್ಕ ಫಲ ಸಿಗಲಿಲ್ಲ. ಆದರೆ ನಾಳಿನ ಪಂದ್ಯದಲ್ಲಿ ಈ ಕೊರತೆ ಇರುವುದಿಲ್ಲ. ತಂಡಕ್ಕೆ ಹೊಸದಾಗಿ ಸೇರಿಕೊಂಡಿರುವ ಮ್ಯಾನ್ಯುಯೆಲ್ ಲಾಂಜ್ರೊಟೆ ಈ ಪಂದ್ಯದಲ್ಲಿ ಕಣಕ್ಕೆ ಇಳಿಯುವ ಸಾಧ್ಯತೆ ಇದ್ದು ಅವರ ಮೇಲೆ ವಿಶೇಷ ನಿಗಾ ಇರಿಸಬೇಕಾಗುತ್ತದೆ’ ಎಂದು ಮೂಸಾ ಅಭಿಪ್ರಾಯಪಟ್ಟರು.

‘ಮುಂದಿನ ಪಂದ್ಯಗಳೆಲ್ಲವನ್ನೂ ಗೆಲುವು ಅನಿವಾರ್ಯ ಸ್ಥಿತಿಯಲ್ಲಿ ಚೆನ್ನೈಯಿನ್ ಎಫ್‌ಸಿ ಇದೆ. ’ಅಗ್ರ ನಾಲ್ಕರಲ್ಲಿ ಸ್ಥಾನ ಗಳಿಸಬೇಕು ಎಂದಿದ್ದರೆ ಮುಂದಿನ ಎಲ್ಲ ಪಂದ್ಯಗಳಲ್ಲೂ ಅಮೋಘ ಸಾಮರ್ಥ್ಯ ತೋರಬೇಕು. ಮುಂದಿನ ಎಲ್ಲ ಪಂದ್ಯಗಳೂ ನಮಗೆ ಫೈನಲ್ ಇದ್ದ ಹಾಗೆ. ಸದ್ಯ ಬೆಂಗಳೂರು ತಂಡದ ಸವಾಲಿಗೆ ಉತ್ತರಿಸುವುದು ಹೇಗೆ ಎಂಬುದರ ಮೇಲೆ ಗಮನ ನೀಡಲಾಗಿದೆ’ ಎಂದು ಲಾಜ್ಲೊ ತಿಳಿಸಿದರು‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.